Site icon Vistara News

Karnataka Election | ಬಿಜೆಪಿಗೆ ಮತ ನೀಡಲು ಕರ್ನಾಟಕದ ಜನ ಸಿದ್ಧರಾಗಿದ್ದಾರೆ: ಅಮಿತ್ ಶಾ

amit shah to address bjp rally in sandur on feb 23 targets 4 districts

ಬೆಂಗಳೂರು: ಈ ಬಾರಿ ಕರ್ನಾಟಕದಲ್ಲಿ (Karnataka Election) ಜನರು ಮತ್ತೆ ಬಿಜೆಪಿಗೆ ಮತ ನೀಡಲು ನಿರ್ಧರಿಸಿದ್ದಾರೆ. ನಾವು ಅವರ ಬಳಿಗೆ ಹೋಗಬೇಕಿದೆಯಷ್ಟೇ. ಆ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ನಿಮ್ಮನ್ನು ಸ್ವಾಗತಿಸಲು ಜನರು ಸಿದ್ಧವಾಗಿದ್ದಾರೆ. ನಾನು ನಿಮಗೆ ಗ್ಯಾರಂಟಿ ನೀಡುತ್ತೇನೆ. ಮೋದಿ ಸರ್ಕಾರ ಕಳೆದ 8 ವರ್ಷದಲ್ಲಿ ಕಾರ್ಯಕರ್ತರು ತಲೆ ತಗ್ಗಿಸುವಂಥ ಯಾವುದೇ ಕೆಲಸವನ್ನು ಮಾಡಿಲ್ಲ. ಹಾಗಾಗಿ, ಹೆಮ್ಮೆಯಿಂದ ತಲೆ ಎತ್ತಿ, ಮತದಾರರನ್ನು ಸಂಪರ್ಕಿಸಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಬಿಜೆಪಿಯ ಬೂತ್ ಅಧ್ಯಕ್ಷರು ಮತ್ತು ಬಿಎಲ್ಎ-2 ಸಭೆಯಲ್ಲಿ ಮಾತನಾಡಿದ ಅಮಿತ್ ಶಾ ಅವರು, ಈ ಬಾರಿ ಬೆಂಗಳೂರಲ್ಲಿ 21 ಸೀಟುಗಳನ್ನು ಗೆದ್ದು ಕರ್ನಾಟಕದಲ್ಲಿ ಪೂರ್ಣ ಬಹುಮತದ ಸರ್ಕಾರವನ್ನು ಬಿಜೆಪಿ ರಚಿಸಲಿದೆ ಎಂದು ಹೇಳಿದರು.

ದಕ್ಷಿಣ ಭಾರತದ ಹೆಬ್ಬಾಗಿಲು
ನಾನು ದೇಶಾದ್ಯಂತ ವಿಶೇಷವಾಗಿ ಉತ್ತರ ಭಾರತ, ಪಶ್ಚಿಮ ಭಾರತ, ಈಶಾನ್ಯ ಭಾರತದಲ್ಲಿ ಪ್ರವಾಸ ಮಾಡುವಾಗ ಎಲ್ಲ ಕಾರ್ಯಕರ್ತರು ಒಂದೇ ಪ್ರಶ್ನೆ ಕೇಳುತ್ತಾರೆ. ದಕ್ಷಿಣ ಭಾರತದಲ್ಲೂ ಬಿಜೆಪಿಯನ್ನು ಗಟ್ಟಿಗೊಳಿಸಬೇಕು. ಇದು ಕೇವಲ ದಕ್ಷಿಣ ಭಾರತದ ಕಾರ್ಯಕರ್ತರ ಕರ್ತವ್ಯ ಅಲ್ಲ. ದೇಶದ ಎಲ್ಲ ಕಾರ್ಯಕರ್ತರ ಕರ್ತವ್ಯ. ಕರ್ನಾಟಕದ ಮೂಲಕ ದಕ್ಷಿಣ ಭಾರತದಲ್ಲಿ ಈ ಬಾರಿ ಕಮಲ ಅರಳಲಿದೆ ಎಂದು ಅಮಿತ್ ಶಾ ಹೇಳಿದರು.

ಗುಜರಾತ್, ಉತ್ತರಾಖಂಡ, ಮಣಿಪುರ, ಗೋವಾ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಬಿಜೆಪಿ ಪ್ರಚಂಡ ಬಹುಮತದ ಮೂಲಕವೇ ಸರ್ಕಾರ ರಚನೆ ಮಾಡಿದೆ. ಗುಜರಾತ್‌ನಲ್ಲಿ ಮತದಾರರು ಎಲ್ಲ ದಾಖಲೆಗಳನ್ನು ಪುಡಿ ಪುಡಿ ಮಾಡಿದ್ದಾರೆ. ಕಾಂಗ್ರೆಸ್‌ಗೆ ಅಧಿಕೃತ ಪ್ರತಿಪಕ್ಷ ಸ್ಥಾನವಾಗುವ ಅರ್ಹತೆ ಕೂಡ ಸಿಗದಂತೆ ಮಾಡಿದ್ದಾರೆ ಎಂದು ಹೇಳಿದರು.

