ಬಾಗಲಕೋಟೆ: 2024ರಲ್ಲಿ ಲೋಕಸಭಾ ಚುನಾವಣೆ ಬರುತ್ತಿದೆ. ಮತ್ತೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಗಳು ಮುಂದುವರಿಯಲಿ ಎಂದು ಜನರು ಬಯಸುತ್ತಿದ್ದಾರೆ. ಐದು ರಾಜ್ಯಗಳ ಚುನಾವಣೆ ಫಲಿತಾಂಶ ನೋಡುತ್ತಿದ್ದರೆ ಅದು ನಿಜ ಅನಿಸುತ್ತಿದೆ. ಗ್ಯಾರಂಟಿ ಮೂಲಕ ದೇಶದ ಬೇರೆ ಕಡೆ ಗೆದ್ದು ಬಿಡುತ್ತೇವೆ ಎಂದು ಹೋಗಿದ್ದರು. ಆದರೆ ಜನತೆ ಪ್ರಧಾನಿ ಮೋದಿ ಗ್ಯಾರಂಟಿ ಮೇಲೆ ವಿಶ್ವಾಸ ಇಟ್ಟಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ನವನಗರದ ಕಲಾ ಭವನದಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಕರ್ತರ ಸಮಾವೇಶದಲ್ಲಿ (BJP Convention) ಮಾತನಾಡಿದ ಅವರು ನಾನು ಶಪಥ ಮಾಡಿದ್ದೇನೆ. ರಾಜ್ಯದಲ್ಲಿ 28ಕ್ಕೆ 28 ಸ್ಥಾನ ಗೆಲ್ಲುವವರೆಗೂ ಒಂದು ದಿನವೂ ವಿರಮಿಸಬೇಡ ಅಂತ ತಂದೆಯವರು ಹೇಳಿದ್ದಾರೆ. ನಾನು ಸಹ ಗೆಲ್ಲುವವರೆಗೆ ವಿರಮಿಸಲ್ಲ. ಮುಂದಿನ ವಿಧಾನಸಭೆ ಚುನಾವಣೆ ಯಾವಾಗ ಬರುತ್ತೊ ಗೊತ್ತಿಲ್ಲ. ಯಾವತ್ತು ಬಂದರೂ ರಾಜ್ಯದಲ್ಲಿ ಬಿಜೆಪಿ 140 ಸ್ಥಾನ ಗೆಲ್ಲುತ್ತೆ. ಅಲ್ಲಿ ತನಕ ನಾನು ಮನೆಯಲ್ಲಿ ಕೂರಲ್ಲ ಎಂದು ತಿಳಿಸಿದರು.
ಉತ್ತರ ಕರ್ನಾಕಟಕಕ್ಕೆ ನ್ಯಾಯ ಕೊಡುವ ಉದ್ದೇಶದಿಂದ ಬೆಳಗಾವಿಯಲ್ಲಿ ಬಿಎಸ್‌ವೈ ಸುವರ್ಣ ಸೌಧ ಕಟ್ಟಿಸಿದರು. ಬಾದಾಮಿ ಜನತೆ ಸಿದ್ದರಾಮಯ್ಯ ರಾಜಕೀಯ ಪುನರ್ಜನ್ಮ ಕೊಟ್ಟರು. ಗೆದ್ದ ಮೇಲೆ ಆ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಎಂದು ಜನರು ನಂಬಿದ್ದರು. ಆದರೆ, ಸಿದ್ದರಾಮಯ್ಯ ಉತ್ತರ ಕರ್ನಾಟಕದ ಋಣ ತೀರಿಸುವ ಕೆಲಸ ಮಾಡಲಿಲ್ಲ ಎಂದು ಟೀಕಿಸಿದರು.
