Site icon Vistara News

Ayodhya | ರಾಮಮಂದಿರಕ್ಕೆ ಕರ್ನಾಟಕದಿಂದ ಸ್ವರ್ಣಶಿಖರ ಅರ್ಪಣೆಯಾಗಲಿ ಎಂದು ಟ್ರಸ್ಟ್‌ ಸಭೆಯಲ್ಲಿ ಪೇಜಾವರ ಶ್ರೀ ಪ್ರಸ್ತಾಪ

Mandir

ಉಡುಪಿ: ‌ರಾಮಜನ್ಮಭೂಮಿ ಅಯೋಧ್ಯೆಯಲ್ಲಿ (Ayodhya) ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಅಯೋಧ್ಯೆಯ ಪ್ರವಾಸಿ ಮಂದಿರದಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಸಭೆ ನಡೆದಿದ್ದು, ರಾಮಮಂದಿರಕ್ಕೆ ಕರ್ನಾಟಕದಿಂದ ಸ್ವರ್ಣ ಶಿಖರ ಅರ್ಪಿಸಬೇಕು ಎಂಬ ರಾಜ್ಯದ ಜನರ ಇಂಗಿತವನ್ನು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಭೆಯಲ್ಲಿ ಪ್ರಸ್ತಾಪಿಸಿದರು.

ರಾಮಮಂದಿರದ ಪ್ರಧಾನ ಗರ್ಭಗುಡಿಯ ಶಿಖರಕ್ಕೆ ರಾಮಭಕ್ತ ಹನುಮನ ಪವಿತ್ರ ನೆಲವಾಗಿರುವ ಕರ್ನಾಟಕದಿಂದ ಸ್ವರ್ಣ ಶಿಖರವನ್ನು ಅರ್ಪಿಸಬೇಕು ಎಂಬುದು ಕರ್ನಾಟಕದ ಜನರ ಇಂಗಿತವಾಗಿದೆ. ಮಂದಿರದ ವಾಸ್ತು ವಿನ್ಯಾಸಕ್ಕೆ ಅನುಗುಣವಾಗಿ ಸ್ವರ್ಣ ಶಿಖರವನ್ನು ರಾಜ್ಯದ ಭಕ್ತರ ಸಹಕಾರದಿಂದ ನಿರ್ಮಿಸಿ, ವಿಶ್ವ ಹಿಂದು ಪರಿಷತ್ ನೇತೃತ್ವದಲ್ಲಿ ಕರ್ನಾಟಕದ ಹಂಪಿಯಿಂದ ಸ್ವರ್ಣ ಶಿಖರ ಯಾತ್ರೆಯನ್ನು ರಾಜ್ಯಾದ್ಯಂತ ಸಂಚರಿಸಲಾಗುತ್ತದೆ. ಇದಾದ ಬಳಿಕ ಅಯೋಧ್ಯೆಗೆ ತಲುಪಿಸುವ ಇಚ್ಛೆ ಇದೆ ಎಂದು ನಾಡಿನ ಜನರ ಪರವಾಗಿ ಶ್ರೀಗಳು ಸಭೆಗೆ ತಿಳಿಸಿದರು.

ಇದರ ಜತೆಗೆ ಮುಂದಿನ ವರ್ಷಾಂತ್ಯಕ್ಕೆ ನಡೆಯುವ ನೂತನ ಮಂದಿರ ಸಮರ್ಪಣೆ ಹಾಗೂ ಶ್ರೀರಾಮನ ಪ್ರತಿಷ್ಠಾಪನಾ ಮಹೋತ್ಸವಕ್ಕೆ ದಿನಾಂಕ ನಿಗದಿಪಡಿಸಿದ ಬಳಿಕ ದೇಶದ ಭಕ್ತರನ್ನು ಈ ಉತ್ಸವಕ್ಕೆ ಆಹ್ವಾನಿಸುವ ಸಲುವಾಗಿಯೂ ಒಂದು ಯಾತ್ರೆಯನ್ನು ಕೈಗೊಳ್ಳಬಹುದೆಂಬ ಅಭಿಪ್ರಾಯವನ್ನೂ ಶ್ರೀಗಳು ಮಂಡಿಸಿದರು.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಸಭೆ .

