Site icon Vistara News

ಪರೇಶ್‌ ಮೇಸ್ತಾ | ಹುಷಾರಿಗಿರಿ, ಬಿಜೆಪಿಯವರು ಇನ್ನೊಬ್ಬ ಪರೇಶ್‌ನನ್ನು ಹುಡುಕುತ್ತಿದ್ದಾರೆ: ಯು.ಟಿ. ಖಾದರ್

kumata congress samavesha UT Khadar Madhu bangarappa

ಕುಮಟಾ (ಕಾರವಾರ): ಬಿಪಿಎಲ್ ಕಾರ್ಡ್ ಕೊಡಲು ಅರ್ಹತೆಯಿಲ್ಲದ ಬಿಜೆಪಿ ಜನಪರ ಸರ್ಕಾರ ಎಂದು ಹೇಳಿಕೊಳ್ಳುತ್ತದೆ. ಮತ್ತೊಬ್ಬ ಪರೇಶ್‌ ಮೇಸ್ತಾ ಹುಡುಕಾಟದಲ್ಲಿ ಬಿಜೆಪಿಯವರು ಇದ್ದಾರೆ. ಈ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನೋಡುತ್ತಿದ್ದಾರೆ. ಅದಕ್ಕಾಗಿ ಸಹೋದರರನ್ನು ರಕ್ಷಿಸಿಕೊಳ್ಳುವಂತೆ ಜನರನ್ನು ಎಚ್ಚರಿಸಲು ಈ ಜನಜಾಗೃತಿ ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ ಎಂದು ಮಾಜಿ ಸಚಿವ ಯು.ಟಿ. ಖಾದರ್ ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಹಿಂದು ಕಾರ್ಯಕರ್ತ ಪರೇಶ್‌ ಮೇಸ್ತಾ ಸಾವು ಪ್ರಕರಣ ಸಂಬಂಧ ಕುಮಟಾದಲ್ಲಿ ಗುರುವಾರ (ನ.೨೪) ಏರ್ಪಡಿಸಲಾಗಿರುವ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಪರೇಶ್ ಮೇಸ್ತಾ ಪ್ರಕರಣವನ್ನು ಮರು ತನಿಖೆಗೆ ಹಾಕುತ್ತಿರುವುದು ನ್ಯಾಯ ಕೊಡಿಸುವುದಕ್ಕೆ ಅಲ್ಲ. ಬದಲಿಗೆ ಪರೇಶ್ ಪ್ರಕರಣವನ್ನು ಚುನಾವಣೆವರೆಗೆ ಜೀವಂತವಾಗಿರಿಸುವ ಹುನ್ನಾರವಾಗಿದೆ ಎಂದು ಆರೋಪಿಸಿದರು.

ಯಾವ ಪರೇಶ್ ಮೇಸ್ತಾ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದಿದೆಯೋ ಈಗ ಅದೇ ಯುವಕನ ಪ್ರಕರಣದ ಮೂಲಕ ದೇವರು ಅವರನ್ನು ವಾಪಸ್ ಕಳುಹಿಸುತ್ತಾರೆ. ವೋಟು ತೆಗೆದುಕೊಂಡ ಬಳಿಕ ಬಿಜೆಪಿ ಕಷ್ಟದಲ್ಲಿರುವ ಜನರ ಬಳಿ ಬಂದು ಸಮಸ್ಯೆಯನ್ನು ಕೇಳಿಲ್ಲ. ಹಿಂದಿನ ಕಾಂಗ್ರೆಸ್ ಸರ್ಕಾರ ನೀಡಿದ್ದ ವಿವಿಧ ಜನಪರ ಯೋಜನೆಗಳನ್ನೂ ಸ್ಥಗಿತಗೊಳಿಸಿದೆ ಎಂದು ಕಿಡಿಕಾರಿದರು.

