Site icon Vistara News

Parliament Flashback: ಧಾರವಾಡದಲ್ಲಿ ಸತತ 4 ಬಾರಿ ಗೆಲುವು ಸಾಧಿಸಿರುವ ಪ್ರಲ್ಹಾದ್ ಜೋಶಿ!

Parliament Flashback

ಬೆಂಗಳೂರು: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು (Parliament Flashback) ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ (Lok Sabha Election 2024) ಮತ್ತೊಮ್ಮೆ ಕಣಕ್ಕಿಳಿದಿದ್ದಾರೆ. ಈ ಕ್ಷೇತ್ರದಲ್ಲಿ ಸತತವಾಗಿ ಒಟ್ಟು ನಾಲ್ಕು ಬಾರಿ ಗೆದ್ದ ದಾಖಲೆ ಜೋಶಿಯವರದು.

2004ರಲ್ಲಿ ಪ್ರಲ್ಹಾದ್‌ ಜೋಶಿ ಅವರು ಮೊದಲ ಬಾರಿ ಧಾರವಾಡ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಿ.ಎಸ್. ಪಾಟೀಲ್ ಅವರನ್ನು 83,078 ಮತಗಳ ಅಂತರದಿಂದ ಸೋಲಿಸಿ ಲೋಕಸಭೆ ಪ್ರವೇಶಿಸಿದರು. ಮೊದಲು ಧಾರವಾಡ ಉತ್ತರ ಮತ್ತು ಧಾರವಾಡ ದಕ್ಷಿಣ ಎಂಬ ಎರಡು ಪ್ರತ್ಯೇಕ ಲೋಕಸಭೆ ಕ್ಷೇತ್ರಗಳಿದ್ದವು. ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಇದು ಧಾರವಾಡ ಕ್ಷೇತ್ರ ಎಂದಾಯಿತು. 2009ರಲ್ಲಿ ಪ್ರಲ್ಹಾದ್‌ ಜೋಶಿ ಅವರು ಕಾಂಗ್ರೆಸ್‌ನ ವಿನಯ್ ಕುಲಕರ್ಣಿ ಅವರನ್ನು 1,37,663 ಮತಗಳ ಅಂತರದಿಂದ ಸೋಲಿಸಿದರು. 2014ರಲ್ಲಿ ಜೋಶಿ ಅವರು ಕಾಂಗ್ರೆಸ್‌ನ ವಿನಯ್ ಕುಲಕರ್ಣಿ ಅವರನ್ನು 1,13,657 ಮತಗಳ ಅಂತರದಿಂದ ಮತ್ತೊಮ್ಮೆ ಪರಾಭವಗೊಳಿಸಿದರು. 2019ರಲ್ಲಿ ಅವರು 2,05,072 ಮತಗಳಿಂದ ಗೆದ್ದು ಕಾಂಗ್ರೆಸ್ ವಿನಯ್ ಕುಲಕರ್ಣಿ ಅವರಿಗೆ ಹ್ಯಾಟ್ರಿಕ್ ಸೋಲಿನ ರುಚಿ ತೋರಿಸಿದರು!

ಈದ್ಗಾ ಹೋರಾಟದಲ್ಲಿ ಮುಂಚೂಣಿ

90ರ ದಶಕದ ಆರಂಭದಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸುವ ಹೋರಾಟದಲ್ಲಿ ಪ್ರಲ್ಹಾದ್‌ ಜೋಶಿ ಅವರು ಮುಂಚೂಣಿಯಲ್ಲಿದ್ದರು. ಕಾಶ್ಮೀರ ಉಳಿಸಿ ಆಂದೋಲನದಲ್ಲೂ ಅವರು ಸಕ್ರಿಯರಾಗಿದ್ದರು. 2014ರಿಂದ 2016ರ ಅವಧಿಯಲ್ಲಿ ಜೋಶಿ ಅವರು ರಾಜ್ಯ ಬಿಜೆಪಿ ಅಧ್ಯಕ್ಷರೂ ಆಗಿದ್ದರು.
ಜೋಶಿ ಅವರು ಈಗ ಕೇಂದ್ರದ ನರೇಂದ್ರ ಮೋದಿ ಸಂಪುಟದಲ್ಲಿ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳಂಥ ಮಹತ್ವದ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಕೋರ್ ಟೀಮ್‌ನಲ್ಲಿ ಪ್ರಲ್ಹಾದ್‌ ಜೋಶಿ ಅವರೂ ಪ್ರಮುಖರಾಗಿದ್ದಾರೆ.

ಮೂವರು ಸಿನಿ ತಾರೆಯರು ಪ್ರತಿನಿಧಿಸಿದ್ದ ಮಂಡ್ಯ ಲೋಕಸಭೆ ಕ್ಷೇತ್ರ!

