Site icon Vistara News

ಪರೇಶ್‌ ಮೇಸ್ತಾ | ಬಿಜೆಪಿಯವರು ಹಿಂದು-ನಾವೆಲ್ಲ ಮುಂದು ಎನ್ನುತ್ತಾರೆ; ಆದರೆ, ಕಾಂಗ್ರೆಸ್‌ಗೆ ಎಲ್ಲರೂ ಒಂದೇ ಎಂದ ಡಿಕೆಶಿ

kumata congress samavesha DKS

ಕುಮಟಾ (ಕಾರವಾರ): ಬಿಜೆಯವರು ಹಿಂದು, ನಾವೆಲ್ಲ ಮುಂದು ಎಂದು ಹೇಳುತ್ತಾರೆ. ಆದರೆ, ಕಾಂಗ್ರೆಸ್‌ನಲ್ಲಿ ಎಲ್ಲ ಸಮುದಾಯಗಳೂ ಒಂದೇ. ಮಾನವೀಯತೆ ನೆಲೆಯಲ್ಲಿ ಇಂದು ಕಾಂಗ್ರೆಸ್ ಪಕ್ಷ ನಿಂತಿದೆ. ಬಿಜೆಪಿಯವರು ಜಾತೀಯತೆಯ ಮೇಲೆ ಚುನಾವಣೆ ಮಾಡುತ್ತಾರೆ. ಹೀಗಾಗಿ ಉತ್ತರ ಕನ್ನಡದ ಮಹಾಜನತೆ ನಮಗೊಂದು ಶಕ್ತಿ ಕೊಡುತ್ತೀರೆಂದು ನಂಬಿ ಬಂದಿದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಹಿಂದು ಕಾರ್ಯಕರ್ತ ಪರೇಶ್‌ ಮೇಸ್ತಾ ಸಾವು ಪ್ರಕರಣ ಸಂಬಂಧ ಕುಮಟಾದಲ್ಲಿ ಗುರುವಾರ (ನ.೨೪) ಏರ್ಪಡಿಸಲಾಗಿರುವ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಉ.ಕ. ಜಿಲ್ಲೆಯ ಜನತೆ ಸಂಕಷ್ಟದಲ್ಲಿ ನರಳುತ್ತಾ ಇದ್ದಾರೆ. ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ನಮ್ಮದು ಡಬ್ಬಲ್ ಎಂಜಿನ್ ಸರ್ಕಾರ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಜನರಿಗೆ ಉದ್ಯೋಗ ಇಲ್ಲದೇ ಬೇರೆ ಬೇರೆ ಕಡೆ ವಲಸೆ ಹೋಗುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನಿಮ್ಮ ಆದಾಯ ಡಬಲ್ ಮಾಡುತ್ತೇನೆ ಎಂದು ರೈತರಿಗೆ ಭರವಸೆ ನೀಡಿದ್ದರು. ಎಲ್ಲರ ಖಾತೆಗಳಿಗೆ 15 ಲಕ್ಷ ರೂಪಾಯಿ ಹಾಕುತ್ತೇವೆ ಎಂದು ಹೇಳಿದ್ದರು. ಆದರೆ, ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರಾ ಎಂದು ಬಿಜೆಪಿಯವರು ನೋಡಿಕೊಳ್ಳಲಿ. ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಪಾದಯಾತ್ರೆಗೆ ನೀವೆಲ್ಲ ಕಾರ್ಯಕರ್ತರು ಬಂದಿದ್ದಿರಿ. ನೀವು ರಾಹುಲ್ ಗಾಂಧಿಯವರಿಗೆ ಮಾತ್ರವಲ್ಲಿ ಇಡೀ ದೇಶಕ್ಕೆ ಶಕ್ತಿ ಕೊಟ್ಟಿದ್ದೀರಿ. ರಾಷ್ಟ್ರಧ್ವಜವನ್ನು ಕೊರಳಲ್ಲಿ ಧರಿಸಲು ಕಾಂಗ್ರೆಸ್‌ನವರಿಗೆ ಮಾತ್ರ ಸಾಧ್ಯ. ಬಿಜೆಪಿ ಮುಖಂಡರಿಗೆ ಇದು ಸಾಧ್ಯ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ | ಪರೇಶ್‌ ಮೇಸ್ತಾ | ಹುಷಾರಿಗಿರಿ, ಬಿಜೆಪಿಯವರು ಇನ್ನೊಬ್ಬ ಪರೇಶ್‌ನನ್ನು ಹುಡುಕುತ್ತಿದ್ದಾರೆ: ಯು.ಟಿ. ಖಾದರ್

