Site icon Vistara News

ಚಡ್ಡಿ ಸುಟ್ಟು ಜೈಲು ಸೇರಿರುವ ಕಾರ್ಯಕರ್ತರನ್ನು ಭೇಟಿಯಾದ ಪರಮೇಶ್ವರ್

Parameshwar

ತುಮಕೂರು: ‌ಪಠ್ಯ ಪರಿಷ್ಕರಣೆ ವಿರೋಧಿಸಿ ಶಿಕ್ಷಣ ಸಚಿವ ನಾಗೇಶ್‌ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿ ಜೈಲು ಸೇರಿದ್ದ ಎನ್ಎಸ್‌ಯುಐ ಕಾರ್ಯಕರ್ತರನ್ನು ಜಿಲ್ಲಾ ಕಾರಾಗೃಹದಲ್ಲಿ ಶಾಸಕ, ಮಾಜಿ ಡಿಸಿಎಂ ಜಿ.ಪರಮೇಶ್ವರ್ ಬುಧವಾರ ಭೇಟಿ ಮಾಡಿ ಮಾತುಕತೆ ನಡೆಸಿದರು.

ಸ್ಥಳೀಯ ಕಾಂಗ್ರೆಸ್‌ ನಾಯಕರು ಸಮಸ್ಯೆಗಳನ್ನು ಆಲಿಸುತ್ತಿಲ್ಲ ಎಂದು ಜೈಲಿನಲ್ಲಿರುವ ವಿದ್ಯಾರ್ಥಿಗಳ ಪಾಲಕರು ಆಳಲು ತೋಡಿಕೊಂಡ ಹಿನ್ನೆಲೆಯಲ್ಲಿ ಪರಮೇಶ್ವರ್‌ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಬಳಿದ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ ಅವರು, ಅಂಬೇಡ್ಕರ್, ಬಸವಣ್ಣ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ವಿಚಾರಗಳನ್ನು ಪಠ್ಯ ಪರಿಷ್ಕರಣೇಯಲ್ಲಿ ತಿರುಚಲಾಗಿದೆ. ಹಾಗಾಗಿ ವಿದ್ಯಾರ್ಥಿ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆ ಅವರ ಹಕ್ಕು. ಆದರೆ ಸಚಿವರ ಮನೆಯೊಳಗೆ ನುಗ್ಗಿ, ಬೆಂಕಿ ಹಚ್ಚಲು ಯತ್ನಿಸಿದರು ಎಂದು ಸುಳ್ಳು ದೂರು ದಾಖಲಿಸಲಾಗಿದೆ ಎಂದು ಕಿಡಿಕಾರಿದರು.

ಈ ಪ್ರಕರಣದಲ್ಲಿ ಕಾರ್ಯಕರ್ತರನ್ನು ಬೇಲ್ ಮೂಲಕ ಹೊರತಂದು ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ. ವಿದ್ಯಾರ್ಥಿಗಳ ಮನಸ್ಸು ಹಾಳು ಮಾಡುವ ಕೆಲಸವನ್ನು ಸರ್ಕಾರ ಮಾಡಬಾರದು. ಅಂಬೇಡ್ಕರ್ ಸಂವಿಧಾನ ಶಿಲ್ಪಿ ಅಲ್ಲ ಎನ್ನುತ್ತಾರೆ, ಬಸವಣ್ಣ ಬಗ್ಗೆ ಬೇರೆ ರೀತಿ ಬರೆದರೆ ಹೇಗೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ | ತುಮಕೂರು ಜೈಲಿನಲ್ಲಿ NSUI ಕಾರ್ಯಕರ್ತನ ಭೇಟಿ ಮಾಡಿದ ಡಿ.ಕೆ. ಶಿವಕುಮಾರ್‌

