Site icon Vistara News

Road Accident : ವೇಗವಾಗಿ ಬ‌ಂದು ನವಿಲಿಗೆ ಗುದ್ದಿದ ಬೈಕ್‌; ಗಿಡದ ಮೇಲೆ ಹಾರಿ ಬಿದ್ದ ಬೈಕ್‌: ನವಿಲು ಸಾವು

Bike accident in chikkodi and Peacock dies

ಚಿಕ್ಕೋಡಿ: ಬೈಕ್‌ನಲ್ಲಿ ಮಗುವಿನೊಂದಿಗೆ ದಂಪತಿ ಬರುತ್ತಿದ್ದ ವೇಳೆ ರಾಯಬಾಗ ತಾಲೂಕಿನ ಯಡ್ರಾಂವ ರಸ್ತೆ ಬಳಿ ನವಿಲೊಂದು ಅಡ್ಡಬಂದಿದ್ದು, ಅಪಘಾತ (Road Accident) ಸಂಭವಿಸಿದೆ. ವೇಗವಾಗಿ ಬರುತ್ತಿದ್ದ ಕಾರಣ ನವಿಲಿಗೆ ಬೈಕ್‌ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್‌ ಗಾಳಿಯಲ್ಲಿ ಹಾರಿದ್ದು, ರಸ್ತೆ ಪಕ್ಕದಲ್ಲಿರುವ ಗಿಡಕ್ಕೆ ಹೋಗಿ ಸಿಲುಕಿಕೊಂಡಿದೆ. ಅಲ್ಲದೆ, ಬೈಕ್‌ನಲ್ಲಿದ್ದ ಮಗು ಮತ್ತು ದಂಪತಿಗೆ ಗಾಯಗಳಾಗಿವೆ. ನವಿಲು ಸ್ಥಳದಲ್ಲೇ ಮೃತಪಟ್ಟಿದೆ.

ದಂಪತಿಯು ಎಲ್ಲಿಂದ ಹೊರಟಿದ್ದರು ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ವೇಳೆ ವೇಗವಾಗಿ ಬರುತ್ತಿದ್ದರಿಂದ ಡಿಕ್ಕಿ ಹೊಡೆದ ರಭಸಕ್ಕೆ ನವಿಲಿಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಅಸುನೀಗಿದೆ. ಇನ್ನು ದಂಪತಿ ಹಾಗೂ ಮಗುವಿಗೆ ಸಹ ತೀವ್ರ ಪೆಟ್ಟಾಗಿದೆ.

ಇದನ್ನೂ ಓದಿ: Hottest June: 122 ವರ್ಷಗಳಲ್ಲೇ ಈ ವರ್ಷದ ಜೂನ್‌ ಅತ್ಯಂತ ಬಿಸಿ, ಅತೀ ಕಡಿಮೆ ಮಳೆ!

ತಕ್ಷಣವೇ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ರಕ್ಷಣೆಗೆ ದಾವಿಸಿದ್ದಾರೆ. ಗಾಯಗೊಂಡ ದಂಪತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.

ಪಾದಚಾರಿಗೆ ಗುದ್ದಿ ಸಾಯಿಸಿ ವಾಹನ ಪರಾರಿ; ಲಾರಿ ಡಿಕ್ಕಿಯಾಗಿ ಶಿಕ್ಷಕಿ ಸಾವು

ಆನೇಕಲ್: ಪಾದಚಾರಿಯೊಬ್ಬರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿದ್ದು, ವ್ಯಕ್ತಿ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ರಾಮಕೃಷ್ಣಾಪುರ ಗೇಟ್ ಬಳಿ ನಡೆದಿದೆ.

ಸೂರ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಅಪರಿಚಿತ ವಾಹನ ಗುದ್ದಿದ್ದು, ಬಳಿಕ ನಿಲ್ಲಿಸದೆ ಪರಾರಿಯಾಗಿದೆ. ಗುದ್ದಿದ ರಭಸಕ್ಕೆ ಪಾದಚಾರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೆಳಗ್ಗೆ 6.30ರ ಸುಮಾರಿಗೆ ಅಪಘಾತ ನಡೆದಿದೆ. ಮೃತಪಟ್ಟ ಪಾದಚಾರಿ ಗುರುತು ಇನ್ನೂ ಪತ್ತೆಯಾಗಿಲ್ಲ. ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪರಾರಿಯಾಗಿರುವ ವಾಹನ ಹಾಗೂ ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ.

ಬೈಕ್‌ಗೆ ಲಾರಿ ಡಿಕ್ಕಿ, ಶಿಕ್ಷಕಿ ಮೃತ್ಯು

ಹೊಸಕೋಟೆ: ಚಲಿಸುತ್ತಿದ್ದ ಬೈಕ್‌ಗೆ ಲಾರಿ ಡಿಕ್ಕಿಯಾಗಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಶಿಕ್ಷಕಿ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ‌ ಹೊಸಕೋಟೆ ತಾಲೂಕಿನ ದೇವನಗುಂದಿ ಕ್ರಾಸ್ ಬಳಿ ಘಟನೆ ನಡೆದಿದ್ದು, ತಾಲೂಕಿನ ವಾಗಟ ಗ್ರಾಮದ ಶಿಕ್ಷಕಿ ವೇದವತಿ (35) ಮೃತ ದುರ್ದೈವಿ.

ಇದನ್ನೂ ಓದಿ: Weather Report : ನಾಳೆ ಬೆಂಗಳೂರಲ್ಲಿ ವರುಣಾರ್ಭಟ; ದಕ್ಷಿಣ-ಉತ್ತರ ಒಳನಾಡು, ಕರಾವಳಿಯಲ್ಲಿ ಮಳೆ ಹಾವಳಿ

ವಾಗಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕಿ ಶಾಲೆಗೆ‌‌ ಹೋಗುತ್ತಿದ್ದ ವೇಳೆ‌ ಲಾರಿ ಡಿಕ್ಕಿಯಾಗಿ ಅವಘಡ ಆಗಿದೆ. ಸ್ಥಳಕ್ಕೆ ಹೊಸಕೋಟೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Exit mobile version