Site icon Vistara News

Karnataka election 2023: ಗಣಿನಗರಿ ಬಳ್ಳಾರಿಯಲ್ಲಿ ಸಣ್ಣಪುಟ್ಟ ಘಟನೆ ಬಿಟ್ಟರೆ, ಶಾಂತಿಯುತ ಮತದಾನ

Ballari City Congress candidate Narabharat Reddy and his couple voting

ಬಳ್ಳಾರಿ: ವಿಧಾನಸಭಾ ಚುನಾವಣೆ (Karnataka election 2023) ಹಿನ್ನೆಲೆಯಲ್ಲಿ ಗಣಿನಗರಿ ಬಳ್ಳಾರಿಯಲ್ಲಿ ಸಣ್ಣಪುಟ್ಟ ಘಟನೆ ಹೊರತುಪಡಿಸಿ, ಶಾಂತಿಯುತ ಮತದಾನವಾಗಿದೆ.

ಮತಗಟ್ಟೆಯಲ್ಲಿಯೇ ಹೆರಿಗೆ, ಕ್ಷುಲ್ಲಕ ಕಾರಣಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಾರಾಮಾರಿ, ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ, ಶತಾಯುಷಿಗಳ ಉತ್ಸಾಹದ ಮತದಾನ, ಕಂಪ್ಲಿಯಲ್ಲಿ ಪಕ್ಷೇತರ ಅಭ್ಯರ್ಥಿ ಮಂಗಳಮುಖಿಯಿಂದ ಮತದಾನ, ಒಂದೆರೆಡು ಕಡೆ ತಾಂತ್ರಿಕ ದೋಷದಿಂದ ನಿಧಾನಗತಿಯ ಮತದಾನ, ಬಿರುಬಿಸಿಲಿನ ನಡುವೆ ಮತದಾರರ ಮತದಾನದ ಉತ್ಸಾಹ, ನಿರೀಕ್ಷೆಗೂ ಮೀರಿದ ಮತದಾನದ ಪರ್ಸೆಂಟೇಜ್, ಇಷ್ಟು ಗಣಿ ಜಿಲ್ಲೆಯ ಬಳ್ಳಾರಿಯ ಇಂದಿನ ಮತದಾನದ ಹೈಲೈಟ್‌ಗಳು.

ಇದನ್ನೂ ಓದಿ: Bridge Tournament: ಪಾಕ್​ನಲ್ಲಿ ಭುಗಿಲೆದ್ದ ಹಿಂಸಾಚಾರ; ಬ್ರಿಡ್ಜ್‌ ಟೂರ್ನಿಗೆ ಬಂದಿದ್ದ ಭಾರತ ತಂಡಕ್ಕೆ ತಕ್ಷಣ ತವರಿಗೆ ಮರಳಲು ಸೂಚನೆ

ಶತಾಯುಷಿಗಳಿಂದ ಮತದಾನ

ಕಂಪ್ಲಿಯಲ್ಲಿ 103 ವರ್ಷದ ಬಸಮ್ಮ ಮತದಾನ ಮಾಡಿದರೆ, ಕಮ್ಮರಚೇಡಿನಲ್ಲಿ 108 ವರ್ಷದ ನಂಜಮ್ಮ, ಎರಡು ಕೈಗಳಿಲ್ಲದ ಮುಸ್ತಫ್ ಕೊಳಗಲ್‌ನಲ್ಲಿ ಮತದಾನ ಮಾಡಿ, ಮತದಾರರಿಗೆ ಪ್ರೇರಣೆಯಾದರು. ಇನ್ನು ಕೊರ್ಲಗುಂದಿ ಗ್ರಾಮದಲ್ಲಿ ಮತದಾನ ಮಾಡಲು ಬಂದ ಮಣಿಲಾ ಎನ್ನುವ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಪಕ್ಕದ ಕೋಣೆಯಲ್ಲಿ ಗಂಡು ಮಗುವಿನ ಜನ್ಮ ನೀಡಿದ್ದಾಳೆ, ತಾಯಿ ಮತ್ತು ಮಗು ಆರೋಗ್ಯದಿಂದ ಇದ್ದಾರೆ. ಹೆರಿಗೆ ಬಳಿಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳಿಸಿಕೊಡಲಾಗಿದೆ.

