Site icon Vistara News

ಮಂಗಳೂರಿನಲ್ಲಿ ಮಕ್ಕಳ ಕೈಲಿದ್ದ ರಾಖಿ ಕಿತ್ತೆಸೆದ ಆರೋಪ, ಶಾಲೆಗೆ ಮುತ್ತಿಗೆ ಹಾಕಿ ಆಕ್ರೋಶ

rakshabandhan

ಮಂಗಳೂರು: ನಗರದ ಹೊರವಲಯದ ಕಾಟಿಪಳ್ಳದಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕರು ಮಕ್ಕಳ ಕೈಯ್ಯಲ್ಲಿದ್ದ ರಕ್ಷಾ ಬಂಧನವನ್ನು ಕಿತ್ತೆಸೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಕೆರಳಿದ ಪೋಷಕರು ಮತ್ತು ಬಿಜೆಪಿ ಕಾರ್ಯಕರ್ತರು ಶಾಲೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಕಾಟಿಪಳ್ಳದ ಇನ್ಫೆಂಟ್ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ಘಟನೆ ನಡೆದಿದೆ. ಗುರುವಾರ ರಕ್ಷಾ ಬಂಧನ ಸಂಭ್ರಮದ ಹಿನ್ನೆಲೆಯಲ್ಲಿ ಮಕ್ಕಳು ರಾಖಿ ಕಟ್ಟಿಕೊಂಡು ಬಂದಿದ್ದರು. ಈ ನಡುವೆ, ಕೆಲವು ಶಿಕ್ಷಕರು ರಕ್ಷಾ ಬಂಧನವನ್ನು ಬಿಚ್ಚಿಸಿ ಕಸದ ಬುಟ್ಟಿಗೆ ಎಸೆದಿದ್ದಾರೆ ಎಂದು ಆರೋಪಿಸಲಾಗಿತ್ತು.

ಗುರುವಾರ ಸಂಜೆ ಮಕ್ಕಳು ಮನೆಗೆ ಹೋಗಿ ಈ ವಿಚಾರ ತಿಳಿಸಿದ್ದಾರೆ. ಇದರಿಂದ ಕೆರಳಿದ ಪೋಷಕರು ಸ್ಥಳೀಯ ಮುಖಂಡರಿಗೆ ವಿಷಯ ತಿಳಿಸಿ ಚರ್ಚಿಸಿದ್ದಾರೆ. ಬೆಳಗ್ಗೆ ಶಾಲೆ ಆರಂಭವಾಗುತ್ತಿದ್ದಂತೆಯೇ ಪೋಷಕರು ಮತ್ತು ಬಿಜೆಪಿ ಕಾರ್ಯಕರ್ತರು ಶಾಲೆಗೆ ಆಗಮಿಸಿ ಮುಖ್ಯಶಿಕ್ಷಕ ಮತ್ತು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು. ಬಿಜೆಪಿ ಯುವಮೋರ್ಚಾ ಕಾರ್ಯಕರ್ತರೂ ಶಾಲಾಡಳಿತದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಶಾಲೆಗೆ ಬಂದು ಆಕ್ರೋಶ ವ್ಯಕ್ತಪಡಿಸಿದ ಪೋಷಕರು ಮತ್ತು ಬಿಜೆಪಿ ಕಾರ್ಯಕರ್ತರು

ಫ್ರೆಂಡ್‌ಷಿಪ್‌ ಬ್ಯಾಂಡ್‌ ಅಂದುಕೊಂಡೆ!
ಪೋಷಕರು ‌ಮತ್ತು ಶಿಕ್ಷಕರ ನಡುವೆ ವಾಗ್ವಾದ ಹೆಚ್ಚಾದ ಮಾಹಿತಿ ಪಡೆದ ಸುರತ್ಕಲ್ ಪೊಲೀಸರು ಮಧ್ಯಪ್ರವೇಶ ಮಾಡಿದರು. ಈ ನಡುವೆ, ಇದು ರಕ್ಷಾ ಬಂಧನ ಅಂತ ಗೊತ್ತಿರಲಿಲ್ಲ. ಫ್ರೆಂಡ್ ಶಿಪ್ ಬ್ಯಾಂಡ್ ಅಂದುಕೊಂಡು ತೆಗೆಸಿದ್ದಾಗಿ ಶಿಕ್ಷಕರು ಸಮಜಾಯಿಷಿ ನೀಡಿದರು. ರಕ್ಷಾ ಬಂಧನ ಆಗಿದ್ದರೆ ಯಾವುದೇ ಕಾರಣಕ್ಕೂ ತೆಗೆಸುತ್ತಿರಲಿಲ್ಲ ಎಂದು ಶಾಲಾ ಮುಖ್ಯ ಶಿಕ್ಷಕರು ವಿಷಾದ ವ್ಯಕ್ತಪಡಿಸಿದರು.