ನೀಲಿಮಿಶ್ರಿತ ಶ್ವೇತಶಿಲೆಯಿಂದ ವಿಗ್ರಹ

ಮಂದಿರದಲ್ಲಿ ನೀಲಿ ಮಿಶ್ರಿತ ಶ್ವೇತ ಶಿಲೆಯಲ್ಲಿ ಶಿಲ್ಪಶಾಸ್ತ್ರೋಕ್ತ ರೀತಿಯಲ್ಲಿ ಶ್ರೀರಾಮನ ವಿಗ್ರಹ ನಿರ್ಮಿಸಿ ಪ್ರತಿಷ್ಠಾಪಿಸಲಾಗುವುದು ಎಂದು ಟ್ರಸ್ಟ್‌ ಸಭೆಯಲ್ಲಿ ನಿರ್ಣಯಿಸಲಾಯಿತು.‌ ಹಾಗೆಯೇ ಮಂದಿರಕ್ಕಾಗಿ ಮಹಾರಾಷ್ಟ್ರದಿಂದ ಸಾಗುವನಿ ಮರವನ್ನು ತರಿಸಿಕೊಳ್ಳುವುದು ಹಾಗೂ ಅದರ ಖರ್ಚು-ವೆಚ್ಚದ ಕುರಿತು ಚರ್ಚಿಸಲಾಯಿತು.

೩೦೦ ಕೋಟಿ ರೂ. ವ್ಯಯ

ಆರಂಭದಲ್ಲಿ ಮಂದಿರ ನಿರ್ಮಾಣಕ್ಕೆ ಸುಮಾರು 400 ಕೋಟಿ ರೂ. ಖರ್ಚಾಗಬಹುದು ಎಂದು ಅಂದಾಜಿಸಲಾಗಿತ್ತು . ಆದರೆ ಜಿಎಸ್‌ಟಿ ವೆಚ್ಚ , ರಾಯಲ್ಟಿ ಮೊದಲಾದ ಕಾರಣಗಳಿಂದ ನಿರ್ಮಾಣ ವೆಚ್ಚ 1,300 ಕೋಟಿ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ಆದರೆ ಮಂದಿರಕ್ಕಾಗಿ ದೇಶಾದ್ಯಂತ ಭಕ್ತರು ನೀಡುತ್ತಿರುವ ದೇಣಿಗೆಯೂ ಭರಪೂರವಾಗಿದೆ. ತಿಂಗಳಿಗೆ ಸರಾಸರಿ 50 ಲಕ್ಷ ರೂ.ಗಿಂತ ಅಧಿಕ ದೇಣಿಗೆ ಬರುತ್ತಿದ್ದು, ಕೆಲವೊಮ್ಮೆ ಈ ಮೊತ್ತ ಕೋಟಿಗೂ ಮೀರಿದೆ. ಆದ್ದರಿಂದ ಇದುವರೆಗಿನ ಸುಮಾರು 300 ಕೋಟಿ ರೂ. ಖರ್ಚನ್ನು ಈಗ ಹರಿದು ಬರುತ್ತಿರುವ ಹೆಚ್ಚುವರಿ ದೇಣಿಗೆಯಿಂದಲೇ ನಿರ್ವಹಿಸಲಾಗಿದೆ ಎಂದೂ ಸಭೆಗೆ ತಿಳಿಸಲಾಯಿತು.

ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಕಾರ್ಯದರ್ಶಿ ಚಂಪತ್ ರಾಯ್, ಕೋಶಾಧಿಕಾರಿ ಗೋವಿಂದ ಗಿರಿ ಸ್ವಾಮೀಜಿ , ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸೇರಿ ಹಲವರು ಉಪಸ್ಥಿತರಿದ್ದರು. ಹೈದರಾಬಾದ್‌ನಲ್ಲಿ ನಡೆಸಿದ ತಮ್ಮ 35 ಚಾತುರ್ಮಾಸ್ಯ ವ್ರತವನ್ನು ಮುಗಿಸಿ ಭಾನುವಾರ ಬೆಳಗ್ಗೆ ಅಯೋಧ್ಯೆ ತಲುಪಿದ ಪೇಜಾವರ ಶ್ರೀಗಳು, ಬೆಳಗ್ಗೆ ಶ್ರೀರಾಮನ ತಾತ್ಕಾಲಿಕ ಮಂದಿರದಲ್ಲಿರುವ ರಾಮಲಲ್ಲಾನ ದರ್ಶನ ಪಡೆದು ಪೂಜೆ ಸಲ್ಲಿಸಿದರು .

ಇದನ್ನೂ ಓದಿ | ರಾಮ ಮಂದಿರವೇ ರಾಷ್ಟ್ರ ಮಂದಿರ ಎಂದ ಯೋಗಿ, ಅಯೋಧ್ಯೆಯಲ್ಲಿ ಗರ್ಭಗುಡಿಗೆ ಅಡಿಗಲ್ಲು

Exit mobile version