ಮಂಗಳೂರು: ಇಲ್ಲಿನ ಪಲ್ಗುಣಿ ನದಿ (Palguni River) ಮೂಲಕ ಸಮುದ್ರಕ್ಕೆ ಕೈಗಾರಿಕೆಯ ವಿಷಕಾರಿ ಕಲುಷಿತ ನೀರನ್ನು ಸಂಸ್ಕರಿಸದೇ ಬಿಡುತ್ತಿದ್ದ ಬೈಕಂಪಾಡಿಯ ಖಾಸಗಿ ಕಂಪನಿಯ ಅಡುಗೆ ಎಣ್ಣೆ ತಯಾರಿಕಾ ಘಟಕವನ್ನು ಮುಚ್ಚಿಸಲು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (Karnataka State Pollution Control Board – KSPCB) ಶಿಫಾರಸು ಮಾಡಿದೆ.
1974ರ ಜಲ ಕಾಯ್ದೆಯನ್ನು ಉಲ್ಲಂಘನೆ ಮಾಡಿರುವ ಸಂಬಂಧ ಕೆಎಸ್‌ಪಿಸಿಬಿ ಪ್ರಾದೇಶಿಕ ಕಚೇರಿಯ ಮಂಡಳಿಗೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಶಿಫಾರಸು ಮಾಡಿದೆ. ಅಲ್ಲದೆ, ಕೆಎಸ್‌ಪಿಸಿಬಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿಯು, ಮಂಡಳಿಯ ಸದಸ್ಯ ಕಾರ್ಯದರ್ಶಿಗೆ ಮೇ 31ರಂದು ಪತ್ರ ಬರೆದು ಕೋರಿದ್ದಾರೆ.
ಇದನ್ನೂ ಓದಿ: Odisha Train Accident : ಮರೆಯದಿರಿ ಪ್ಲೀಸ್, ರೈಲ್ವೆಯಿಂದ ಕೇವಲ 35 ಪೈಸೆಗೆ 10 ಲಕ್ಷ ರೂ. ವಿಮೆ ಸಿಗುತ್ತೆ
ಹಲವು ಕಂಪನಿಗಳ ಕಾರ್ಯಾಚರಣೆ
ಮಂಗಳೂರು ಹೊರ ವಲಯ ಕೂಳೂರು, ಜೊಕಟ್ಟೆ ಪ್ರದೇಶದಲ್ಲಿ ಹಲವು ಅಡುಗೆ ಎಣ್ಣೆ ತಯಾರಿಕಾ ಕಂಪನಿಗಳು ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಣೆ ಮಾಡುತ್ತಿವೆ. ಈ ಪ್ರದೇಶವು ಪಲ್ಗುಣಿ ನದಿಯು ಸಮುದ್ರ ಸೇರುವ ಜಾಗವಾದ ಕಾರಣ ಕಂಪನಿಗಳು ನದಿಗೆ ನೇರವಾಗಿ ತ್ಯಾಜ್ಯ ಬಿಡುತ್ತವೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಕೇಳಿದಾಗ ಕಂಪನಿಯ ಒಳಗೆ ಶುದ್ಧೀಕರಣ ಘಟಕ ಮಾಡಿ ತ್ಯಾಜ್ಯ ನೀರಿನ ಮರು ಬಳಕೆ ಮಾಡಲಾಗುತ್ತದೆ ಎಂಬ ಮಾಹಿತಿ ಸಿಕ್ಕಿತ್ತು. ಆದರೆ, ವಾಸ್ತವದಲ್ಲಿ ಬೇರೆಯೇ ಇದೆ ಎಂಬ ಅಂಶ ಈಗ ಬಯಲಾಗಿದೆ.
