Site icon Vistara News

Parliament Flashback: ಬೆಂಗಳೂರು ದಕ್ಷಿಣ ಕ್ಷೇತ್ರ ಅಂದರೆ ಕಾಂಗ್ರೆಸ್‌ಗೆ ದುಃಸ್ವಪ್ನ! ಗೆದ್ದಿದ್ದು ಒಮ್ಮೆ ಮಾತ್ರ!

tejasvi surya, R gundu rao and ananth kumar

ಬೆಂಗಳೂರು: ರಾಜ್ಯದ 28 ಕ್ಷೇತ್ರಗಳ ಪೈಕಿ (Parliament Flashback) ಬೆಂಗಳೂರು ದಕ್ಷಿಣ ಕಾಂಗ್ರೆಸ್ಸೇತರ ಪಕ್ಷಗಳ ಭದ್ರಕೋಟೆಯಾಗಿದೆ. 1977ರಲ್ಲಿ ಕ್ಷೇತ್ರ ವಿಂಗಡನೆಯ ಬಳಿಕ ಬೆಂಗಳೂರು ದಕ್ಷಿಣ ಕ್ಷೇತ್ರ ಅಸ್ತಿತ್ವಕ್ಕೆ ಬಂತು. ಅಂದಿನಿಂದ ಈವರೆಗೆ ನಡೆದ 12 ಲೋಕಸಭೆ ಚುನಾವಣೆಗಳಲ್ಲಿ (Lok sabha Election 2024) 3 ಬಾರಿ ಜನತಾ ಪಕ್ಷ ಮತ್ತು 8 ಬಾರಿ ಬಿಜೆಪಿ ಜಯಭೇರಿ ಬಾರಿಸಿದೆ. ಕಾಂಗ್ರೆಸ್‌ ಗೆದ್ದಿರುವುದು ಒಂದು ಬಾರಿ ಮಾತ್ರ! ಭಾರತೀಯ ಜನತಾ ಪಕ್ಷದ ಮುಂಚೂಣಿ ನಾಯಕರಾಗಿದ್ದ ಅನಂತ್ ಕುಮಾರ್ ಅವರು ಈ ಕ್ಷೇತ್ರದಲ್ಲಿ ನಿರಂತರ 6 ಬಾರಿ ಚುನಾಯಿತರಾಗಿದ್ದರು.

ಕೆಂಗಲ್‌ ಹನುಮಂತಯ್ಯಗೇ ಸೋಲು

ತುರ್ತು ಪರಿಸ್ಥಿತಿ ಬಳಿಕ ನಡೆದ ಚುನಾವಣೆಯಲ್ಲಿ ಕರ್ನಾಟಕದ 28 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 26ರಲ್ಲಿ ಜಯ ಸಾಧಿಸಿ ಕ್ಲೀನ್‌ ಸ್ವೀಪ್‌ ಮಾಡಿತು. ಆದರೆ ಜನತಾ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನ್ಯಾ. ಕೆ.ಎಸ್‌. ಹೆಗ್ಡೆ ಅವರು ಮೈಸೂರಿನ ಮಾಜಿ ಮುಖ್ಯಮಂತ್ರಿ, ವಿಧಾನಸೌಧದ ನಿರ್ಮಾತೃ ಕೆಂಗಲ್‌ ಹನುಮಂತಯ್ಯ ಅವರಿಗೇ ಸೋಲಿನ ರುಚಿ ತೋರಿಸಿದರು. ನ್ಯಾ. ಕೆ.ಎಸ್‌. ಹೆಗ್ಡೆ ಅವರ ಹಿರಿತನವನ್ನು ಕಡೆಗಣಿಸಿ ಕಿರಿಯ ನ್ಯಾಯಮೂರ್ತಿಯನ್ನು ಇಂದಿರಾ ಗಾಂಧಿ ಅವರು ಮುಖ್ಯ ನ್ಯಾಯಮೂರ್ತಿ ಹುದ್ದೆಗೇರಿಸಿದ್ದರು. ಸ್ವಾಭಿಮಾನಿಯಾದ ಜಸ್ಟಿಸ್‌ ಕೆ. ಎಸ್‌. ಹೆಗ್ಡೆ ಅವರು ರಾಜೀನಾಮೆ ನೀಡಿ ಚುನಾವಣೆ ಕಣಕ್ಕಿಳಿದಿದ್ದರು. ಲೋಕಾಯುಕ್ತರಾಗಿದ್ದ ನ್ಯಾ. ಸಂತೋಷ್‌ ಹೆಗ್ಡೆ ಅವರ ತಂದೆ ಇವರು. ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಗೆದ್ದ ನ್ಯಾ. ಕೆ. ಎಸ್‌. ಹೆಗ್ಡೆ ಅವರು ಲೋಕಸಭೆಯಲ್ಲಿನ ಮೊದಲ ಕಾಂಗ್ರೆಸ್ಸೇತರ ಸ್ಪೀಕರ್‌ ಆಗಿ ಇತಿಹಾಸ ನಿರ್ಮಿಸಿದರು.

