Site icon Vistara News

Parliament Elections 2024: ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಒಬ್ಬ ಸಚಿವ, ಒಬ್ಬ ಹಿರಿಯ ಕಾಂಗ್ರೆಸ್‌ ನಾಯಕ ಉಸ್ತುವಾರಿ

Rahul siddaramaiah meet

ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲಿ ಪಡೆದ ಭರ್ಜರಿ ಗೆಲುವನ್ನು ಲೋಕಸಭಾ ಚುನಾವಣೆಯಲ್ಲೂ (Parliament Election 2024) ಮರುಸೃಷ್ಟಿ ಮಾಡಲು ಮುಂದಾಗಿರುವ ಕಾಂಗ್ರೆಸ್‌ 28 ಕ್ಷೇತ್ರಗಳ ಪೈಕಿ ಕನಿಷ್ಠ 20 ಕಡೆ ಗೆಲ್ಲುವ ಪ್ಲ್ಯಾನ್‌ (Congress winning plan) ಹಾಕಿಕೊಂಡಿದೆ. ಇದನ್ನು ಸಾಧಿಸುವುದಕ್ಕಾಗಿ ಒಂದು ಹೊಸ ಸೂತ್ರವನ್ನು ರೂಪಿಸಿದೆ. ರಾಜ್ಯದ ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಒಬ್ಬ ಹಿರಿಯ ಮಂತ್ರಿ ಮತ್ತು ಪಕ್ಷದಿಂದ ಒಬ್ಬ ಹಿರಿಯ ನಾಯಕನನ್ನು ಜಂಟಿ ಉಸ್ತುವಾರಿಯಾಗಿ ನೇಮಿಸಲು (Minister and Congress leader joint incharge) ಅದು ನಿರ್ಧರಿಸಿದೆ.

ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿಯಾಗಿರುವ ರಣದೀಪ್‌ ಸಿಂಗ್‌ ಸುರ್ಜೇವಾಲ (Ranadeep singh surjewala) ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಬುಧವಾರ ದಿಲ್ಲಿಯಲ್ಲಿ ರಾಜ್ಯದ ಕಾಂಗ್ರೆಸ್‌ ನಾಯಕರ ಮಹತ್ವದ ಸಭೆಯಲ್ಲಿ ಲೋಕಸಭಾ ಚುನಾವಣೆಯ ಬಗ್ಗೆಯೇ ಪ್ರಧಾನವಾಗಿ ಚರ್ಚೆಯಾಗಿದ್ದು, ಹಲವು ತಂತ್ರಗಳನ್ನು ಹೆಣೆಯಲಾಗಿದೆ. ರಾಜ್ಯದಿಂದ ದಿಲ್ಲಿಗೆ ಹೋದ ಬಹುತೇಕ ಎಲ್ಲ ನಾಯಕರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದು, ಅವುಗಳನ್ನು ಕ್ರೋಡೀಕರಿಸಿ ಹೈಕಮಾಂಡ್‌ ನಾಯಕರು ತಂತ್ರಗಳನ್ನು ರೂಪಿಸಿದ್ದಾರೆ. ಇವುಗಳಲ್ಲಿ ಒಂದು ಪ್ರತಿಕ್ಷೇತ್ರಕ್ಕೆ ಒಬ್ಬರ ಜಂಟಿ ನಾಯಕತ್ವ.

