ಬೆಂಗಳೂರು: 3 ವರ್ಷಗಳ ನಂತರ ನಗರದ ಪೀಣ್ಯ ಫ್ಲೈಓವರ್ (Peenya flyover) ಮೇಲೆ ಭಾರೀ ವಾಹನಗಳ ಸಂಚಾರಕ್ಕೆ ಕಾಲ ಸನ್ನಿಹಿತವಾಗಿದೆ. ಈ ತಿಂಗಳಾಂತ್ಯದಲ್ಲಿ ಭಾರೀ ವಾಹನಗಳ ಓಡಾಟಕ್ಕೆ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಗ್ರೀನ್ ಸಿಗ್ನಲ್ ಸಾಧ್ಯತೆ ಇದೆ.
ನಗರದ ತುಮಕೂರು ರಸ್ತೆಯಲ್ಲಿರುವ 15 ಮೀಟರ್ ಅಗಲದ, 4.2 ಕಿಮೀ ಉದ್ದದ ಮೇಲ್ಸೇತುವೆಯಲ್ಲಿ 2021ರ ಡಿಸೆಂಬರ್‌ನಿಂದ ಬಸ್‌ಗಳು ಮತ್ತು ಟ್ರಕ್‌ಗಳಂತಹ ಭಾರೀ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಫ್ಲೈಓವರ್‌ನಲ್ಲಿ ಪ್ರಿಸ್ಟ್ರೆಸ್ಡ್ ಕೇಬಲ್‌ಗಳು ತುಕ್ಕು ಹಿಡಿದ ಹಿನ್ನೆಲೆಯಲ್ಲಿ ರಿಪೇರಿ ಮಾಡುವ ಅಗತ್ಯವಿತ್ತು. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 38.5 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ಕೇಬಲ್‌ಗಳ ಅಳವಡಿಕೆ ಕಾರ್ಯ ನಡೆದಿದೆ.
ವಾರದಲ್ಲಿ ಒಂದು ದಿನ ಭಾರೀ ವಾಹನಗಳ ಓಡಾಟಕ್ಕೆ ಬ್ರೇಕ್
ಹೊಸ 240 ಪ್ರಿಸ್ಟ್ರೆಸ್ಡ್ ಕೇಬಲ್ ಅಳವಡಿಸಲಾಗಿದ್ದು, ಈಗಾಗಲೇ ಅಳವಡಿಸಲಾಗಿದ್ದ 1,243 ಪ್ರಿಸ್ಟ್ರೆಸ್ಡ್ ಕೇಬಲ್‌ಗಳ ಬದಲಾವಣೆ ಕಾರ್ಯ ನಡೆದಿದೆ. ಇನ್ನು ವಾರದಲ್ಲಿ ಒಂದು ದಿನ ಭಾರೀ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಬೇಕು ಅಂತ ತಜ್ಞರ ಸಮಿತಿ ಶಿಫಾರಸು ನೀಡಿದ್ದು, ಶುಕ್ರವಾರ ಮುಂಜಾನೆ 6 ಗಂಟೆಯಿಂದ ಶನಿವಾರ ಮುಂಜಾನೆ 6 ಗಂಟೆಯವರೆಗೆ ಭಾರೀ ವಾಹನಗಳಿಗೆ ನಿಷೇಧ ವಿಧಿಸುವ ಸಾಧ್ಯತೆ ಇದೆ. ಮೇಲ್ಸೇತುವೆ ಮೇಲೆ ವಾಹನಗಳ ಗರಿಷ್ಠ ವೇಗ ಮಿತಿಯನ್ನು 40 ಕಿ.ಮೀ.ಗೆ ನಿಗದಿ ಮಾಡಲಾಗಿದೆ.