೧೩೧೦ಕ್ಕೂ ಹೆಚ್ಚು ಅರ್ಜಿ ಆಹ್ವಾನ
ಇವತ್ತು ಕಾಂಗ್ರೆಸ್ ಪಕ್ಷದ ಜ್ಯೋತಿಯನ್ನು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಹಚ್ಚಿದ್ದೇವೆ. ಕಾಂಗ್ರೆಸ್ ಪಕ್ಷದ ಮನೆ ಖಾಲಿಯಾಗಿದೆ ಎಂದು ಬಿಜೆಪಿಯವರು ಹೇಳಿದ್ದಾರೆ. ಆದರೆ, ರಾಜ್ಯದ ವಿವಿಧ ಕ್ಷೇತ್ರಗಳಿಂದ 1310ಕ್ಕೂ ಅಧಿಕ ಮಂದಿ ೨೨೪ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಹಾಕಿದ್ದಾರೆ ಎಂದು ಹೇಳಿದರು.

ಕೋವಿಡ್ ಸಂದರ್ಭದಲ್ಲಿ ಮೃತಪಟ್ಟವರಿಗೂ ಸರ್ಕಾರದಿಂದ ಸೂಕ್ತ ಪರಿಹಾರ ಸಿಕ್ಕಿಲ್ಲ. 21 ಸಾವಿರ ಕೋಟಿ ರೂಪಾಯಿಯನ್ನು ಕೊಡುತ್ತಿದ್ದೇವೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಆದರೆ, ಆ ಹಣ ಯಾರಿಗೂ ಕೈ ಸೇರಿಲ್ಲ ಎಂದು ಡಿಕೆಶಿ ಹೇಳಿದರು.

ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯವೂ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಹೇಬರು 21 ಸಾವಿರ ಮತದಾರರನ್ನು ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಬುಧವಾರ ಎಲೆಕ್ಷನ್ ಕಮಿಷನ್‌ಗೆ ಹೋಗಿ ದೂರು ನೀಡಿ ನೇರವಾಗಿ ಸಮಾವೇಶಕ್ಕೆ ಬಂದಿದ್ದೇನೆ. ಮತದಾರರು ಜಾಗೃತರಾಗಿ ಮತದಾನವನ್ನು ಸರಿಯಾಗಿ ಮಾಡಬೇಕು ಎಂದು ಹೇಳಿದರು.

ಇದನ್ನೂ ಓದಿ | ಪರೇಶ್‌ ಮೇಸ್ತಾ ಸಾವು ಪ್ರಕರಣ | ಸಿದ್ದರಾಮಯ್ಯ ಮೇಲೆ ಬಿಜೆಪಿ ಟಾರ್ಗೆಟ್‌; ಆರ್‌.ವಿ. ದೇಶಪಾಂಡೆ ಆರೋಪ

ಸಿಬಿಐ ರಿಪೋರ್ಟ್‌ ಒಪ್ಪದ ಬಿಜೆಪಿ- ಆರ್‌ವಿಡಿ
2017ರ ಡಿಸೆಂಬರ್‌ನಲ್ಲಿ ಪರೇಶ್ ಮೇಸ್ತಾ ಸಾವು ಸಂಭವಿಸಿತ್ತು. 2018ರ ಚುನಾವಣೆಯಲ್ಲಿ ಲಾಭ ಪಡೆದುಕೊಳ್ಳಲು ಬಿಜೆಪಿ ಮುಂದಾಯಿತು. ವಿನಾಕಾರಣ ಕಾಂಗ್ರೆಸ್ ಪಕ್ಷವು ಪರೇಶ್ ಸಾವಿಗೆ ಹೊಣೆ ಎಂದು ಆರೋಪಿಸಲಾಯಿತು. ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸಿ ಕೊಮುಗಲಭೆ ಸೃಷ್ಟಿಸಿದರು. ಅಂದು ಬಿಜೆಪಿ ಮುಖಂಡರು ಒತ್ತಾಯಿಸಿ ಪ್ರಕರಣವನ್ನು ಸಿಬಿಐ‌ಗೆ ಕೊಡಿಸಿದ್ದರು. ಇದೀಗ ಪ್ರಕರಣದಲ್ಲಿ ಸಿಬಿಐ ಬಿ ರಿಪೋರ್ಟ್ ಸಲ್ಲಿಕೆ ಮಾಡಿದೆ. ಆದರೆ, ಇದನ್ನು ಒಪ್ಪುತ್ತಿಲ್ಲ ಎಂದು ಮಾಜಿ ಸಚಿವ ಆರ್.ವಿ‌. ದೇಶಪಾಂಡೆ ಹೇಳಿದರು.

