ದೇವನಹಳ್ಳಿ (ಬೆಂಗಳೂರು): ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bangalore Airport) ಕರ್ತವ್ಯ ನಿರತ ಸಿಐಎಸ್ಎಫ್ ಮಹಿಳಾ ಸಿಬ್ಬಂದಿ ಮೇಲೆ ಪ್ರಯಾಣಿಕನೊಬ್ಬ ಹಲ್ಲೆ ನಡೆಸಿದ ಬಗ್ಗೆ ದೂರು ದಾಖಲಾಗಿದೆ. ಡಿಸೆಂಬರ್ 25ರ ಸಂಜೆ 5:30ಕ್ಕೆ ಘಟನೆ ನಡೆದಿದ್ದು, ಈ ಬಗ್ಗೆ ತಡವಾಗಿ ವಿವರ ಬೆಳಕಿಗೆ ಬಂದಿದೆ.
ಜಾಕಿ ಅಮ್ಮನೂರ್ ಖಾಸಿಂ ಎಂಬ ವ್ಯಕ್ತಿ ಬೆಂಗಳೂರಿನಿಂದ ಕೊಚ್ಚಿನ್‌ಗೆ ಪ್ರಯಾಣ ಬೆಳೆಸುತ್ತಿದ್ದ. ಸೆಕ್ಯೂರಿಟಿ ಚೆಕ್ ಮಾಡುವ ವೇಳೆ ಆತ ಸಿಐಎಸ್‌ಎಫ್ ಮಹಿಳಾ ಇನ್ಸ್‌ಪೆಕ್ಟರ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ದಾಖಲೆ ಕೇಳಿದಾಗ ಆರೋಪಿ ಗ್ರೀನ್ ಕಾರ್ಡ್ ಕಳೆದಿರುವ ಬಗ್ಗೆ ಮಹಿಳಾ ಪೊಲೀಸ್‌ಗೆ ತಿಳಿಸಿದ್ದಾನೆ.
ಆಗ ಅವರು ಲಾಸ್ಟ್ ಆಂಡ್ ಫೌಂಡ್ ವಿಭಾಗಕ್ಕೆ ದೂರು ನೀಡುವಂತೆ ತಿಳಿಸಿದ್ದಾರೆ. ದೂರು ನೀಡಲು ಅನುಕೂಲವಾಗುವ ಫಾರಂ ನೀಡಿದ್ದಾರೆ. ಆದರೆ, ದೂರು ನೀಡಲು ಒಪ್ಪದ ಪ್ರಯಾಣಿಕ ಏಕಾಏಕಿ ದಾಖಲೆಗಳನ್ನು ಮಹಿಳಾ ಸಿಬ್ಬಂದಿ ಮೇಲೆ ಎಸೆದು ಕಿರುಚಾಡಿದ್ದಾನೆ.
ನಿಜವೆಂದರೆ ಆತ ದಾಖಲೆಗಳ ವಿಚಾರದಲ್ಲಿ ಸುಳ್ಳು ಮಾಹಿತಿ ನೀಡಿದ್ದಾನೆ ಎನ್ನಲಾಗುತ್ತಿದೆ. ಇದನ್ನು ಮುಚ್ಚಿ ಹಾಕುವುದಕ್ಕಾಗಿ ಆತ ದಾಖಲೆಗಳನ್ನು ಎಸೆದು ಸೀನ್ ಕ್ರಿಯೇಟ್ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದು ಕಡೆ ದಾಖಲೆ ವಿಚಾರದಲ್ಲಿ, ಇನ್ನೊಂದು ಕಡೆ ಸಿಐಎಸ್‌ಎಫ್ ಮಹಿಳಾ ಇನ್ಸ್‌ಪೆಕ್ಟರ್ ಅವರ ಕರ್ತವ್ಯಕ್ಕೆ ಅಡ್ಡಿ, ನಿಂದನೆ, ಹಲ್ಲೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಯುತ್ತಿದೆ.
ಇದನ್ನೂ ಓದಿ | Bengaluru airport | ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಮೊದಲ ಬಾರಿಗೆ 3 ಫುಲ್ ಬಾಡಿ ಸ್ಕ್ಯಾನರ್ ಅಳವಡಿಕೆ