ಮಂಡ್ಯ ಲೋಕಸಭೆ ಕ್ಷೇತ್ರ (Parliament Flashback) ರಾಜ್ಯದ ವಿಶಿಷ್ಟ ಲೋಕಸಭೆ ಕ್ಷೇತ್ರವಾಗಿ ಗಮನ ಸೆಳೆದಿದೆ. ಖ್ಯಾತ ಚಲನಚಿತ್ರ ಕಲಾವಿದರಾದ ಅಂಬರೀಶ್, ರಮ್ಯಾ ಮತ್ತು ಸುಮಲತಾ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದು ವಿಶೇಷ.
1998ರಲ್ಲಿ ಹಿರಿಯ ನಟ ಅಂಬರೀಶ್‌ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿ, ಕಾಂಗ್ರೆಸ್ ಹಿರಿಯ ಮುಖಂಡ ಜಿ. ಮಾದೇಗೌಡ ಅವರನ್ನು 1,80,523 ಮತಗಳ ಭರ್ಜರಿ ಅಂತರದಿಂದ ಸೋಲಿಸಿ ಲೋಕಸಭೆ ಪ್ರವೇಶಿಸಿದರು. ಆದರೆ 1999ರಲ್ಲಿ ಅಂಬರೀಶ್‌ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿ, ಜೆಡಿಎಸ್‌ನ ಕೃಷ್ಣ ಅವರನ್ನು 1,52,180 ಮತಗಳ ಅಂತರದಿಂದ ಸೋಲಿಸಿದರು. 2004ರಲ್ಲಿ ಅಂಬರೀಶ್‌ ಜೆಡಿಎಸ್‌ನ ಡಾ. ಎಸ್‌ ರಾಮೇಗೌಡ ಅವರನ್ನು 1,24,438 ಮತಗಳ ಅಂತರದಿಂದ ಪರಾಭವಗೊಳಿಸಿ ಮೂರನೇ ಬಾರಿ ಗೆದ್ದರು. ಆದರೆ 2009ರ ಚುನಾವಣೆಯಲ್ಲಿ ಜೆಡಿಎಸ್‌ನ ಚಲುವರಾಯಸ್ವಾಮಿ ಅವರ ವಿರುದ್ಧ ಅಂಬರೀಶ್‌ 23,500 ಮತಗಳ ಅಂತರದಿಂದ ಸೋತು ಹೋದರು.

ನಟಿ ರಮ್ಯಾ ಎಂಟ್ರಿ

ಈ ಮಧ್ಯೆ 2013ರ ವಿಧಾನಸಭೆ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಿಂದ ಗೆದ್ದ ಚಲುವರಾಯಸ್ವಾಮಿ ಅವರು ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಹಾಗಾಗಿ 2013ರಲ್ಲಿ ನಡೆದ ಮಂಡ್ಯ ಲೋಕಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದ ನಟಿ ರಮ್ಯಾ, ಜೆಡಿಎಸ್‌ ಅಭ್ಯರ್ಥಿ ಸಿ.ಎಸ್‌. ಪುಟ್ಟರಾಜು ಅವರನ್ನು 33,000 ಮತಗಳ ಅಂತರದಿಂದ ಸೋಲಿಸಿ ಪಾರ್ಲಿಮೆಂಟ್‌ಗೆ ಎಂಟ್ರಿ ಪಡೆದರು. ಆಗ ಅವರ ಲೋಕಸಭೆ ಅವಧಿ ಇದ್ದದ್ದು 8 ತಿಂಗಳು ಮಾತ್ರ! 2014ರಲ್ಲಿ ರಮ್ಯಾ ಮತ್ತೆ ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಿದರು. ಆದರೆ ಜೆಡಿಎಸ್‌ ಅಭ್ಯರ್ಥಿ ಸಿ.ಎಸ್‌. ಪುಟ್ಟರಾಜು ಎದುರು ಕೇವಲ 5,518 ಮತಗಳಿಂದ ಸೋಲು ಕಂಡರು.

ಸುಮಲತಾ-ನಿಖಿಲ್‌ ಕುಮಾರಸ್ವಾಮಿ ಬಿಗ್‌ ಫೈಟ್‌

2019ರ ಎಲೆಕ್ಷನ್‌ನಲ್ಲಿ ಅಂಬರೀಶ್‌ ಅವರ ಪತ್ನಿ ಕಾಂಗ್ರೆಸ್‌ನಿಂದ ಟಿಕೆಟ್‌ ಬಯಸಿದ್ದರು. ಆದರೆ ಕಾಂಗ್ರೆಸ್‌ ಮಂಡ್ಯ ಕ್ಷೇತ್ರವನ್ನು ಆಗಿನ ತನ್ನ ಮಿತ್ರ ಪಕ್ಷವಾದ ಜೆಡಿಎಸ್‌ಗೆ ಒಪ್ಪಿಸಿತು. ದೇಶದ ಗಮನ ಸೆಳೆದಿದ್ದ ಅಂದಿನ ಬಿರುಸಿನ ಸ್ಪರ್ಧೆಯಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಜೆಡಿಎಸ್‌ ಅಭ್ಯರ್ಥಿ, ಎಚ್‌ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರನ್ನು 1,25,876 ಮತಗಳ ಭಾರಿ ಅಂತರದಿಂದ ಪರಾಭವಗೊಳಿಸಿದರು. ಹೀಗೆ ಈವರೆಗೆ ಮೂವರು ತಾರೆಯರು ಮಂಡ್ಯ ಲೋಕಸಭೆ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

Exit mobile version