ಖಾಸಗಿ ಕಂಪನಿಗೆ ಸಂಕಷ್ಟ
ಹಲವು ವರ್ಷದಿಂದ ರುಚಿ ಗೋಲ್ಡ್ ಎಂಬ ಹೆಸರಿನಲ್ಲೇ ಇದ್ದ ಈ ಕಂಪನಿಯು ವರ್ಷದ ಹಿಂದೆ ಮತ್ತೊಂದು ಖಾಸಗಿ ಸಂಸ್ಥೆಯ ಒಡೆತನಕ್ಕೆ ಒಳಪಟ್ಟಿದೆ. ಆದರೆ, ಹಿಂದಿನ ಕಂಪನಿ ಮಾಡಿದ ಕೆಲಸವನ್ನೇ ಈ ಖಾಸಗಿ ಕಂಪನಿಯೂ ಮುಂದುವರಿಸಿಕೊಂಡು ಬಂದಿದೆ. ಜೋಕಟ್ಟೆಯ ಪರಿಸರದ ಜನರು ಈ ಹಿಂದಿನಿಂದಲೂ ಸುತ್ತಮುತ್ತಲಿನ ಕಂಪನಿಗಳ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಕಂಪನಿಗಳು ನದಿಯನ್ನು ಮಲಿನ ಮಾಡುತ್ತಿವೆ ಎಂದು ಪರಿಸರ ಮಾಲಿನ್ಯ ಇಲಾಖೆಗೆ ದೂರಗಳನ್ನೂ ನೀಡಿದ್ದಾರೆ. ಈ ಹಿಂದೆ ಪತ್ರಿಕಾ ವರದಿ ಆಧಾರದಲ್ಲಿ ಹಸಿರು ಪೀಠ ಸುಮೋಟೋ ಕೇಸ್ ದಾಖಲಿಸಿ ಇಲ್ಲಿನ ಕಂಪನಿಗಳಿಂದ ಆಗುವ ಮಾಲಿನ್ಯದ ಬಗ್ಗೆ ತನಿಖೆ ಕೂಡಾ ನಡೆಸಿತ್ತು. ಆದರೆ ಸ್ಥಳೀಯ ಜನರಿದ್ದ ಸಮಿತಿಯು ಅಧಾನಿ ಸೇರಿ ಕೆಲವು ಕಂಪನಿಗಳನ್ನು ಹೊರತುಪಡಿಸಿ ಉಳಿದ ಸಣ್ಣ ಪುಟ್ಟ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹಸಿರು ಪೀಠಕ್ಕೆ ವರದಿ ನೀಡಿತ್ತು. ಆದರೆ, ಈಗ ಈ ಕಂಪನಿಯ ಅಕ್ರಮ ಬಯಲಾದ ಹಿನ್ನೆಲೆಯಲ್ಲಿ ಜಿಲ್ಲಾ ಪರಿಸರ ಮಾಲಿನ್ಯ ಇಲಾಖೆ ಕಂಪನಿಗೆ ಬೀಗ ಜಡಿಯಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಶಿಫಾರಸು ಮಾಡಿದೆ.
ಇದನ್ನೂ ಓದಿ: bamul: ಹೇಳ್ದೇ ಕೇಳ್ದೇ ನಿರ್ಧಾರ ಮಾಡಿದ್ರೆ ಸರಿ ಇರೋಲ್ಲ: ಹಾಲಿನ ಸಬ್ಸಿಡಿ ಇಳಿಸಿದ ಬಮುಲ್‌ಗೆ ಸಿದ್ದರಾಮಯ್ಯ ವಾರ್ನಿಂಗ್
ಕಲುಷಿತ ಪಲ್ಗುಣಿ ನದಿಯಿಂದ ಕೃಷಿ ನಾಶ, ಕುಡಿಯುವ ನೀರಿಗೂ ಕಂಟಕ
ಕಂಪನಿಗಳ ಕೆಮಿಕಲ್ ನದಿ ಸೇರಿ ನದಿಯಲ್ಲಿನ ಮತ್ಸ್ಯ ಸಂಕುಲ ಈಗಾಗಲೇ ನಾಶವಾಗಿದೆ. ನದಿಯಲ್ಲಿ ಸಿಗುತ್ತಿದ್ದ ಕಪ್ಪೆ ಚಿಪ್ಪು (ಮರುವಾಯಿ), ಸಿಗಡಿ, ಕಾಣೆ ಮೀನು, ಮೊದಲಾದ ಮೀನುಗಳು ಈಗ ಸಿಗುತ್ತಿಲ್ಲ. ಇದರಿಂದ ನದಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಅನೇಕ ಕುಟುಂಬಗಳು ಈಗ ಸಮುದ್ರ ಮೀನುಗಾರಿಕೆಯತ್ತ ವಲಸೆ ಹೋಗಿವೆ. ಇನ್ನು ನದಿ ನೀರು ಕಲುಷಿತವಾದ ಕಾರಣ ಸಣ್ಣ ರೈತರು ಕೃಷಿ ಮಾಡುವುದನ್ನು ಕೂಡ ನಿಲ್ಲಿಸಿದ್ದಾರೆ. ಎಲ್ಲದಕ್ಕಿಂತ ಮಿಗಿಲಾಗಿ ಪಲ್ಗುಣಿ ನದಿಯ ಇಕ್ಕೆಲಗಳಲ್ಲಿ ಇರುವ ಮನೆಗಳ ಬಾವಿ ನೀರು ಕುಡಿಯಲು ಅಸಾಧ್ಯ ಪರಿಸ್ಥಿತಿಯನ್ನು ತಲುಪಿದೆ. ಇಲ್ಲಿ ನೀರನ್ನು ಸಂಗ್ರಹಿಸಿ ಲ್ಯಾಬ್‌ನಲ್ಲಿ ಟೆಸ್ಟ್ ಮಾಡಲಾಗಿದ್ದು, ಇದು ಕುಡಿಯಲು ಯೋಗ್ಯ ಇಲ್ಲ ಎಂಬ ವರದಿ ಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.