Site icon Vistara News

Shravanabelagola Swameeji: ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ಅಗಲಿಕೆ ದುಃಖಕರ: ವಿ. ನಾಗರಾಜ್ ಸಂತಾಪ

passing away of Charukeerthi Bhattaraka Pattacharya Mahaswami is sad Nagaraj condolences Shravanabelagola Swameeji updates

ಬೆಂಗಳೂರು: ಗುರುವಾರ ಜಿನೈಕ್ಯರಾದ ಶ್ರವಣಬೆಳಗೊಳ ಜೈನಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ (Shravanabelagola Swameeji) ಮಹಾಸ್ವಾಮಿಗಳ ಅಗಲಿಕೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಸಂಘಚಾಲಕರಾದ ವಿ. ನಾಗರಾಜ್ ಸಂತಾಪ ಕೋರಿದ್ದಾರೆ.

ಕರ್ನಾಟಕದ ಜೈನ ಸಮುದಾಯದ ಹಿರಿಯ ಗುರುಗಳಾಗಿದ್ದ ಶ್ರವಣಬೆಳಗೊಳದ ಮಠದ ಧರ್ಮಾಚಾರ್ಯರಾದ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಯವರ ಅಗಲಿಕೆ ಅತ್ಯಂತ ದುಃಖಕರ.

ಇದನ್ನೂ ಓದಿ: Amit Shah Visit : ಅಮಿತ್‌ ಶಾಗೆ ಬಿಎಸ್‌ವೈ ನಿವಾಸದಲ್ಲಿ ಬೆಳಗ್ಗಿನ ಉಪಾಹಾರ, ಪವರ್‌ ಸೆಂಟರ್‌ ಆದ ಕಾವೇರಿ ನಿವಾಸ

ಹಲವಾರು ಮಹಾಮಸ್ತಕಾಭಿಷೇಕಗಳನ್ನು ನೆರವೇರಿಸಿದ್ದ ಅವರು ಐದು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿಕೊಂಡಿದ್ದರು. ಅಷ್ಟೇ ಅಲ್ಲದೆ ಜೈನ ಮತದ ನವೋನ್ನತಿಗಾಗಿ, ಭಗವಾನ್ ಮಹಾವೀರರ ವಿಚಾರಗಳ ಅನುಷ್ಠಾನಕ್ಕಾಗಿ ಅಹರ್ನಿಶಿ ದುಡಿದವರು. ಶ್ರವಣಬೆಳಗೊಳವನ್ನು ಜೈನ ತತ್ತ್ವಶಾಸ್ತ್ರದ ಪ್ರಮುಖ ಕೇಂದ್ರವಾಗಿಸುವಲ್ಲಿ ಅವರ ಪಾತ್ರ ಹಿರಿದು. ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದ ಅವರು ಅಲ್ಲಿಗೇ ನಿಲ್ಲದೆ ಅದರ ಕಲಿಕೆಗೆ, ಅಭ್ಯುದಯಕ್ಕೆ ವ್ಯವಸ್ಥೆ ಮಾಡಿದರು. ಆ ಮೂಲಕ ಪ್ರಾಕೃತ ಭಾಷೆಯ ಪುನರುತ್ಥಾನಕ್ಕೆ ಶ್ರಮಿಸಿದರು. ಅತ್ಯಂತ ಸಮಾಜಮುಖಿಯಾಗಿದ್ದ ಅವರು ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯಗಳನ್ನು ಗ್ರಾಮೀಣ ಜನರಿಗೆ ತಲುಪಿಸಲು ಶ್ರಮ ವಹಿಸಿದ್ದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ನಿರಂತರ ಸಂಪರ್ಕ ಮತ್ತು ಒಡನಾಟ ಹೊಂದಿದ್ದ ಅವರು ವಿಶ್ವ ಹಿಂದು ಪರಿಷತ್ತಿನ ಅನೇಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ರಾಮಮಂದಿರ ಹೋರಾಟದ ಸಂದರ್ಭದಲ್ಲಿ ಅವರು ನೀಡಿದ ಬೆಂಬಲ ಸ್ಮರಣೀಯವಾದುದು. ರಾಷ್ಟ್ರದ, ಧರ್ಮದ ಪರವಾದ ಅವರ ಅಚಲವಾದ ನಿಲುವು, ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸಿದ ಅವರ ದಾರಿ ಎಂದಿಗೂ ಪ್ರೇರಣೀಯ.

ಅವರ ಜಿನೈಕ್ಯರಾದ ದುಃಖವನ್ನು ಭರಿಸುವ ಶಕ್ತಿಯನ್ನು ಸಮಸ್ತ ಹಿಂದು ಸಮಾಜಕ್ಕೆ ಹಾಗೂ ಅವರ ಅಪಾರ ಅನುಯಾಯಿಗಳಿಗೆ ಆ ಭಗವಂತನು ನೀಡಲಿ ಮತ್ತು ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ವಿ. ನಾಗರಾಜ್ ಕೋರಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಂಬನಿ

“ಶ್ರೀಕ್ಷೇತ್ರ ಶ್ರವಣಬೆಳಗೊಳದ ಪರಮ ಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ನಮ್ಮನ್ನಗಲಿದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ಪೂಜ್ಯರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವಾಗಿದ್ದು, ಅವರ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ಅವರ ಅಪಾರ ಸಂಖ್ಯೆಯ ಭಕ್ತರಿಗೆ ಈ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ” ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದರು.

ಇದನ್ನೂ ಓದಿ: Amit Shah Visit : ವಿಜಯೇಂದ್ರ ಹೆಗಲ ಮೇಲೆ ಕೈ, ಅವರಿಂದಲೇ ಹೂಗುಚ್ಛ ಸ್ವೀಕಾರ; ದೊಡ್ಡ ಸಂದೇಶ ರವಾನಿಸಿದ ಅಮಿತ್‌ ಶಾ

ಮಾಜಿ ಸಿಎಂ ಕುಮಾರಸ್ವಾಮಿ ಸಂತಾಪ

ಶ್ರವಣಬೆಳಗೊಳದ ಶ್ರೀ ಜೈನಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಅವರು ಅಗಲಿದ ವಿಷಯ ಕೇಳಿ ನನಗೆ ತೀವ್ರ ಆಘಾತ ಉಂಟಾಗಿದೆ. ಶ್ರೀ ಭಗವಾನ್ ಬಾಹುಬಲಿ ಅವರ ಶಾಂತಿ, ಅಹಿಂಸೆ, ಸಹನೆ ತತ್ವಗಳನ್ನು ಪಸರಿಸುತ್ತಾ ಜನರಲ್ಲಿ ಅರಿವಿನ ಬೆಳಕು ಮೂಡಿಸಿದ್ದ ಪರಮಪೂಜ್ಯರು ನಾಡಿಗೆ ಅಪಾರ ಸೇವೆ ಸಲ್ಲಿಸಿದ್ದರು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಮಠದ ಭಕ್ತರು, ನಾಡಿನ ಜನರಿಗೆ ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

Exit mobile version