ಇದನ್ನೂ ಓದಿ |Parliament Flashback: ಬಿ.ಶಂಕರಾನಂದ; ಲೋಕಸಭೆಯಲ್ಲಿ ನಿರಂತರ 7 ಬಾರಿ ಗೆದ್ದ ದಾಖಲೆ!

ಇಂದಿರಾ ಅಲೆಯೂ ಇಲ್ಲಿ ಕೆಲಸ ಮಾಡಲಿಲ್ಲ

1980ರಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಟಿ.ಆರ್‌ .ಶಾಮಣ್ಣ ಅವರು ಜಯ ಸಾಧಿಸಿದರು. 1984ರಲ್ಲಿ ಇಂದಿರಾ ಗಾಂಧಿ ಹತ್ಯೆ ಬಳಿಕ ನಡೆದ ಚುನಾವಣೆಯಲ್ಲಿ ದೇಶಾದ್ಯಂತ ಕಾಂಗ್ರೆಸ್‌ ಪ್ರಚಂಡ ಜಯ ದಾಖಲಿಸಿತು. ಆದರೆ ಬೆಂಗಳೂರು ದಕ್ಷಿಣದಲ್ಲಿ ಮಾತ್ರ ಜನತಾ ಪಕ್ಷದ ಅಭ್ಯರ್ಥಿ ವಿ. ಎಸ್‌. ಕೃಷ್ಣ ಅಯ್ಯರ್‌ ಗೆದ್ದರು.

ಕಾಂಗ್ರೆಸ್‌ನಿಂದ ಗೆದ್ದಿರುವುದು ಗುಂಡೂರಾವ್‌ ಮಾತ್ರ

1989ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಆದರೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಆರ್‌. ಗುಂಡೂ ರಾವ್‌ ಗೆದ್ದರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆದ್ದಿರುವುದು ಇದೊಂದೇ ಬಾರಿ.
ಆದರೆ ಎರಡೇ ವರ್ಷಗಳ ಬಳಿಕ 1991ರಲ್ಲಿ ಗುಂಡೂ ರಾವ್‌ರನ್ನು ಖ್ಯಾತ ಅರ್ಥಶಾಸ್ತ್ರಜ್ಞ ಕೆ. ವೆಂಕಟಗಿರಿ ಗೌಡರು ಸೋಲಿಸಿದರು. ಈ ಮೂಲಕ ಮೊದಲ ಬಾರಿ ಇಲ್ಲಿ ಬಿಜೆಪಿ ಖಾತೆ ತೆರೆಯಿತು. ವಿಶೇಷ ಏನೆಂದರೆ ಇದೇ ವೆಂಕಟಗಿರಿ ಗೌಡ ಅವರು, 1984ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜನತಾ ಪಕ್ಷದ ವಿ ಎಸ್‌ ಕೃಷ್ಣ ಅಯ್ಯರ್‌ ಎದುರು ಸೋತಿದ್ದರು.

ಅನಂತ್‌ ಕುಮಾರ್‌ ಪ್ರಾಬಲ್ಯ

ಮುಂದೆ ಅನಂತ್‌ ಕುಮಾರ್‌ ಅವರು 1996, 98, 99, 2004, 2009 ಮತ್ತು 2014ರ ಚುನಾವಣೆಗಳಲ್ಲಿ ನಿರಂತರವಾಗಿ ಆರು ಬಾರಿ ಗೆದ್ದರು. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯನ್ನು ಅನಂತ್‌ ಕುಮಾರ್‌ ಅವರು ಮತ್ತಷ್ಟು ಬಲಪಡಿಸಿದರು.

ಇದನ್ನೂ ಓದಿ | Parliament Flashback : ಟಿವಿ ಪತ್ರಕರ್ತೆ ಎದುರು ಸೋಲು ಕಂಡ ಎಚ್‌ ಡಿ ದೇವೇಗೌಡರು!

