ಕುಮಟಾ (ಕಾರವಾರ): ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಬಿಜೆಪಿಯವರು ಟಾರ್ಗೆಟ್ ಮಾಡುತ್ತಿದ್ದಾರೆ. ಕಾರಣ ಅವರ ಮೇಲೆ ಬಿಜೆಪಿಗರಿಗೆ ಭಯವಿದೆ ಎಂದು ಮಾಜಿ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಹಿಂದು ಕಾರ್ಯಕರ್ತ ಪರೇಶ್ ಮೇಸ್ತಾ ಸಾವು ಪ್ರಕರಣ ಸಂಬಂಧ ಕುಮಟಾದಲ್ಲಿ ಗುರುವಾರ (ನ.೨೪) ಏರ್ಪಡಿಸಲಾಗಿರುವ ಜನಜಾಗೃತಿ ಸಮಾವೇಶಕ್ಕೆ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿದರೆ ಸುಲಭವಾಗಿ ಗೆಲ್ಲಬಹುದೆಂದು ಬಿಜೆಪಿಗರು ಅಂದುಕೊಂಡಿದ್ದಾರೆ. ಆದರೆ, ಇದು ಸಾಧ್ಯವಾಗುವುದಿಲ್ಲ. ಅವರನ್ನು ಟಾರ್ಗೆಟ್ ಮಾಡುವುದರಿಂದ ಏನೂ ಮಾಡಿಕೊಳ್ಳಲು ಆಗುವುದಿಲ್ಲ. ಇಂತಹ ನೂರು ಟಾರ್ಗೆಟ್‌ಗಳನ್ನು ಎದುರಿಸುವ ಶಕ್ತಿ ಸಿದ್ದರಾಮಯ್ಯ ಅವರಿಗೆ ಇದೆ ಎಂದು ಹೇಳಿದರು.
ಈ ಸಮಾವೇಶ ರಾಜಕೀಯ ಲಾಭಕ್ಕಲ್ಲ- ಐವಾನ್ ಡಿಸೋಜಾ
ಕುಮಟಾದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಜನಜಾಗೃತಿ ಸಮಾವೇಶ ರಾಜಕೀಯ ಲಾಭಕ್ಕಲ್ಲ. ಜನರಲ್ಲಿ ವಿಷ ಭಾವನೆ ಬಿತ್ತಿರುವ ಬಿಜೆಪಿ ಕುರಿತು ಜಾಗೃತಿ ಮೂಡಿಸುವ ಸಂಬಂಧ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಐವಾನ್ ಡಿಸೋಜಾ ವಿಸ್ತಾರ ನ್ಯೂಸ್‌ಗೆ ಹೇಳಿದರು.
ಪರೇಶ್ ಮೇಸ್ತಾ ಸಾವನ್ನು ಬಿಜೆಪಿ ರಾಜಕೀಯಗೊಳಿಸಿದೆ. ಜನರಲ್ಲಿ ವಿಷ ಕಾರಣಗಳನ್ನು ಬಿತ್ತಿ ಕೋಮು ಭಾವನೆ ಸೃಷ್ಟಿಸಿದ್ದರು. ಇದೀಗ ಸಿಬಿಐ ಬಿ ರಿಪೋರ್ಟ್ ನೀಡಿದ್ದರೂ ಅದನ್ನು ಒಪ್ಪದಿರುವುದು ಖೇದಕರ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಚಳವಳಿಯ ರೀತಿಯಲ್ಲಿ ಜಾಗೃತಿ ಮೂಡಿಸಲು ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ. ವಿಶಾಲ ವೇದಿಕೆಯನ್ನು ಹಾಕಲಾಗಿದ್ದು, 30 ಸಾವಿರಕ್ಕೂ ಅಧಿಕ ಕಾರ್ಯಕರ್ತರನ್ನು ಸೇರಿಸಿದ್ದೇವೆ ಎಂದು ಹೇಳಿದರು.
ಪರೇಶ್ ಮೇಸ್ತಾ ಪ್ರಕರಣವನ್ನು ರಾಜಕೀಯ ಮಾಡುವ ಉದ್ದೇಶವಿಲ್ಲ. ಚುನಾವಣೆಗೆ ಇನ್ನು ನಾಲ್ಕೈದು ತಿಂಗಳು ಬಾಕಿ ಇದೆ. ಜನರಿಗೆ ಬಿಜೆಪಿ ಮನಸ್ಥಿತಿ ಹೇಗಿದೆ ಎನ್ನುವುದನ್ನು ತಿಳಿಸಿಕೊಡುವುದು ನಮ್ಮ ಉದ್ದೇಶ ಎಂದು ಅವರು ಹೇಳಿದರು.
ಸಿದ್ದರಾಮಯ್ಯ ಪ್ರವಾಸ ರದ್ದು
ಪರೇಶ್ ಮೇಸ್ತಾ ಪ್ರಕರಣ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಸಜ್ಜಾಗಿದ್ದ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹವಾಮಾನ ವೈಪರೀತ್ಯ ಕಾರಣಗಳಿಂದಾಗಿ ಸಮಾವೇಶಕ್ಕೆ ಬರಲಾಗುತ್ತಿಲ್ಲ. ಮಳೆ ಬರುತ್ತಿರುವ ಹಿನ್ನೆಲೆಯಲ್ಲಿ ಅವರ ಕುಮಟಾ ಪ್ರವಾಸ ರದ್ದಾಗಿದೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ವಿನಯಕುಮಾರ ಸೊರಕೆ, ಯು.ಟಿ.ಖಾದರ್, ಕೆಪಿಸಿಸಿ ಉಪಾಧ್ಯಕ್ಷ ಐವಾನ್ ಡಿಸೋಜಾ ಸೇರಿದಂತೆ ಹಿರಿಯ ಮುಖಂಡರು ಭಾಗಿಯಾಗಿದ್ದಾರೆ.
ಇದನ್ನೂ ಓದಿ | ಪರೇಶ್ ಮೇಸ್ತಾ ಸಾವು ಪ್ರಕರಣ | ಕಾಂಗ್ರೆಸ್ ಬೃಹತ್ ಸಮಾವೇಶ; ಬಿಜೆಪಿ ವಿರುದ್ಧ ಮುಗಿಬಿದ್ದ ಕೈ ನಾಯಕರು