ಶಾಲೆಯ ಮುಖ್ಯ ಶಿಕ್ಷಕರಿಗೆ ರಕ್ಷಾ ಬಂಧನ ಕಟ್ಟಿದ ಬಳಿಕ ಪರಿಸ್ಥಿತಿ ತಿಳಿಯಾಯಿತು.

ನನಗೇ ರಕ್ಷಾಬಂಧನ ಕಟ್ಟುತ್ತಿದ್ದರು
ಈ ನಡುವೆ, ಶಿಕ್ಷಕರಿಂದ ತಪ್ಪಾಗಿದೆ ಎಂದು ಒಪ್ಪಿಕೊಂಡ ಶಾಲಾ ಮುಖ್ಯ ಶಿಕ್ಷಕರು ʻʻನಾನು ಎರಡು ತಿಂಗಳ ಹಿಂದಷ್ಟೇ ಇಲ್ಲಿಗೆ ಬಂದಿದ್ದೇನೆ. ನಾನು ಹಿಂದೆ ಕಾಸರಗೋಡಿನಲ್ಲಿದ್ದಾಗ ಅಲ್ಲಿನ ಗೆಳೆಯರು ಬಂದು ನನಗೇ ರಕ್ಷಾ ಬಂಧನ ಕಟ್ಟುತ್ತಿದ್ದರು. ನಾನು ಪ್ರೀತಿಯಿಂದ ಒಪ್ಪಿಕೊಂಡಿದ್ದೇನೆ. ಇನ್ನು ಮುಂದೆ ಈ ರೀತಿ ಆಗುವುದಿಲ್ಲʼʼ ಎಂದು ಸ್ಪಷ್ಟಪಡಿಸಿದರು. ಕೊನೆಗೆ ಪ್ರತಿಭಟನೆಗೆ ಬಂದಿದ್ದ ಕಾರ್ಯಕರ್ತರು ಹೆತ್ತವರು ಮುಖ್ಯ ಶಿಕ್ಷಕರಿಗೆ ರಕ್ಷಾ ಬಂಧನ ಕಟ್ಟಿದರು. ಅಲ್ಲಿಗೆ ಪರಿಸ್ಥಿತಿ ತಿಳಿಯಾಯಿತು. ಈ ನಡುವೆ ಒಂದು ಹಂತದಲ್ಲಿ ಕೆಲವು ಕಾರ್ಯಕರ್ತರು ಶಾಲೆಯಲ್ಲಿರುವ ಎಲ್ಲ ವಿದ್ಯಾರ್ಥಿಗಳಿಗೆ ರಕ್ಷೆ ಕಟ್ಟಲು ಅವಕಾಶ ನೀಡಬೇಕು ಎಂದು ಬೇಡಿಕೆ ಮುಂದಿಟ್ಟಿದ್ದರು. ಶಿಕ್ಷಕರೇ ಮತ್ತೆ ಮಕ್ಕಳ ಕೈಗೆ ರಕ್ಷೆ ಕಟ್ಟುವಂತೆಯೂ ಪೋಷಕರು ಪಟ್ಟು ಹಿಡಿದರು.

ಇದನ್ನೂ ಓದಿ| Video | ವಿಶೇಷವಾಗಿ ರಕ್ಷಾ ಬಂಧನ ಆಚರಿಸಿದ ಪ್ರಧಾನಿ ಮೋದಿ; ಮನೆಗೆ ಬಂದ ಮುದ್ದು ಮಕ್ಕಳು ಯಾರು?

Exit mobile version