ತೇಜಸ್ವಿ ಸೂರ್ಯ ಭರ್ಜರಿ ಜಯ

2019ರಲ್ಲಿ 28 ವರ್ಷದ ತೇಜಸ್ವಿ ಸೂರ್ಯ ಅವರು 3.30 ಲಕ್ಷ ಮತಗಳ ಅಂತರದಿಂದ ಜಯ ಸಾಧಿಸಿದರು. ಇದು ಈ ಕ್ಷೇತ್ರದಲ್ಲಿನ ಗರಿಷ್ಠ ಅಂತರದ ಜಯ. 1989ರಲ್ಲಿ ಆರ್‌ ಗುಂಡೂರಾವ್‌ ಅವರು ಜನತಾ ದಳದ ಎಂ ರಘುಪತಿ ಅವರನ್ನು 2,39,854 ಮತಗಳ ಅಂತರದಿಂದ ಸೋಲಿಸಿದ್ದ ದಾಖಲೆಯನ್ನು ತೇಜಸ್ವಿ ಸೂರ್ಯ ಬ್ರೇಕ್‌ ಮಾಡಿದ್ದಾರೆ.

ಲೋಕಸಭೆ ತೀರ್ಪೇ ಬೇರೆ, ವಿಧಾನಸಭೆ ತೀರ್ಪೇ ಬೇರೆ!

ಬೆಂಗಳೂರು: ಮತದಾರರು ಲೋಕಸಭೆಯಲ್ಲಿ ನೀಡುವ ತೀರ್ಪೇ ಬೇರೆ, ವಿಧಾನಸಭೆಯಲ್ಲಿ ನೀಡುವ ತೀರ್ಪೇ ಬೇರೆ ಎನ್ನುವುದಕ್ಕೆ ಕರ್ನಾಟಕವೇ ದೃಷ್ಟಾಂತ. ಹಿಂಬಾಗಿಲ ರಾಜಕಾರಣ, ರಾಜಿ ರಾಜಕಾರಣ, ಆಪರೇಷನ್‌ ರಾಜಕಾರಣಗಳ ಇತ್ಯಾದಿ ಇಂದಿನ ಅನೀತಿ ಪಾಲಿಟಿಕ್ಸ್‌ಗಳ ನಡುವೆ ನೈತಿಕತೆಯು ಮೌಲ್ಯ ಕಳೆದುಕೊಂಡಿದೆ. ಆದರೆ ರಾಜಕಾರಣದಲ್ಲಿ ʼನೈತಿಕ ಹೊಣೆʼ ಎಂದರೇನು, ಅದೇಕೆ ಮುಖ್ಯ ಎನ್ನುವುದನ್ನು 1985ರಲ್ಲಿ ರಾಮಕೃಷ್ಣ ಹೆಗಡೆ ಅವರು ತೋರಿಸಿಕೊಟ್ಟಿದ್ದರು.

ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿತ್ತು

1983ರ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಕೇವಲ 82 ಸ್ಥಾನಗಳನ್ನು ಗಳಿಸಿ ಅಧಿಕಾರ ಕಳೆದುಕೊಂಡಿತು. 95 ಸ್ಥಾನಗಳನ್ನು ಗಳಿಸಿದ ಜನತಾ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತು. ಬಂಗಾರಪ್ಪ ಅವರ ಕ್ರಾಂತಿರಂಗ ಪಕ್ಷವು ಜನತಾ ಪಕ್ಷದ ಜತೆಗಿತ್ತು.

ಬಿಜೆಪಿಯ 18, ಸಿಪಿಐಯ 3 ಮತ್ತು 16 ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಏರಿದರು. ಕರ್ನಾಟಕದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿ ಅವರು. ಮಾದರಿ ಆಡಳಿತದ ಮೂಲಕ ರಾಮಕೃಷ್ಣ ಹೆಗಡೆ ಅವರು ಅಪಾರ ಜನ ಮನ್ನಣೆ ಗಳಿಸತೊಡಗಿದರು.

ಇಂದಿರಾ ಗಾಂಧಿ ಬಲಿಯಾದಾಗ…

ಈ ಮಧ್ಯೆ ಪ್ರಧಾನಿ ಇಂದಿರಾ ಗಾಂಧಿ ಅವರು 1984ರಲ್ಲಿ ಸಿಖ್‌ ಭಯೋತ್ಪಾದಕರ ಗುಂಡಿಗೆ ಬಲಿಯಾದರು. ಆ ಬಳಿಕ ನಡೆದ 1984ರ ಲೋಕಸಭೆ ಚುನಾವಣೆಯಲ್ಲಿ ಇಂದಿರಾ ಅಲೆಯ ಪರಿಣಾಮವಾಗಿ ದೇಶಾದ್ಯಂತ ಕಾಂಗ್ರೆಸ್‌ ಭರ್ಜರಿ ಜಯ ಗಳಿಸಿತು. 514 ಕ್ಷೇತ್ರಗಳ ಪೈಕಿ 404 ಸ್ಥಾನಗಳು ಕಾಂಗ್ರೆಸ್‌ ಪಾಲಾದವು.