ಹಲ್ಲೆ, ಒಬ್ಬನಿಗೆ ಗಾಯ

ಸಂಜೀವರಾಯನ ಕೋಟೆ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಇಬ್ಬರು ಕಾರ್ಯಕರ್ತರ ಮಧ್ಯೆ ಗಲಾಟೆ ಸಂಭವಿಸಿ ಕಾಂಗ್ರೆಸ್ ಕಾರ್ಯಕರ್ತ ಉಮೇಶ್‌ ಗೌಡ ತಲೆಗೆ ಗಾಯವಾಗಿದ್ದು, ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು, ಘಟನೆಯ ಸ್ಥಳಕ್ಕೆ ಎಸ್ಪಿ ರಂಜಿತ್‌ ಕುಮಾರ್ ಬಂಡಾರು ಮತ್ತು ಕಾಂಗ್ರೆಸ್ ಅಭ್ಯರ್ಥಿ ಬಿ. ನಾಗೇಂದ್ರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕಂಪ್ಲಿಯ ಪಕ್ಷೇತರ ಅಭ್ಯರ್ಥಿ ಮಂಗಳಮುಖಿ ರಾಮಕ್ಕ ಬಾದನಹಟ್ಟಿಯಲ್ಲಿ ಮತದಾನ ಮಾಡಿದರು.

ಇದನ್ನೂ ಓದಿ: IPL 2023 : ಗೆಲುವಿನ ಹಳಿಗೆ ಮರಳುವುದೇ ರಾಜಸ್ಥಾನ್​ ರಾಯಲ್ಸ್​

ಗಂಟೆಯ ಅಂತರದಲ್ಲಿ ಮತದಾನದ ಮಾಹಿತಿ

ಬೆಳಗ್ಗೆ 11 ಗಂಟೆ ಸುಮಾರಿಗೆ ಜಿಲ್ಲೆಯಲ್ಲಿ ಶೇ. 23.76 ಸರಾಸರಿ ಮತದಾನವಾಗಿತ್ತು. ಮಧ್ಯಾಹ್ನ 1 ಗಂಟೆಗೆ ಶೇ. 39.74, ಮಧ್ಯಾಹ್ನ 3 ಗಂಟೆಗೆ ಶೇ. 53.2 ಸರಾಸರಿ ಮತದಾನ, ಸಂಜೆ 5 ಗಂಟೆಗೆ ಶೇ. 67.68 ಮತದಾನವಾಗಿತ್ತು. ಸಂಜೆ 5 ಗಂಟೆಗೆ ಕಂಪ್ಲಿ ಕ್ಷೇತ್ರದಲ್ಲಿ ಶೇ.78.39 ಅತಿಹೆಚ್ಚು ಮತದಾನವಾಗಿದ್ದರೆ, ಬಳ್ಳಾರಿ ನಗರದಲ್ಲಿ ಶೇ 54.84 ರಷ್ಟು ಕಡಿಮೆ ಮತದಾನವಾಗಿತ್ತು.

ಮತಯಂತ್ರ ದೋಷ

ಮತದಾನ ಸಂದರ್ಭದಲ್ಲಿ ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯ ಸಂಗನಕಲ್ಲು ಗ್ರಾಮದಲ್ಲಿ ಕೆಲ ಕಾಲ ಮತದಾನ ನಿಧಾನ ಗತಿಯ ನಡೆಯಲು ಕಾರಣವಾಗಿದ್ದರೆ, ತಾಳೂರಿನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಮತದಾನ ವಿಳಂಬವಾಗಿದೆ. ಇನ್ನು ಎಪಿಎಂಸಿಯಲ್ಲಿ ನಿಧಾನಗತಿಯ ಮತದಾನದಿಂದಾಗಿ 5.30 ಸುಮಾರಿಗೆ ನೂರಾರು ಜನರು ಮತದಾನ ಮಾಡಲು ಸಾಲುಗಟ್ಟಿ ನಿಂತಿದ್ದು ಬಿಟ್ಟರೆ ಅಂತಹ ದೊಡ್ಡ ಸಮಸ್ಯೆಗಳು ಮತದಾನದ ಸಂದರ್ಭದಲ್ಲಿ ಕಂಡು ಬರಲಿಲ್ಲ.

