Site icon Vistara News

Hindu Rashtra : ನಮ್ಮದು ಹಿಂದು ರಾಷ್ಟ್ರ, ತಪ್ಪೇನು?; ಚರ್ಚೆ ಹುಟ್ಟುಹಾಕಿದ ಪೇಜಾವರ ಶ್ರೀ

Hindu Rashtra Pejavara Sri

ಉಡುಪಿ: ನಾವು ಹಿಂದೂಗಳು, ಹಿಂದೂಗಳಾದ ನಾವು ನಮ್ಮ ರಾಷ್ಟ್ರವನ್ನು ಹಿಂದೂ ರಾಷ್ಟ್ರ (Hindu Rashtra) ಎನ್ನುತ್ತೇವೆ, ಇದರಲ್ಲಿ ತಪ್ಪೇನಿದೆ ಎಂದು ಹೇಳುವ ಮೂಲಕ ರಾಮಜನ್ಮಭೂಮಿ ಟ್ರಸ್ಟ್ (Rama Janmabhumi trust) ಸದಸ್ಯರಾಗಿರುವ ಪೇಜಾವರ ಮಠದ (Pejavara Matt) ಶ್ರೀ ವಿಶ್ವ ಪ್ರಸನ್ನ ಶ್ರೀಗಳು (Vishwaprasanna Swameeji) ಹೊಸ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ. ರಾಮ ಮಂದಿರ (Rama Mandira) ಲೋಕಾರ್ಪಣೆ ಹತ್ತಿರವಾಗುತ್ತಿದ್ದಂತೆಯೇ ಈ ಸಂಗತಿ ಚರ್ಚೆಗೆ ಕಾರಣವಾಗಲಿದೆ.

ಉಡುಪಿಯಲ್ಲಿ ಮಾತನಾಡಿದ ಅವರು, ʻʻನಾವು ಹಿಂದೂಗಳು, ಹಿಂದೂಗಳಾದ ನಾವು ನಮ್ಮ ರಾಷ್ಟ್ರವನ್ನು ಹಿಂದೂ ರಾಷ್ಟ್ರ ಎನ್ನುತ್ತೇವೆ. ಇದನ್ನು ವಿರೋಧಿಸುವವರು ಯಾರು? ಇದನ್ನು ಯಾವ ನೆಲೆಯಲ್ಲಿ ವಿರೋಧಿಸಬೇಕು? ನಮ್ಮ ಕರ್ನಾಟಕ ಕನ್ನಡ ರಾಜ್ಯ ಹೌದೋ ಅಲ್ಲವೋ , ಹಾಗಾದ್ರೆ ಇಲ್ಲಿ ಕನ್ನಡದವರು ಮಾತ್ರ ಇರುವುದೋ? ಇತರ ಭಾಷೆಯವರಿಗೆ ಇಲ್ಲಿ ಅವಕಾಶವಿಲ್ಲ ನೀವು ಹೊರಗೆ ಹೋಗಿ ಎಂದು ಯಾರಾದ್ರೂ ಹೇಳಿದ್ದಾರೋ? ಉಳಿದ ಭಾಷೆಯವರು ಇದ್ದಾರೆ ಎನ್ನುವ ಕಾರಣಕ್ಕೆ, ಇದು ಕನ್ನಡ ರಾಜ್ಯ ಅಲ್ಲವೋ?ʼʼ ಎಂಬ ಹಲವು ಉದಾಹರಣೆ ಮೂಲಕ ಅವರು ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ʻʻಬಹು ಸಂಖ್ಯಾತರಾದ ನಾವು ನಮ್ಮ ದೇಶವನ್ನ ಹಿಂದು ರಾಷ್ಟ್ರ ಎಂದು ಕರೆಯುತ್ತೇವೆ. ಇದನ್ನು ವಿರೋಧಿಸುವ ಅಧಿಕಾರ ಯಾರಿಗೂ ಇಲ್ಲ. ಹಿಂದೂ ರಾಷ್ಟ್ರದಲ್ಲಿ ಎಲ್ಲರಿಗೂ ಅವಕಾಶ ನೀಡಲಾಗುವುದು. ಆದರೆ, ಇಲ್ಲಿ ಬಂದವರು ಇಲ್ಲಿ ಅನ್ಯಾಯವೆಸಗಬಾರದು, ಯಾರು ಅಲ್ಪಸಂಖ್ಯಾತರ ಹೆಸರಿನಲ್ಲಿ ಹಿಂದುಗಳ ಶ್ರದ್ಧಾ ಕೇಂದ್ರವನ್ನು ಅವಮಾನಿಸುವ ಕೆಲಸ ಮಾಡಬಾರದುʼʼ ಎಂದು ಪೇಜಾವರ ಶ್ರೀಗಳು ಹೇಳಿದರು.