ಪ್ರತಿಪಕ್ಷಗಳ ಪರಿಸ್ಥಿತಿ ಎಷ್ಟು ಹೀನಾಯವಾಗಿತ್ತೆಂದರೆ, ಆಂಧ್ರ ಪ್ರದೇಶದಲ್ಲಿ 30 ಸ್ಥಾನ ಗಳಿಸಿದ ಎನ್‌ ಟಿ ರಾಮರಾವ್‌ ಅವರ ತೆಲುಗು ದೇಶಂ ಪಾರ್ಟಿಯೇ ಎರಡನೇ ಅತಿ ದೊಡ್ಡ ಪಕ್ಷವಾಯಿತು! ಕೇರಳದಲ್ಲಿ 22 ಸ್ಥಾನ ಗಳಿಸಿದ ಇ ಎಂ ಎಸ್‌ ನಂಬೂದಿರಿಪಾಡ್‌ ನೇತೃತ್ವದ ಸಿಪಿಐ ಮೂರನೇ ಅತಿ ದೊಡ್ಡ ಪಕ್ಷವಾಯಿತು!

ಕರ್ನಾಟಕದ 28 ಲೋಕಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 24 ಸ್ಥಾನ ಗೆದ್ದರೆ, ಆಡಳಿತರೂಢ ಜನತಾ ಪಕ್ಷಕ್ಕೆ ಕೇವಲ 4 ಸೀಟುಗಳನ್ನು ಗೆಲ್ಲುವುದಕಷ್ಟೇ ಸಾಧ್ಯವಾಯಿತು. ಈ ಸೋಲಿಗೆ ತಾವೇ ಹೊಣೆ ಹೊತ್ತು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ರಾಮಕೃಷ್ಣ ಹೆಗಡೆ ಅವರು ಮತ್ತೊಮ್ಮೆ ಜನತೆಯ ತೀರ್ಪು ಪಡೆಯಲು ವಿಧಾನಸಭೆ ಚುನಾವಣೆ ಎದುರಿಸಿದರು.

ಈಗಷ್ಟೇ ಲೋಕಸಭೆ ಚುನಾವಣೆಯಲ್ಲಿ ಜನತಾ ಪಕ್ಷ ಧೂಳಿಪಟವಾಗಿದೆ. ಈ ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆ ಅವರು ಸರ್ಕಾರ ವಿಸರ್ಜನೆ ಮಾಡಿದ್ದು “ಆತ್ಮಹತ್ಯೆಯ ನಿರ್ಧಾರʼ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟರು. ಸಾಲದೆಂಬಂತೆ ಜನತಾ ಪಕ್ಷ ಯಾವುದೇ ಪ್ರಮುಖ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಕಣಕ್ಕಿಳಿಯಿತು. ಆದರೆ ರಿಸಲ್ಟ್‌ ಬಂದಾಗ ಅಚ್ಚರಿ ಕಾದಿತ್ತು. ಭರ್ತಿ 139 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಜನತಾ ಪಕ್ಷ ಪ್ರಚಂಡ ಜಯ ಸಾಧಿಸಿತು. ಕಾಂಗ್ರೆಸ್‌ ಕೇವಲ 65 ಸ್ಥಾನಗಳಲ್ಲಿ ಗೆದ್ದು ಹೀನಾಯವಾಗಿ ಸೋತಿತು.
ಆ ಚುನಾವಣೆಯಲ್ಲಿ 116 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಕೇವಲ ಎರಡು ಕಡೆ ಗೆದ್ದರೆ, ಸಿಪಿಐಗೆ 3 ಸ್ಥಾನಗಳು ಲಭಿಸಿದವು.

ಇದನ್ನೂ ಓದಿ | Vistara News Polling Booth: ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸತತ 9ನೇ ಬಾರಿಯೂ ಅರಳಲಿದೆ ಕಮಲ!

ರಾಮಕೃಷ್ಣ ಹೆಗಡೆ ಮತ್ತೊಮ್ಮೆ ಮುಖ್ಯಮಂತ್ರಿ

ನಾಡಿನ ಜನತೆಯ ಹೊಸ ತೀರ್ಪಿನೊಂದಿಗೆ ರಾಮಕೃಷ್ಣ ಹೆಗಡೆ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದರು. ದೇಶದ ರಾಜಕೀಯ ಇತಿಹಾಸದಲ್ಲಿ ಇದೊಂದು ಅಪರೂಪದ ಮತ್ತು ಮಹತ್ವದ ಅಧ್ಯಾಯವಾಗಿ ದಾಖಲಾಯಿತು.

Exit mobile version