ಬಳ್ಳಾರಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಬಿ. ನಾಗೇಂದ್ರ ಅವರು ಕುಟುಂಬದೊಂದಿಗೆ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.

ಇದನ್ನೂ ಓದಿ: IPL 2023: ಸೂರ್ಯಕುಮಾರ್​ ಬ್ಯಾಟಿಂಗ್​ಗೆ ವಿಶೇಷ ರೀತಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ ಗವಾಸ್ಕರ್​​

ಅಭ್ಯರ್ಥಿಗಳು ಮತ್ತು ಪ್ರಮುಖ ಮತದಾನ

ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಕೆಆರ್‌ಪಿ ಪಕ್ಷದ ಅಭ್ಯರ್ಥಿ ಲಕ್ಷ್ಮಿ ಅರುಣಾ ಅವರು ಬೆಳಗ್ಗೆ 6.30ಕ್ಕೆ ಹವಂಭಾವಿ ಮತಗಟ್ಟೆ ಬಂದಿದ್ದರು. ಕುರುಬ ಸಮಾಜದ ದಂಪತಿಗಳು ಮತ ಹಾಕಿದ ನಂತರ ಲಕ್ಷ್ಮಿ ಮತ ಚಲಾಯಿಸಿದರೆ, ಅದೇ ಮತಗಟ್ಟೆಯಲ್ಲಿ 9.30 ಕ್ಕೆ ಬಿಜೆಪಿ ಅಭ್ಯರ್ಥಿ ಜಿ.ಸೋಮಶೇಖರ ರೆಡ್ಡಿ ಮತದಾನ ಮಾಡಿದರು, ಬಾಲಭಾರತಿ ಶಾಲೆಯ ಮತಗಟ್ಟೆಯಲ್ಲಿ ಬಳ್ಳಾರಿ ನಗರ ಕಾಂಗ್ರೆಸ್ ಅಭ್ಯರ್ಥಿ ನಾರಾಭರತ್‌ ರೆಡ್ಡಿ ದಂಪತಿ, ಅವರ ಚಿಕ್ಕಪ್ಪ ನಾರಾ ಪ್ರತಾಪ ರೆಡ್ಡಿ, ಪತ್ನಿ ನಾರಾ ಶೈಲಜಾ ಅವರು, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಬಿ.ನಾಗೇಂದ್ರ, ದೇವಿನಗರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಬಿ. ಶ್ರೀರಾಮುಲು ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದರು.

73 ಸೂಕ್ಷ್ಮ ಮತಗಟ್ಟೆಗಳು

ಗಣಿ ಜಿಲ್ಲೆಯ ಒಟ್ಟಾರೆ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 1222 ಮತಗಟ್ಟೆಗಳ ವ್ಯವಸ್ಥೆ ಮಾಡಲಾಗಿತ್ತು. ಅದರಲ್ಲಿ 295 ಸೂಕ್ಷ್ಮ ಮತ್ತು 73 ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಿ ಅಗತ್ಯ ಬಂದೋಬಸ್ತ್ ಏರ್ಪಡಿಸಲಾಗಿತ್ತು. 5815 ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಪ್ರತಿ ಕ್ಷೇತ್ರಕ್ಕೆ ಎರಡು ಪಿಂಕ್ ಮತಗಟ್ಟೆಗಳ ವ್ಯವಸ್ಥೆ ಮಾಡಲಾಗಿತ್ತು. ಭದ್ರತೆಗೆ 3 ಸಾವಿರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.

Exit mobile version