ಬೆಂಗಳೂರು: ಚೆನ್ನೈ-ಬೆಂಗಳೂರು ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕರೊಬ್ಬರು ಬ್ಯಾಗ್ ಬಿಟ್ಟು ಹೋಗಿದ್ದರು. ಇದನ್ನು ಗಮನಿಸಿದ ರೈಲ್ವೆ ಸಿಬ್ಬಂದಿ ಇದೀಗ ಬ್ಯಾಗ್ ಅನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಫೆ.27ರಂದು ಕೆಎಸ್‌ಆರ್ ರೈಲು ನಿಲ್ದಾಣದಲ್ಲಿ ಪ್ಯಾಂಟ್ರಿ ಕಾರ್ ಸಿಬ್ಬಂದಿಗೆ 3,000 ರೂ. ನಗದು ಹೊಂದಿದ್ದ ಪರ್ಸ್, ಲ್ಯಾಪ್‌ಟಾಪ್, ಬಟ್ಟೆ ಮತ್ತು ಸಿಹಿತಿಂಡಿಗಳನ್ನು ಇಟ್ಟಿದ್ದ ಒಂದು ಬ್ಯಾಗ್ ಸಿಕ್ಕಿತ್ತು. ಚೆನ್ನೈಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಗಿರೀಶ್‌ಕುಮಾರ್ ಎಂಬುವವರು ಅವರು ಕುಳಿತಿದ್ದ ಸಿ-1 ಕೋಚ್ ಆಸನ ಸಂಖ್ಯೆ 34ರಲ್ಲಿ ಬ್ಯಾಗ್ ಅನ್ನು ಬಿಟ್ಟು ಹೋಗಿದ್ದರು.
ಈ ಬ್ಯಾಗ್ ಪ್ಯಾಂಟ್ರಿ ಕಾರ್ ಸಿಬ್ಬಂದಿಗೆ ಸಿಕ್ಕಿದ್ದು ಬಳಿಕ ಚೀಫ್ ಟಿಕೆಟ್ ಇನ್ಸ್‌ಪೆಕ್ಟರ್ ಅರವಿಂದ್ ಕುಮಾರ್ ಅವರಿಗೆ ಹಸ್ತಾಂತರಿಸಿದ್ದಾರೆ. ಬಳಿಕ ಇನ್ಸ್‌ಪೆಕ್ಟರ್ ಅರವಿಂದ್ ಕುಮಾರ್ ತಮ್ಮ ಬಳಿ ಇದ್ದ ಚಾರ್ಟ್‌ನಿಂದ ಪ್ರಯಾಣಿಕರ ಪಿಎನ್‌ಆರ್ (PNR) ಸಂಖ್ಯೆ ಸಹಾಯದಿಂದ ರೈಲ್ವೇ ಮಾಹಿತಿ ಕೇಂದ್ರದ ವ್ಯವಸ್ಥೆ (CRIS) ಮೂಲಕ ಪ್ರಯಾಣಿಕರ ಮೊಬೈಲ್ ಸಂಖ್ಯೆಯನ್ನು ಪತ್ತೆಹಚ್ಚಿದ್ದಾರೆ. ಬಳಿಕ ಗಿರೀಶ್ ಕುಮಾರ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಮಂಗಳವಾರ ಮೇಲಧಿಕಾರಿಗಳ ಸಮ್ಮುಖದಲ್ಲಿ ಬ್ಯಾಗ್ ಅನ್ನು ಹಸ್ತಾಂತರಿಸಿದ್ದಾರೆ.
ಇದನ್ನೂ ಓದಿ: Murder Case: ಹಣಕ್ಕಾಗಿ ಪೀಡಿಸುತ್ತಿದ್ದ ಕುಡುಕ ಮಗನನ್ನು ಅಪ್ಪನೇ ಆಯುಧದಿಂದ ತಲೆಗೆ ಹೊಡೆದು ಕೊಂದ
ರೈಲ್ವೇ ಅಧಿಕಾರಿಗಳ ಪ್ರಾಮಾಣಿಕತೆಗೆ ಕಾರ್ಯವೈಖರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಕಳೆದುಹೋದ ತಮ್ಮ ವಸ್ತುಗಳನ್ನು ಹಿಂದಿರುಗಿಸುವಲ್ಲಿ ರೈಲ್ವೆ ಅಧಿಕಾರಿಗಳ ನಿಷ್ಠೆ ಮತ್ತು ಪ್ರಾಮಾಣಿಕತೆಯಾನ್ನು ಶ್ಲಾಘಿಸಿದರು. ಜತೆಗೆ ಕರ್ನಾಟಕ ರಾಜ್ಯ ಪೊಲೀಸರಿಗೆ ನೀಡಿದ ಇ-ಲಾಸ್ಟ್ ದೂರನ್ನು ಹಿಂಪಡೆದಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