ರಾಹುಲ್‌ ಗಾಂಧಿ ಮತ್ತು ಡಿಕೆಶಿವಕುಮಾರ್‌ ಭೇಟಿ

ಕಾಂಗ್ರೆಸ್‌ ನಾಯಕರ ಸಭೆಯಲ್ಲಿ ಅತ್ಯಂತ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಪ್ರತಿಯೊಂದು ಲೋಕಸಭಾ ಕ್ಷೇತ್ರಕ್ಕೆ ಒಬ್ಬ ಸಚಿವರು ಮತ್ತು ಒಬ್ಬ ಪ್ರಭಾವಿ ನಾಯಕರನ್ನು ಉಸ್ತುವಾರಿಯಾಗಿ ಮಾಡಲಾಗುತ್ತದೆ. ಮುಂದಿನ ಲೋಕಸಭಾ ಚುನಾವಣೆಯವರೆಗೆ ಅವರು ಈ ಕ್ಷೇತ್ರಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಾರೆ. ಚುನಾವಣಾ ಸಿದ್ಧತೆಗಳು, ಅಭ್ಯರ್ಥಿ ಆಯ್ಕೆ, ಪ್ರಚಾರ ಮತ್ತಿತರ ವಿಚಾರಗಳನ್ನು ಅವರು ನೋಡಿಕೊಳ್ಳಲಿದ್ದಾರೆ ಎಂದು ಸುರ್ಜೇವಾಲ ಹೇಳಿದರು.

20 ಸ್ಥಾನ ಗೆಲ್ಲುವ ಭರವಸೆ ನೀಡಿದ ನಾಯಕರು

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರಥ್ಯ ಮತ್ತು ಹಿರಿಯ ನಾಯಕ ರಾಹುಲ್‌ ಗಾಂಧಿ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯದಲ್ಲಿ 20ಕ್ಕೂ ಅಧಿಕ ಲೋಕಸಭಾ ಸ್ಥಾನಗಳನ್ನು ಗೆಲ್ಲಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಲಾಯಿತು. ಇರುವ ಸಣ್ಣ ಪುಟ್ಟ ಭಿನ್ನಮತಗಳನ್ನು ಬದಿಗಿಟ್ಟು ಒಂದೇ ದೃಷ್ಟಿಯನ್ನು ಇಟ್ಟುಕೊಂಡು ಹೋರಾಟ ನಡೆಸುವಂತೆ ಕೇಂದ್ರ ನಾಯಕರೂ ಸಲಹೆ ನೀಡಿದ್ದಾರೆ.

ಗೆಲುವಿನ ವಾತಾವರಣವಿದೆ ಎಂದ ಸಿದ್ದರಾಮಯ್ಯ

ರಾಜ್ಯದಲ್ಲಿ ಇವತ್ತು ವಾತಾವರಣ ಕಾಂಗ್ರೆಸ್ ಸರ್ಕಾರದ ಪರವಾಗಿದೆ. ಯಾಕಂದ್ರೆ ನಾವು ಕೊಟ್ಟ ಮಾತು ಉಳಿಕೊಂಡಿದ್ದೇವೆ. ಎಲ್ಲಾ ಗ್ಯಾರಂಟಿ ಜಾರಿ ಮಾಡಿದ್ದೇವೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದು ಎಂಬ ಅಭಿಪ್ರಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ.

ಎಲ್ಲ ವಿಚಾರಗಳನ್ನು ಹೈಕಮಾಂಡ್ ಗೆ ಹೇಳಿದ್ದೇವೆ. ಈ ಬಾರಿ ನಮ್ಮ ಪರವಾಗಿ ವಾತಾವರಣ ಇರುವುದರಿಂದ ಈ ಬಾರಿ ಕನಿಷ್ಠ 20 ಸೀಟ್ ಗೆಲ್ತಿವಿ ಅಂತ ಆಶ್ವಾಸನೆ ಕೊಟ್ಟಿದ್ದೇವೆ. ನಾವು ಪಾರ್ಲಿಮೆಂಟ್ ಚುನಾವಣೆ, ಸ್ಥಳೀಯ ಸಂಸ್ಥೆ ಚುನಾವಣೆಗಳನ್ನೂ ಗೆಲ್ಲುತ್ತೇವೆ ಎಂದು ಸಿದ್ದರಾಮಯ್ಯ ನುಡಿದರು.

ಇದನ್ನೂ ಓದಿ : Lok Sabha Election 2024: ʼ40% ಆರೋಪ ಮಾಡಿ ಈಗ ಭ್ರಷ್ಟಾಚಾರ ಸಹಿಸಲಾಗದು…ʼ ಕಾಂಗ್ರೆಸ್‌ ಹೈಕಮಾಂಡ್ ಸಭೆಯಲ್ಲಿ ಯಾರು ಏನೆಂದರು?

Exit mobile version