ಸಿಬಿಐ ಪ್ರಧಾನಿ ನರೇಂದ್ರ ಮೋದಿ ಅವರ ಅಡಿಯಲ್ಲಿ ಬರುತ್ತದೆ. ಇದನ್ನು ಜನರು, ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು. ಜನಜಾಗೃತಿ ಸಮಾವೇಶ ಕೇವಲ ಪರೇಶ್ ಮೇಸ್ತಾ ಪ್ರಕರಣಕ್ಕೆ ಸೀಮಿತವಲ್ಲ. ರಾಜ್ಯದಲ್ಲಿ ಏನಾಗುತ್ತಿದೆ ಅನ್ನೋದನ್ನು ಜನರು ತಿಳಿದುಕೊಳ್ಳಬೇಕು ಎಂದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿತ್ತು. ಆದರೆ, ಬಿಜೆಪಿ ಸರ್ಕಾರದಲ್ಲಿ ಮಂಜೂರಾದ ಕಾಮಗಾರಿಗಳು ಪೂರ್ಣಗೊಳ್ಳುತ್ತಿಲ್ಲ. ಬಿಜೆಪಿ ಸರ್ಕಾರದಲ್ಲಿ ಅಭಿವೃದ್ಧಿ ಕ್ಷೀಣವಾಗಿದೆ. ಕಾಂಗ್ರೆಸ್ ಬಡವರ, ಕೂಲಿಕಾರ್ಮಿಕರ ಪಕ್ಷವಾಗಿದೆ. ಯಾವತ್ತೂ ಜಾತಿ, ಧರ್ಮ ನೋಡಿಲ್ಲ. ಆದರೆ ಬಿಜೆಪಿ ಯಾವತ್ತೂ ಬಡವರ ಪರ ನೋಡುವುದಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಯಾವತ್ತೂ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಆದರೆ, ಪರೇಶ್ ಪ್ರಕರಣದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಸರ್ಕಾರ ಕಾರಣವಾಗಿರಲಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಯೋಜನೆಗಳು ಜನರ ಮನೆಬಾಗಿಲಿಗೆ ತಲುಪುತ್ತಿದ್ದವು. ಈಗ ಬಿಜೆಪಿ ಸರ್ಕಾರದಲ್ಲಿ ಕೇವಲ ಸುಳ್ಳು ಭರವಸೆ ಮಾತ್ರ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಂತೆ ನೀವು ನೋಡಿಕೊಳ್ಳಬೇಕು ಎಂದು ಆರ್‌ವಿಡಿ ಮನವಿ ಮಾಡಿದರು.

ಇದನ್ನೂ ಓದಿ | ಪರೇಶ್‌ ಮೇಸ್ತಾ ಸಾವು ಪ್ರಕರಣ | ಕಾಂಗ್ರೆಸ್‌ ಬೃಹತ್‌ ಸಮಾವೇಶ; ಬಿಜೆಪಿ ವಿರುದ್ಧ ಮುಗಿಬಿದ್ದ ಕೈ ನಾಯಕರು

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ- ಸತೀಶ್ ಸೈಲ್
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾಗಿದೆ. ಜನರ ಪ್ರತಿಭಟನೆ, ವಿರೋಧಗಳ ಬಳಿಕ ಆರೋಗ್ಯ ಸಚಿವರು ಜಿಲ್ಲೆಗೆ ಭೇಟಿ ನೀಡಿದ್ದರು. ಶೀಘ್ರದಲ್ಲೇ ಆಸ್ಪತ್ರೆ ಕಾಮಗಾರಿಗೆ ಅಡಿಗಲ್ಲು ಹಾಕುವುದಾಗಿ ಹೇಳಿದ್ದರು. ಆದರೆ, ಇದುವರೆಗೂ ಸರ್ಕಾರಕ್ಕೆ ಪ್ರಸ್ತಾವನೆಯೇ ಸಲ್ಲಿಕೆಯಾಗಿಲ್ಲ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗೇ ಆಗುತ್ತದೆ ಎಂದು ಮಾಜಿ ಶಾಸಕ ಸತೀಶ್ ಸೈಲ್ ಹೇಳಿದರು.