ಇದನ್ನೂ ಓದಿ | ಪರೇಶ್‌ ಮೇಸ್ತಾ ಸಾವು ಪ್ರಕರಣ | ಸಿದ್ದರಾಮಯ್ಯ ಮೇಲೆ ಬಿಜೆಪಿ ಟಾರ್ಗೆಟ್‌; ಆರ್‌.ವಿ. ದೇಶಪಾಂಡೆ ಆರೋಪ

ಡಬ್ಬಲ್ ಎಂಜಿನ್ ಸರ್ಕಾರ ಎಂದು ಹೇಳಿಕೊಳ್ಳುವ ಸರ್ಕಾರದಲ್ಲಿ ಯಾವುದೇ ಎಂಜಿನ್ ಇಲ್ಲ. ಈ ಹಿಂದೆ ಭಟ್ಕಳ ಶಾಸಕ ಚಿತ್ತರಂಜನ್ ಹತ್ಯೆಯಾಗಿ ಇಷ್ಟು ವರ್ಷ ಕಳೆದಿದೆ. ಅವರ ಹತ್ಯೆಗೆ ನ್ಯಾಯ ಕೊಡುವಲ್ಲಿ ಎಷ್ಟರಮಟ್ಟಿಗೆ ಪ್ರಯತ್ನಿಸಿದ್ದಾರೆ ಎಂಬುದನ್ನು ಇಲ್ಲಿನ ಸಂಸದರು ಹೇಳಬೇಕು. ಚಿತ್ತರಂಜನ್ ಕುಟುಂಬಕ್ಕೆ ನ್ಯಾಯ ಕೊಡಲಾಗದ ಬಿಜೆಪಿಗೆ ಬೇರೆಯವರಿಗೆ ನ್ಯಾಯ ಕೊಡಿಸುವುದು ಹೇಗೆ ಸಾಧ್ಯ? ಎಂದು ಯು.ಟಿ. ಖಾದರ್‌ ಪ್ರಶ್ನಿಸಿದರು.

ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆ ಎಲ್ಲರನ್ನೂ ಒಂದಾಗಿಸಬೇಕು. ಎಲ್ಲ ಸಮುದಾಯದವರನ್ನು ಒಂದುಗೂಡಿಸದೇ ಸೌಹಾರ್ದ ಮೂಡಿಸಲು ಸಾಧ್ಯವಿಲ್ಲ. ಕೋಮುವಾದಿ ಬಿಜೆಪಿಯನ್ನು ಸೋಲಿಸಿ, ಕಾಂಗ್ರೆಸ್ ಅನ್ನು ಬೆಂಬಲಿಸಿ ಎಂದು ಖಾದರ್‌ ಮನವಿ ಮಾಡಿದರು.

ಆರ್‌ಎಸ್‌ಎಸ್‌-ಬಿಜೆಪಿ ಜನರನ್ನು ಒಡೆದಿದೆಮಯೂರ ಜಯಕುಮಾರ್
ಆರ್‌ಎಸ್‌ಎಸ್ ಹಾಗೂ ಬಿಜೆಪಿಯು ಜನರನ್ನು ಒಡೆದಿದೆಯೇ ಹೊರತು ದೇಶಕ್ಕಾಗಿ ಏನನ್ನೂ ಮಾಡಿಲ್ಲ. ಕೋಮುಗಲಭೆ ಸೃಷ್ಟಿಸಿ, ಜಾತಿಗಳ ನಡುವೆ ಬಿರುಕು ಮೂಡಿಸಿ ಗಲಭೆಯಾಗಲು ಬಿಜೆಪಿಯವರು ಕಾರಣರಾಗಿದ್ದಾರೆ. ದೇಶ ಕಟ್ಟಲು ಕಾಂಗ್ರೆಸ್‌ ಪ್ರಮುಖ ಕಾರಣ, ಆದರೆ, ಬಿಜೆಪಿ ದೇಶ ಒಡೆಯುವ ಕೆಲಸವನ್ನು ಮಾಡುತ್ತಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ಮಯೂರ ಜಯಕುಮಾರ್ ಹೇಳಿದರು.