ʻʻಯಾರಿಗೆ ರಾಮ ಮಂದಿರ ಆಗಬಾರದು ಇದೆಯೋ ಅವರು ಅದನ್ನು ವಿರೋಧಿಸುತ್ತಿದ್ದಾರೆ. ಸಂವಿಧಾನವನ್ನು, ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಒಪ್ಪುವ ಮಂದಿ ರಾಮ ಮಂದಿರ ನಿರ್ಮಾಣವನ್ನು ವಿರೋಧಿಸಬಾರದು. ಮಂದಿರ ನಿರ್ಮಾಣಕ್ಕೆ ಸರಕಾರ ದುಡ್ಡು ಕೊಟ್ಟಿಲ್ಲ, ದೇಣಿಗೆಯ ಮೂಲಕ ಮಂದಿರ ನಿರ್ಮಾಣವಾಗಿದೆ. ಹೀಗಾಗಿ ಸರಕಾರದ ಬೊಕ್ಕಸದಲ್ಲಿ ಒಂದು ಪಾಲು ಅಲ್ಪಸಂಖ್ಯಾತರಿಗೆ ಇದೆ ಎನ್ನುವವರ ವಾದಕ್ಕೆ ಇಲ್ಲಿ ಬೆಲೆ ಇಲ್ಲʼʼ ಎಂದು ಹೇಳಿದರು.

ʻʻಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನುಸಾರವಾಗಿ ನಾವು ಮಂದಿರವನ್ನು ನಿರ್ಮಾಣ ಮಾಡಿದ್ದೇವೆ. ರಾಮ ಮಂದಿರವನ್ನು ವಿರೋಧಿಸುವುದು, ಸಂವಿಧಾನ ವಿರೋಧಿ, ಸರ್ವೋಚ್ಚ ನ್ಯಾಯಾಲಯ ವಿರೋಧಿ, ಬಹು ಸಂಖ್ಯಾತ ವಿರೋಧಿ ಕಾರ್ಯ. ಇಂತಹ ಹೇಳಿಕೆಗಳು ಅಶಾಂತಿಗೆ ಕಾರಣವಾಗುತ್ತದೆʼʼ ಎಂದು ನೆನಪಿಸಿದರು.

ʻʻಮಣಿಪುರದ ಘಟನೆ ನಮ್ಮ ಕಣ್ಣ ಮುಂದೆ ಇದೆ. ಶಾಂತಿಯನ್ನು ಬಯಸುವವರು ನಮ್ಮ ನಿಲುವನ್ನು ಬೆಂಬಲಿಸಬೇಕು, ಹೊರತಾಗಿ ವಿರೋಧಿಸಬಾರದುʼʼ ಎಂದು ಹೇಳಿದರು. ʻʻರಾಜ್ಯದ ಮುಖ್ಯಮಂತ್ರಿಗಳು ನನ್ನ ಮಾತನ್ನು ವಿರೋಧಿಸುವುದಾದರೆ ಅವರ ಮಾತನ್ನು ನಾನು ವಿರೋಧಿಸುತ್ತೇನೆʼʼ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.

ಇದನ್ನೂ ಓದಿ: Hinduism: ಅಮೆರಿಕದಲ್ಲಿ ಹಿಂದೂ ಧರ್ಮದ ಜಾಗೃತಿಗೆ 4 ದಶಲಕ್ಷ ಡಾಲರ್‌ ಮೀಸಲಿಟ್ಟ ಭಾರತೀಯ ಅಮೇರಿಕನ್ ವೈದ್ಯ!

ಹಿಂದು ರಾಷ್ಟ್ರ ಎನ್ನುವುದು ತಪ್ಪಾದರೆ ಕನ್ನಡ ನಾಡು ಕೂಡಾ ತಪ್ಪಾಗುತ್ತದೆ!

ʻʻಬಹು ಸಂಖ್ಯಾತರಾದ ನಾವು ಹಿಂದೂ ರಾಷ್ಟ್ರವೆಂದು ಕರೆಯುವುದು ತಪ್ಪಾದರೆ, ಕನ್ನಡ ಭಾಷಿಗರಾದ ನಾವು ಕನ್ನಡ ನಾಡು ಎಂದು ಹೇಳುವುದು ತಪ್ಪು ಎಂದ ಹಾಗೆ ಆಗುತ್ತದೆ. ಈ ವಿರೋಧಿಸುವವರ ಹಿನ್ನೆಲೆ ಏನೇನು ಕೂಡ ಆಗಿರಬಹುದು. ಆದರೆ ನಾವು ನಡೆಯುವ ದಾರಿ ಮಾತ್ರ ಸರಿ ಇದೆ ಎಂದು ಸ್ಪಷ್ಟಪಡಿಸಿದರು.

ಮೋದಿ ರಾಮ ಮಂದಿರದ ಶ್ರೇಯವನ್ನು ಪಡೆದರೆ ತಪ್ಪೇನು?