ಫ್ಲೈಓವರ್ ನಿರ್ಬಂಧದಿಂದ ಕಳೆದ ಮೂರು ವರ್ಷಗಳಿಂದ ಕೆಳಗಿನ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ. ದಿನ ನಿತ್ಯದ ವಾಹನ ದಟ್ಟಣೆಯಿಂದ ವಾಹನ ಸವಾರರು ಪರದಾಡುತ್ತಿದ್ದಾರೆ. ಎನ್‌ಎಚ್‌ಎಐ ಕಳೆದ ವರ್ಷ 38.5 ಕೋಟಿ ರೂಪಾಯಿಯಲ್ಲಿ ರಿಪೇರಿ ಕಾರ್ಯವನ್ನು ಪ್ರಾರಂಭಿಸಿತು. ಪ್ರತಿ ಸ್ಪ್ಯಾನ್‌ನಲ್ಲಿ ಎರಡು ಕೇಬಲ್‌ಗಳನ್ನು ಹೆಚ್ಚುವರಿ ಸ್ಲಾಟ್‌ಗಳಲ್ಲಿ ಸೇರಿಸಲು ಮತ್ತು ಮೇಲ್ಸೇತುವೆಯನ್ನು ಬಲಪಡಿಸಲು ಒತ್ತು ನೀಡಿತ್ತು.
ಜನವರಿಯಲ್ಲಿ, 240 ಪ್ರಿಸ್ಟ್ರೆಸ್ಡ್ ಕೇಬಲ್‌ಗಳಲ್ಲಿ ಲೋಡ್ ಪರೀಕ್ಷೆಗಳನ್ನು ನಡೆಸಲು ಎನ್‌ಎಚ್‌ಎಐ 60 ಗಂಟೆಗಳ ಕಾಲ ಫ್ಲೈಓವರ್ ಮುಚ್ಚಿತ್ತು. ಸಮಿತಿಯ ಲೋಡ್ ಪರೀಕ್ಷೆಯ ಫಲಿತಾಂಶಗಳು ತೃಪ್ತಿಕರವಾಗಿದೆ ಎಂದು ತಜ್ಞರ ಸಮಿತಿಯ ಮುಖ್ಯಸ್ಥ, ಐಐಎಸ್‌ಸಿ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರೊ. ಚಂದ್ರ ಕಿಶನ್ ಹೇಳಿದ್ದರು. ಮಾರ್ಚ್‌ನಲ್ಲಿ, ಎನ್‌ಎಚ್‌ಎಐ 1,243 ಪ್ರಿಸ್ಟ್ರೆಸ್ಡ್ ಕೇಬಲ್‌ಗಳನ್ನು ಬದಲಾಯಿಸಲು ಪ್ರಾರಂಭಿಸಿತ್ತು. ಸದ್ಯ ದುರಸ್ತಿ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಈ ತಿಂಗಳಾಂತ್ಯದಲ್ಲಿ ಭಾರಿ ವಾಹನ ಸಂಚಾರಕ್ಕೆ ಮೇಲ್ಸೇತುವೆ ಮುಕ್ತವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ | Dr Bro: ಸೋಷಿಯಲ್ ಮೀಡಿಯಾ ಸ್ಟಾರ್‌ಗಳ ಮೇಲೆ ಹೆಚ್ಚಾಯ್ತು ಕ್ರೇಜ್! ನಿಮಗ್ಯಾರಿಷ್ಟ?
ಇನ್ನು ಈ ಬಗ್ಗೆ ಎನ್‌ಎಚ್‌ಎಐ ಬೆಂಗಳೂರು ಘಟಕದ ಯೋಜನಾ ನಿರ್ದೇಶಕ ಕೆಬಿ ಜಯಕುಮಾರ್ ಪ್ರತಿಕ್ರಿಯಿಸಿ, ಜುಲೈ ಕೊನೆಯ ವಾರದಲ್ಲಿ ಭಾರಿ ವಾಹನಗಳಿಗೆ ಫ್ಲೈಓವರ್ ಮುಕ್ತವಾಗಲಿದೆ. ನಾವು ಪ್ರಸ್ತುತ ಸೈಟ್ ಮತ್ತು ಟ್ರಾಫಿಕ್ ಪರಿಸ್ಥಿತಿಗಳನ್ನು ವಿವರಿಸುವ ವರದಿಯನ್ನು ಹೆದ್ದಾರಿ ಪ್ರಾಧಿಕಾರದ ಪ್ರಧಾನ ಕಚೇರಿಗೆ ಸಲ್ಲಿಸಿದ್ದೇವೆ. ತಜ್ಞರ ಸಮಿತಿ ಮತ್ತು ಟ್ರಾಫಿಕ್ ಪೊಲೀಸರ ಅನುಮೋದನೆಯನ್ನು ಮುಂದಿನ ವಾರದ ಆರಂಭದಲ್ಲಿ ಪಡೆಯಲಿದ್ದೇವೆ ಎಂದು ತಿಳಿಸಿದ್ದಾರೆ.