ಇದನ್ನೂ ಓದಿ | ಪರೇಶ್‌ ಮೇಸ್ತಾ ಸಾವು ಪ್ರಕರಣ | ಕಾಂಗ್ರೆಸ್‌ ಬೃಹತ್‌ ಸಮಾವೇಶ; ಬಿಜೆಪಿ ವಿರುದ್ಧ ಮುಗಿಬಿದ್ದ ಕೈ ನಾಯಕರು

ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಸರ್ಕಾರ ಬರದಂತೆ ನೋಡುವುದು ನಮ್ಮ ಕರ್ತವ್ಯ.‌ ಭೂತಕಾಲದಲ್ಲಿ ನಡೆದಿದ್ದನ್ನು ನಾವು ಭವಿಷ್ಯದಲ್ಲಿ ನಡೆಯಲು ಬಿಡುವುದಿಲ್ಲ. ಕರ್ನಾಟಕದ ಅಭಿವೃದ್ಧಿಗೆ ಮತ್ತೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಬೇಕಿದೆ ಎಂದು ಹೇಳಿದರು.

ಬಿಜೆಪಿಯಿಂದ ಸಾವು ಪ್ರಕರಣ ರಾಜಕೀಯ ಬಳಕೆಗೆ- ಮಧು ಬಂಗಾರಪ್ಪ
ಸಾವಿನ ಪ್ರಕರಣವನ್ನು ಹೇಗೆ ರಾಜಕೀಯವಾಗಿ ಬಳಸಿಕೊಳ್ಳಬಹುದು ಎಂಬುದನ್ನು ಬಿಜೆಪಿಯವರು ಹುಡುಕುತ್ತಿದ್ದಾರೆ. ಪರೇಶ್ ಮೇಸ್ತಾ ಪ್ರಕರಣವನ್ನು ಮುಂದಿರಿಸಿಕೊಂಡು ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆ ಪಕ್ಷವನ್ನು ಅಧಿಕಾರದಿಂದ ಇಳಿಸುವಂತಹ ಕಾರ್ಯವನ್ನು ಈಗ ಮಾಡಬೇಕಾಗಿದೆ ಕೆಪಿಸಿಸಿ ಹಿಂದುಳಿದ ಜಾತಿಗಳ ವಿಭಾಗದ ಕಾರ್ಯಾಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.

ಜನರಿಗೆ ಸಹಕಾರಿಯಾಗುವಂತಹ ಕಾರ್ಯಕ್ರಮಗಳನ್ನು ತಂದಿರುವುದು ಕಾಂಗ್ರೆಸ್ ಆಗಿದೆ. ಆದರೆ ಜನರಿಗೆ ಚೂರಿ, ಕತ್ತಿ ಕೊಡುವಂತಹ ಕೆಲಸವನ್ನು ಬಿಜೆಪಿ ಮಾಡಿಕೊಂಡು ಬಂದಿದೆ. ಇದೀಗ ಚುನಾವಣೆ ಸಮೀಪಿಸುತ್ತಿರುವಾಗ ಇಲ್ಲಿನ ಸಂಸದರು ಮುಂದೆ ಬರುತ್ತಾರೆ. ಮತ್ತೆ ಸಂವಿಧಾನವನ್ನೇ ಬದಲು ಮಾಡುತ್ತೇನೆ ಎಂದು ಹೇಳುತ್ತಾರೆ. ಜನರಲ್ಲಿ ಸೌಹಾರ್ದತೆ ಮೂಡಿಸಲು ಪಾದಯಾತ್ರೆ ಮಾಡುತ್ತಿರುವ ರಾಹುಲ್ ಗಾಂಧಿಯಂತಹ ನಾಯಕರು ನಮ್ಮ ದೇಶಕ್ಕೆ ಬೇಕಾಗಿದೆ ಎಂದು ಮಧು ಹೇಳಿದರು.

ಇದನ್ನೂ ಓದಿ | ಮಂಗಳೂರು ಸ್ಫೋಟ | ಶಾರಿಕ್‌ ಕುಕ್ಕರ್‌ ಬಾಂಬ್‌ ಹಿಡಿದು ಫೋಟೊ ತೆಗೆಸಿಕೊಂಡಿದ್ದೇಕೆ? ಅವನ ಟಾರ್ಗೆಟ್‌ ಐಸಿಸ್‌!

Exit mobile version