ʻʻನರೇಂದ್ರ ಮೋದಿಯವರು ರಾಮ ಮಂದಿರದ ಉದ್ಘಾಟನೆಗೆ ಆಗಮಿಸುವ ಮೂಲಕ ಮಂದಿರವನ್ನು ರಾಜಕೀಕರಣ ಮಾಡುತ್ತಿದ್ದಾರೆ ಎಂಬ ಆರೋಪ ಸರಿಯಲ್ಲ. ಮೋದಿಯವರು ನಿನ್ನೆ ಮೊನ್ನೆ ಪ್ರಧಾನಿಯಾಗಿ ಬಂದವರು, ರಾಮ ಜನ್ಮಭೂಮಿಯ ವ್ಯಾಜ್ಯ ಇವತ್ತು ನಿನ್ನೆ ಹುಟ್ಟಿದ್ದಲ್ಲ. 500 ವರ್ಷಗಳಿಂದ ನಡೆಯುತ್ತಿರುವ ವ್ಯಾಜ್ಯ ಇದು, ಸ್ವಾತಂತ್ರ್ಯ ಬಂದು ಬಂದು 75 ವರ್ಷಗಳ ಕಾಲ ಯಾರ ಸರಕಾರವಿತ್ತು? ಸಾಕಷ್ಟು ಬೇಡಿಕೆ ಇದ್ದ ಸಂದರ್ಭದಲ್ಲಿ ಅವರೇ ಈ ಕಾರ್ಯವನ್ನು, ಮಾಡಿ ಶ್ರೇಯವನ್ನ ಪಡೆಯಬಹುದಿತ್ತು. ಅವರು ಈ ಕೆಲಸವನ್ನು ಮಾಡಿಲ್ಲ ಅದರ ಲಾಭವನ್ನು ಪಡೆದುಕೊಳ್ಳಲು ತಯಾರಿಲ್ಲ. ಸಂವಿಧಾನಬದ್ಧವಾಗಿ ಯಾರೋ ಮಾಡಿದ್ದರೆ ಅವರು ಇದರ ಶ್ರೇಯವನ್ನ ಪಡೆದುಕೊಂಡರೆ ತಪ್ಪೇನು.? ಒಳ್ಳೆಯ ಕೆಲಸವನ್ನು ಮಾಡಿ ಅದರ ಲಾಭವನ್ನು ಯಾಕೆ ಪಡೆದುಕೊಳ್ಳಬಾರದುʼʼ ಎಂದು ಅವರು ಪ್ರಶ್ನಿಸಿದರು. ಹಿಂದುಗಳನ್ನು ತಡೆಯಬೇಕು, ಬಗ್ಗು ಬಡಿಯಬೇಕು ಎನ್ನುವ ಒಂದೇ ಹುನ್ನಾರದಿಂದ ಇದನ್ನು ವಿರೋಧಿಸಲಾಗುತ್ತಿದೆ ಎಂದು ಉಡುಪಿಯಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರ ಪ್ರತಿಕ್ರಿಯೆ ನೀಡಿದರು.

ಸಿದ್ದರಾಮಯ್ಯ ಹೇಳಿದ್ದೇನು?

ಇತ್ತೀಚಿಗೆ ಗದಗದಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು, ಈ ರಾಷ್ಟ್ರವನ್ನು ಹಿಂದೂ ರಾಷ್ಟ್ರ ಮಾಡೋದಕ್ಕೆ ಆಗಲ್ಲ, ಯಾಕೆಂದರೆ ಈ ರಾಷ್ಟ್ರ ಬರೀ ಹಿಂದೂಗಳಿಗೆ ಸೇರಿದ್ದಲ್ಲ ಅಂತ ಹೇಳಿದ್ದರು. ಬರೀ ಹಿಂದೂಗಳೇ ಇಲ್ಲ ನಮ್ಮ ಸಮಾಜದಲ್ಲಿ. ಭಾರತ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ಖ್, ಜೈನ್, ಬೌದ್ಧ ಎಲ್ಲರಿಗೂ ಸೇರಿದ್ದು ಅಂತ ಹೇಳಿದ್ದಾರೆ. ಇದೀ ಬರೀ ಬಿಜೆಪಿಯವರ ಸ್ಲೋಗನ್ ಅಷ್ಟೇ. 1950ರಿಂದಲೂ ಬಿಜೆಪಿಯವರು ಇದನ್ನೇ ಹೇಳುತ್ತಿದ್ದಾರೆʼʼ ಎಂದಿದ್ದರು. ಅವರು ಬಿಜೆಪಿ ನಾಯಕ ಬಿ.ವೈ ವಿಜಯೇಂದ್ರ ಅವರಿಗೆ ಟಾಂಗ್‌ ನೀಡಿದ್ದರು.

Exit mobile version