ಸಾವನ್ನು ಟೂಲ್‌ ಕಿಟ್‌ ಮಾಡಿಕೊಳ್ಳುವ ಬಿಜೆಪಿ- ಮಂಕಾಳು ವೈದ್ಯ
2017ರಲ್ಲಿ ಜನಪರ ಕಾರ್ಯಕ್ರಮವನ್ನು ಕಾಂಗ್ರೆಸ್ ಆಯೋಜಿಸಿತ್ತು. ಅದನ್ನು ಸಹಿಸಲಾಗದೇ, ತಮಗೆ ಉಳಿಗಾಲ ಇಲ್ಲ ಎಂದು ಬಿಜೆಪಿ ಟೂಲ್‌ ಕಿಟ್ ರೆಡಿ ಮಾಡಿಕೊಂಡಿತ್ತು. ಪರೇಶ್ ಮೇಸ್ತಾ ಸಾವಿನ ಪ್ರಕರಣವನ್ನು ಟೂಲ್ ಕಿಟ್ ಮಾದರಿಯಲ್ಲಿ ಬಳಸಿಕೊಂಡಿತು. ಭಟ್ಕಳ ಕ್ಷೇತ್ರದಲ್ಲಿ 1500 ಕೋಟಿ ರೂಪಾಯಿ ಅನುದಾನ ತಂದಿದ್ದೆವು. ಆದರೆ, ಇದನ್ನು ಸಹಿಸದ ಬಿಜೆಪಿ ಅಪಪ್ರಚಾರ ಮಾಡಿತು ಎಂದು ಮಾಜಿ ಶಾಸಕ ಮಂಕಾಳು ವೈದ್ಯ ಆರೋಪಿಸಿದರು.

ದಿನಬಳಕೆಯ ವಸ್ತುಗಳು ದುಬಾರಿಯಾಗಿ ಜನಸಾಮಾನ್ಯರು ಪರದಾಡುತ್ತಿದ್ದಾರೆ. ಇದು ಬಿಜೆಪಿ ಸರ್ಕಾರದ ಅಭಿವೃದ್ಧಿಯಾಗಿದೆ. ಅಭಿವೃದ್ಧಿ ಕಾಣಬೇಕು ಅಂದರೆ ಮತ್ತೆ ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತರಬೇಕಿದೆ. ಇನ್ನೇನು ಆರು ತಿಂಗಳಲ್ಲಿ ಚುನಾವಣೆ ಬರಲಿದೆ. ಲೂಟಿ ಮಾಡಿ ಕುಳಿತಿರುವ ಬಿಜೆಪಿಯವರು ಮತ್ಯಾರ ಕೊಲೆ ಮಾಡುತ್ತಾರೋ ಎಂಬ ಆತಂಕ ಇದೆ. ಪರೇಶ್ ಮೇಸ್ತಾ ಪ್ರಕರಣವನ್ನು ಮರು ತನಿಖೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಸಿಬಿಐ ತನಿಖೆ ಮಾಡಿ ಬಿ ರಿಪೋರ್ಟ್‌ ನೀಡಿರುವ ಪ್ರಕರಣವನ್ನು ಕೊಲೆ ಎಂದು ಮಾಡಲು ಸಾಧ್ಯವಿದೆಯೇ? ಜನರ ದಾರಿ ತಪ್ಪಿಸುವ ತಂತ್ರವಿದು ಎಂದು ಹೇಳಿದರು.

ಇದನ್ನೂ ಓದಿ | ಪರೇಶ್‌ ಮೇಸ್ತಾ ಸಾವು ಪ್ರಕರಣ | ಸಿಬಿಐ ಬಿ ರಿಪೋರ್ಟ್‌ ಒಪ್ಪದ ಕುಟುಂಬ; ಡಿ. 21ಕ್ಕೆ ಆಕ್ಷೇಪಣೆ ಸಲ್ಲಿಕೆಗೆ ಕೋರ್ಟ್‌ ಸೂಚನೆ

Exit mobile version