ಕಾರವಾರ: ಪಿಎಫ್‌ಐ ಸಂಘಟನೆಗೆ 5 ವರ್ಷ ನಿಷೇಧ(PFI Banned) ವಿಧಿಸಿರುವುದನ್ನು ಪರೇಶ್ ಮೇಸ್ತಾ ತಂದೆ ಕಮಲಾಕರ್ ಮೇಸ್ತಾ ಸ್ವಾಗತಿಸಿದ್ದು, ಕೇಂದ್ರ ಸರ್ಕಾರದ ನಿಲುವಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಹಲವು ಗಲಭೆ, ಹತ್ಯೆ ಪ್ರಕರಣಗಳಲ್ಲಿ ಉಗ್ರ ಸಂಘಟನೆ ಪಿಎಫ್‌ಐ ಕೈವಾಡವಿದೆ. ಪಿಎಫ್ಐ ಸಂಘಟನೆ ಇಲ್ಲಿಯವರೆಗೆ ಬೆಳೆಯಲು ಕಾಂಗ್ರೆಸ್ ಸರ್ಕಾರವೇ ಕಾರಣ. ನನ್ನ ಮಗ ಪರೇಶ್ ಮೇಸ್ತಾನ ಹತ್ಯೆಯಲ್ಲೂ ಪಿಎಫ್ಐ ಕೈವಾಡವಿರಬಹುದು ಎಂದು ನನಗೆ ಅನಿಸುತ್ತಿದೆ. ಆ ಸಂಘಟನೆಯನ್ನು ನಿಷೇಧ ಮಾಡದಿದ್ದರೆ ಬಹಳಷ್ಟು ಕಷ್ಟ ಪಡಬೇಕಾಗಿತ್ತು. ಯಾವುದೇ ಕಾರಣಕ್ಕೂ ಅವರನ್ನು ಬೆಳೆಸಲು ಬಿಡಬಾರದು. ಸಮಾಜದ ಜನರು ಶಾಂತಿಯಿಂದ ಬಾಳಬೇಕಿದೆ. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಭಾವುಕರಾಗಿದ್ದಾರೆ.
2017ರ ಡಿಸೆಂಬರ್ 8ರಂದು ಹೊನ್ನಾವರದ ಶೆಟ್ಟಿಕೆರೆಯಲ್ಲಿ ಮೀನುಗಾರ ಯುವಕ ಪರೇಶ್ ಮೇಸ್ತಾನ ಮೃತದೇಹ ಅನುಮಾನಾಸ್ಪದವಾಗಿ ಪತ್ತೆಯಾಗಿತ್ತು. ಅನ್ಯಕೋಮಿನವರೇ ಪರೇಶ್ ಮೇಸ್ತಾನನ್ನು ಕೊಂದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದರ ಜತೆಗೆ ಪಿಎಫ್‌ಐ ಸಂಘಟನೆಯನ್ನು ನಿಷೇಧ ಮಾಡಬೇಕೆಂಬ ಒತ್ತಾಯ ಕೂಡಾ ಕೇಳಿಬಂದಿತ್ತು.
ಇದನ್ನೂ ಓದಿ | PFI BANNED | ಮಂಗಳೂರು, ಹಾಸನದಲ್ಲಿ ಪಿಎಫ್‌ಐ ಕಚೇರಿಗಳಿಗೆ ಬೀಗ, ಉಳಿದ ಕಡೆಯಲ್ಲೂ ಸೀಜ್‌ಗೆ ಪ್ಲ್ಯಾನ್