ಇದನ್ನೂ ಓದಿ | KS Eshwarappa : ಪ್ರಿಯಾಂಕ್ ಖರ್ಗೆಯಂಥ ಚಿಲ್ಲರೆಗಳಿಗೆ ಉತ್ತರ ಕೊಡಲ್ಲ ಎಂದ ಈಶ್ವರಪ್ಪ
ಅಲ್ಪ ಸಂಖ್ಯಾತರಿಗೆ 10 ಸಾವಿರ ಕೋಟಿ ಕೊಡುತ್ತೇನೆ ಎನ್ನುತ್ತಾರೆ. 7,800 ರೂ. ಕೋಟಿ ಕೊಟ್ಟರೇ ಉತ್ತರ ಕರ್ನಾಟಕ ಜನತೆ ಬದುಕಲ್ಲವೇ? 7 ತಾಸು ವಿದ್ಯುತ್ ಕೊಡಲಿಕ್ಕೆ ಆಗಲಿಲ್ಲ. ರೈತರನ್ನು ಕಾಂಗ್ರೆಸ್ ಸರ್ಕಾರ ಭಿಕ್ಷುಕರು ಎಂಬ ಭಾವನೆಯಲ್ಲಿ ಕಾಣುತ್ತಿದೆ. ಇವರು ಕೊಟ್ಟಿರುವ ಸಮಯದಲ್ಲಿ ಜಮೀನಿಗೆ ರೈತರು ನೀರು ಹಾಯಿಸಬೇಕು. ಬಿಎಸ್‌ವೈ ಸಿಎಂ ಆದಾಗ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ್ದಾರೆ. ರೈತರ ಕಣ್ಣೀರು ಪ್ರಾಮಾಣಿಕವಾಗಿ ಒರೆಸುವ ಕೆಲಸ ಮಾಡಿದ್ದಾರೆ. ಆದರೆ, ಡಿಕೆಶಿಯವರು ಮೊಸಳೆ ಕಣ್ಣೀರು ಹಾಕುತ್ತಾರೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ, ಜೆಡಿಎಸ್, ಕಾಂಗ್ರೆಸ್‌ನ ಶಾಸಕ ಇರಬಹುದು. ಯಾರಿಗೂ ಈವರೆಗೂ ಒಂದು ರೂಪಾಯಿ ಅನುದಾನ ಕೊಟ್ಟಿಲ್ಲ. ಅಭಿವೃದ್ಧಿ, ರೈತರು, ದಲಿತರ, ರಾಜ್ಯದ ಬಗ್ಗೆ ಚಿಂತನೆ ಇಲ್ಲ. ಕೇವಲ ಅಲ್ಪಸಂಖ್ಯಾತರ ಬಗ್ಗೆ ಮಾತನಾಡುತ್ತಾರೆ. ಅವರಿಂದ ಮಾತ್ರ ಅಧಿಕಾರಕ್ಕೆ ಬಂದಿದ್ದೀರಾ? ನೀವು ಅಲ್ಪ ಸಂಖ್ಯಾತರ ಮುಖ್ಯಮಂತ್ರಿಯೋ? ಬೇರೆ ಸಮುದಾಯಗಳ ಮುಖ್ಯಮಂತ್ರಿ ಎನ್ನುವುದು ಮುಂದಿನ ಚುನಾವಣೆಯಲ್ಲಿ ಗೊತ್ತಾಗುತ್ತದೆ ಎಂದು ತಿಳಿಸಿದರು.
ಗ್ಯಾರಂಟಿ ನೋಡಿ ಬಿಜೆಪಿ ಗಾಬರಿಯಾಗಿದ್ದಾರೆ ಎನ್ನುತ್ತಾರೆ. ಆದರೆ, ಏಳು ತಿಂಗಳಲ್ಲಿ ಹೊಸ ಯೋಜನೆ ಏನಿಲ್ಲ. ಕಾಂಗ್ರೆಸ್‌ನ ಬಣ್ಣದ ಮಾತುಗಳಿಗೆ ಒಂದು ಬಾರಿ ಮೋಸ ಹೋಗಿದ್ದಾರೆ. ಮತ್ತೆ ಮತ್ತೆ ಮೋಸ ಹೋಗೋದಿಲ್ಲ. 50-60 ವರ್ಷ ಕಾಂಗ್ರೆಸ್ ಅಧಿಕಾರ ನಡೆಸಿದೆ. ಗರೀಬಿ ಹಟಾವೋ ಅಂತ ಆಡಳಿತ ನಡೆಸಿದರು. ರಬ್ಬರ್ ಸ್ಟಾಂಪ್ ರೀತಿ ಮನಮೋಹನ್ ಸಿಂಗ್ ಕೆಲಸ ಮಾಡಿದರು. ಗ್ಯಾರಂಟಿ ಬಗ್ಗೆ ಕಾಂಗ್ರೆಸ್ ಮುಖಂಡರು ಮಾತನಾಡುತ್ತಾರೆ. ಆದರೆ, ಕಾಂಗ್ರೆಸ್ 60 ವರ್ಷ ನೀರಾವರಿ ಸೇರಿ ಯಾವುದೇ ಹೊಸ ಯೋಜನೆಗೆ ಒತ್ತು ಕೊಡಲಿಲ್ಲ ಎಂದರು.
