ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು (Praveen Nettaru) ಬರ್ಬರ ಹತ್ಯೆಯ ಬಗ್ಗೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಇಂತಹ ಹೇಯಕೃತ್ಯ ನಾಗರಿಕ ಸಮಾಜವೇ ತಲೆತಗ್ಗಿಸುವಂತದ್ದಾಗಿದೆ, ಮೃತ ಪ್ರವೀಣನ ಆತ್ಮಕ್ಕೆ ಸದ್ಗತಿ ದೊರೆಯಲಿ ಮತ್ತು ಆತನ ಕುಟುಂಬಸ್ಥರಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಶ್ರೀಗಳು ಪ್ರಾರ್ಥಿಸಿದ್ದಾರೆ.
ನಾಡಿನಲ್ಲಿ ಇಂತಹ ದುಷ್ಕೃತ್ಯಗಳು ಮೇಲಿಂದ ಮೇಲೆ ನಡೆಯುತ್ತಿರುವುದರಿಂದ ಜನ ಆಕ್ರೋಶಗೊಂಡು ಸರ್ಕಾರದ ಮೇಲೆ ವಿಶ್ವಾಸವನ್ನೇ ಕಳಕೊಳ್ಳುವ ಸ್ಥಿತಿ ತಲುಪುತ್ತಿರುವಂತಿದೆ. ಅದಕ್ಕೂ ಮೊದಲೇ ಸರ್ಕಾರ ಇಂತಹ ಪಾತಕಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶ್ರೀಗಳು ಒತ್ತಾಯಿಸಿದ್ದಾರೆ. ಹಿಂದೂ ಕಾರ್ಯಕರ್ತರು ಧೈರ್ಯ ಕಳೆದುಕೊಳ್ಳಬಾರದು ಎಂದು ಶ್ರೀಗಳು ಕಿವಿಮಾತು ಹೇಳಿದ್ದಾರೆ.
ಪ್ರವೀಣ್ ಹತ್ಯೆ ನಾಡಿನ ಸಹಸ್ರಾರು ಹಿಂದೂ ಯುವ ಕಾರ್ಯಕರ್ತರು ಆಕ್ರೋಶಗೊಳ್ಳಲು ಕಾರಣವಾಗುತ್ತಿದೆ. ಇತ್ತೀಚೆಗಷ್ಟೇ ನಡೆದಿದ್ದ ಹರ್ಷನ ಹತ್ಯೆಯ ದುಃಖ ನೋವಿನಿಂದ ಹೊರಬರುವ ಹೊತ್ತಿಗೆ ಇನ್ನೋರ್ವ ತರುಣನ ಕೊಲೆಯಾಗಿರೋದು ಸಹನೆಯ ಕಟ್ಟೆ ಒಡೆಯುವಷ್ಟು ದುಃಖ, ಆಕ್ರೋಶ ತರಿಸಿರುವುದು ಸಹಜವೇ ಆಗಿದ್ದರೂ ಯಾರೊಬ್ಬರೂ ಧೈರ್ಯ ಕಳೆದುಕೊಳ್ಳಬಾರದು. ಸಂಯಮವನ್ನು, ಒಗ್ಗಟ್ಟನ್ನು ಕಾಯ್ದುಕೊಂಡು ಕೆಲಸ ಮಾಡಬೇಕಾಗಿದೆ. ನಾವುಗಳೂ ತಮ್ಮೆಲ್ಲರ ನೋವಿನಲ್ಲಿ ಸಹಾನುವರ್ತಿಗಳು ಎಂದು ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ | Praveen Nettar| ಪ್ರವೀಣ್ ಕೊಲೆಗೆ ಉದಯಪುರದ ಕನ್ಹಯ್ಯಲಾಲ್ ಹತ್ಯೆ ಲಿಂಕ್