ಪ್ರವಾದಿ ಮೊಹಮ್ಮದ್‌ ಪೈಗಂಬರ್ ವಿರುದ್ಧ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಆಕ್ಷೇಪಾರ್ಹ ಹೇಳಿಕೆ ನೀಡಿರುವುದಕ್ಕೆ ಭಾರತ ಕ್ಷಮೆ ಕೇಳಬೇಕು ಎಂದು ಇಸ್ಲಾಮಿಕ್‌ ರಾಷ್ಟ್ರಗಳು ಒತ್ತಾಯ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರದಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿದೆ. ಯಾರಾದರೂ ನಾಯಕರು ಹೇಳಿಕೆ ಕೊಟ್ಟರೆ ಬಿಜೆಪಿ ಅದನ್ನು ಸಮರ್ಥಿಸಿಕೊಳ್ಳಬೇಕು, ಇಲ್ಲ ಆ ಹೇಳಿಕೆ ನಮ್ಮದಲ್ಲ ಎಂದು ಹೇಳಬೇಕು. ಬೇರೆ ದೇಶಗಳಿಂದ ಪ್ರತಿಕ್ರಿಯೆ ಬರುವ ಮೊದಲು ಬಿಜೆಪಿ ಅದಕ್ಕೆ ಸ್ಪಷ್ಟನೆ ಕೊಡಬೇಕಿತ್ತು. ಈಗ ಆ ಹೇಳಿಕೆಯಿಂದ ನಾವು ದೂರ ಇದ್ದೇವೆ ಎನ್ನುತ್ತಾರೆ. ಇವತ್ತು ಭಾರತದ ಮಾನ ಹರಾಜು ಹಾಕುವ ಸ್ಥಿತಿಗೆ ತಂದಿದ್ದಾರೆ. ಹೋರದೇಶಗಳು, ಭಯೋತ್ಪಾದಕರಿಂದ ಬೆದರಿಕೆಗಳು ಬರುತ್ತಿವೆ, ಇದಕ್ಕೆ ಬಿಜೆಪಿ ಸರ್ಕಾರವೇ ನೇರ ಹೊಣೆ. ಬಿಜೆಪಿ ಸರ್ಕಾರ ನಮ್ಮ ದೇಶವನ್ನು ಪ್ರತಿನಿಧಿಸುತ್ತಿರುವ ಹಿನ್ನೆಲೆಯಲ್ಲಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಫೋಟೋಗಾಗಿ ಮಹಿಳೆಯರ ಜಟಾಪಟಿ
ಕೇಂದ್ರ ಜೈಲು ಆವರಣದಲ್ಲಿ ಕಾಂಗ್ರೆಸ್‌ನ ಇಬ್ಬರು ಮಹಿಳಾ ಕಾರ್ಯಕರ್ತೆಯರ ನಡುವೆ ಮಾತಿನ ಜಟಾಪಟಿ ನಡೆಯಿತು. ಎನ್‌ಎಸ್‌ಯುಐ ಕಾರ್ಯಕರ್ತರನ್ನು ವಿಚಾರಿಸಲು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಆಗಮಿಸಿದ್ದಾಗ ಕೆಲ ಕಾರ್ಯಕರ್ತರು ಅವರ ಜತೆ ಫೋಟೋ ತೆಗೆಸಿಕೊಳ್ಳಲು ಮುಂದಾದರು. ಫೋಟೋಗೆ ಪೋಸು ಕೊಡುವ ವೇಳೆ ಇಬ್ಬರು ಮಹಿಳಾ ಕಾರ್ಯಕರ್ತೆಯರ ನಡುವೆ ತಳ್ಳಾಟ, ನೂಕಾಟ ನಡೆಯಿತು. ಪರಮೇಶ್ವರ್ ನಿರ್ಗಮಿಸುತ್ತಿದ್ದಂತೆ ಜಡೆಜಗಳ ಸ್ಫೋಟಗೊಂಡಿದೆ. ಇಬ್ಬರು ಪರಸ್ಪರ ನಿಂದಿಸಿಕೊಂಡು ಜಟಾಪಟಿಗೆ ಮುಂದಾದರು. ಆಗ ಅಲ್ಲೇ ಇದ್ದ ಜಿಲ್ಲಾಧ್ಯಕ್ಷ ರಾಮಕೃಷ್ಣ, ಇನ್ನಿತರ ಮುಖಂಡರು ಬುದ್ಧಿವಾದ ಹೇಳಿ ಪರಿಸ್ಥಿತಿ ಶಾಂತಗೊಳಿಸಿದರು.

ಇದನ್ನೂ ಓದಿ | ರಾಜಸ್ಥಾನದಲ್ಲಿ ರೆಸಾರ್ಟ್ ಪಾಲಿಟಿಕ್ಸ್‌ : ಜಾದೂ ಮೊರೆ ಹೊಕ್ಕ ಕಾಂಗ್ರೆಸ್, ಯೋಗ ನೆಚ್ಚಿದ ಬಿಜೆಪಿ

Exit mobile version