ಎಲ್ಲಾ ಸಮಾಜ, ಎಲ್ಲ ವರ್ಗಕ್ಕೆ ಯೋಜನೆಗಳನ್ನು ಕೊಡುವ ಕೆಲಸವನ್ನು ಪ್ರಧಾನಿ ಮೋದಿ ನರೇಂದ್ರ ಅವರು ಮಾಡುತ್ತಿದ್ದಾರೆ. ಉತ್ತರ ಕರ್ನಾಟಕ, ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಅಧಿವೇಶನದಲ್ಲಿ ಸಿಎಂ ಮಾತನಾಡದೆ ನಮಗೂ ಟೋಪಿ ಹಾಕಿ ಬೆಂಗಳೂರಿಗೆ ಹೋದರು. ಪರಿಶಿಷ್ಟ ಪಂಗಡದ ತಾಯಿ ಮೇಲೆ ದಬ್ಬಾಳಿಕೆ ಆಯಿತು. ಆದರೆ, ಸಿಎಂ ಐದು ನಿಮಿಷ ಸಮಯ ತಗೊಂಡು ಸಾಂತ್ವನ ಹೇಳಲಿಲ್ಲ. ಮೋಜು ಮಾಡಿಕೊಂಡು ಬೆಳಗಾವಿಯಲ್ಲಿ ಕುಳಿತಿದ್ದರು. ಅದೇ ಜಾಗದಲ್ಲಿ ಬಿಎಸ್‌ವೈ ಇದ್ದಿದ್ದರೇ ಅಧಿವೇಶನ ಮಧ್ಯದಲ್ಲೇ ತಾಯಿಗೆ ಸಾಂತ್ವನ ಹೇಳುತ್ತಿದ್ದರು ಎಂದು ಹೇಳಿದರು.
ಮುಂದಿನ ಲೋಕಸಭೆ ಚುನಾವಣೆಯತ್ತ ಇಡೀ ಜಗತ್ತು ನೋಡುತ್ತಿದೆ. ಭಾರತವನ್ನು ಅಗ್ರಮಾನ್ಯ ಸ್ಥಾನಕ್ಕೆ ತೆಗೆದುಕೊಂಡು ಹೋಗುವ ಚುನಾವಣೆ. ನಿಮ್ಮ ಸಣ್ಣ ಪುಟ್ಟ ವ್ಯತ್ಯಾಸ ಏನೇ ಇದ್ದರೂ ಬದಿಗಿಡಿ. ಮುಖಂಡರ ನಡುವಳಿಕೆ ಕಾರ್ಯಕರ್ತರಿಗೆ ನೋವು ತರಬಾರದು. ಜನವರಿ 22ರಂದು ರಾಮ ಮಂದಿರ ಉದ್ಘಾಟನೆ ಆಗುತ್ತದೆ. ರಾಮ ಮಂದಿರ ನಮ್ಮ ದಶಕಗಳ ಹೋರಾಟದ ಕನಸಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ | Wood Smuggling: ವಿಕ್ರಮ್ ಸಿಂಹ ಕೇಸ್‌ನಲ್ಲಿ ಕಾನೂನು ಪ್ರಕಾರ ಕ್ರಮ: ಸಿಎಂ ಸಿದ್ದರಾಮಯ್ಯ
ಬಿಎಸ್‌ವೈ ಅವರು ಅಪ್ರತಿಮ, ಧೀಮಂತ ನಾಯಕ, ಆಧುನಿಕ ಭಗೀರಥ ಎಂದು ಗುರುತಿಸಿಕೊಳ್ಳುತ್ತಾರೆ. ಯಡಿಯೂರಪ್ಪನವರಿಗೂ ಈ ಜಿಲ್ಲೆಗೂ ಅವಿನಾಭಾವ ಸಂಬಂಧವಿದೆ. ಇಲ್ಲಿನ ಮುಖಂಡರಿಗಿಂತ ಹೆಚ್ಚು ಈ ಜಿಲ್ಲೆಯ ಹಳ್ಳಿಗಳಿಗೆ ಭೇಟಿ ಕೊಟ್ಟಿದ್ದಾರೆ. ಉತ್ತರ ಕರ್ನಾಟಕ ಜನರಿಗೆ ಬಡತನ ಇರಬಹುದು, ಆದ್ರೆ ಹೃದಯ ಶ್ರೀಮಂತಿಕೆಯಲ್ಲಿ ಕಡಿಮೆ ಇಲ್ಲ ಎಂದು ತಂದೆಯವರು ಹೇಳುತ್ತಿರುತ್ತಾರೆ. ನೀವು ನನಗೆ ತೋರಿಸಿದ ಪ್ರೀತಿ ನೋಡುತ್ತಿದ್ದರೆ ನಮ್ಮ ತಂದೆಯವರು ಹೇಳಿದ ಮಾತು ಸತ್ಯ ಅನಿಸುತ್ತಿದೆ ಎಂದು ಹೇಳಿದರು.