ಬಡವರ ಪರ ಸರ್ಕಾರ
ಬಡತನ ನಿರ್ಮೂಲನೆಗಾಗಿ ಇಂದಿರಾ ಗಾಂಧಿ ಅವರು ಗರೀಬಿ ಹಠಾವೋ ನೀತಿಯನ್ನು ಜಾರಿಗೆ ತಂದರು. ಆದರೆ, ಈ ಕಾಂಗ್ರೆಸಿಗರು ಗರೀಬಿ ಹಠಾವೋ ಬದಲಿಗೆ ಬಡವರನ್ನೇ ಓಡಿಸುವ ಕೆಲಸವನ್ನು ಮಾಡಿದರು! ಕಳೆದ 8 ವರ್ಷದಲ್ಲಿ ಮೋದಿ ಸರ್ಕಾರ ಬಡವರಿಗಾಗಿ ಸಾಕಷ್ಟು ಕೆಲಸಗಳನ್ನು ಮಾಡಿದೆ. 80 ಕೋಟಿ ಜನರಿಗೆ ಬ್ಯಾಂಕ್ ಖಾತೆ ಒದಗಿಸಿದೆ. ಕೋಟ್ಯಂತರ ಕುಟುಂಬಗಳಿಗೆ ಶೌಚಾಲಯ ನಿರ್ಮಾಣ ಮಾಡಿಕೊಟ್ಟಿದೆ. ನಾಲ್ಕು ಕೋಟಿಗೂ ಅಧಿಕ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದೆ. 13 ಕೋಟಿ ಮಹಿಳೆಯರಿಗೆ ಗ್ಯಾಸ್ ಸಿಲಿಂಡರ್ ನೀಡಲಾಗಿದೆ. 7 ಕೋಟಿ ಬಡವರ ಪೂರ್ತಿ ಆರೋಗ್ಯ ವೆಚ್ಚವನ್ನು ಭರಿಸಲಾಗುತ್ತಿದೆ. ಕೊರೊನಾದಿಂದ ಜನರನ್ನು ಪಾರು ಮಾಡಲು ಮೋದಿ ಸರ್ಕಾರ ಉಚಿತ ಲಸಿಕೆಗಳನ್ನು ನೀಡಿದೆ. ಕೊರೊನಾದಿಂದ ಉದ್ಯೋಗ ಕಳೆದುಕೊಂಡ ಜನರಿಗೆ ನೆರವು ನೀಡುವುದಕ್ಕಾಗಿ ಕೇಂದ್ರ ಸರ್ಕಾರ 5 ಕೆ ಜಿ ಧಾನ್ಯವನ್ನು ಉಚಿತವಾಗಿ ನೀಡುತ್ತಿದೆ ಎಂದು ತಮ್ಮ ಸರ್ಕಾರದ ಸಾಧನೆಗಳನ್ನು ಬಿಚ್ಚಿಟ್ಟರು.

ಬೂತ್ ಬಲಶಾಲಿಯಾಗಬೇಕು
ನಾವು ಬೂತ್ ಗೆದ್ದರೆ ಚುನಾವಣೆ ಗೆದ್ದಂತೆಯೇ ಸರಿ. ಹಾಗಾಗಿ, ನೀವೆಲ್ಲರೂ(ಕಾರ್ಯಕರ್ತರು) ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಬೇಕು. ಪ್ರತಿ ಮನೆ ಮನೆಗೆ ಹೋಗಿ ಮತದಾರರನ್ನು ಸಂಪರ್ಕಿಸುವ ಕೆಲಸವನ್ನು ಮಾಡಬೇಕು. ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸ್ವಂತ ಬಲದ ಮೇಲೆ ಸರ್ಕಾರ ರಚಿಸಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ನೀವು(ಕಾರ್ಯಕರ್ತರು) ಬೂತ್ ಅನ್ನು ಮಜಬೂತ್ ಮಾಡಿ, ದೇಶವನ್ನು ಮೋದಿ ಮಜಬೂತ್ ಮಾಡುತ್ತಾರೆ. ನೀವು ಬೂತ್‌ಗಳನ್ನು ಬಲಶಾಲಿ ಮಾಡಿದರೆ, ಅದರಿಂದ ಮೋದಿ ಕೈ ಬಲಗೊಳ್ಳುವುದು. ಮೋದಿ ಬಲಶಾಲಿಯಾದರೆ, ದೇಶ ಬಲಿಶಾಲಿಯಾಗುವುದು ಎಂದು ಅಮಿತ್ ಶಾ ಹೇಳಿದರು.

ಏಕಾಂಗಿಯಾಗಿ ಸ್ಪರ್ಧೆ, ಗೆಲುವು
ಕರ್ನಾಟಕದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಇದೆ ಎಂದು ಪತ್ರಕರ್ತರು ಹೇಳುತ್ತಾರೆ. ಆದರೆ, ನಾನು ಹೇಳುತ್ತೇನೆ. ನೇರ ಹಣಾಹಣಿ ಇದೆ. ಯಾಕೆಂದರೆ, ಜೆಡಿಎಸ್‌ಗೆ ವೋಟ್ ಮಾಡಿದರೆ, ಅದು ಕಾಂಗ್ರೆಸ್‌ಗೆ ವೋಟ್ ಮಾಡಿದ ಹಾಗೆ. ಅಂದರೆ, ಇದು ನೇರ ಹಣಾಹಣಿಯಾಗಲಿಲ್ಲವೇ? ಫಲಿತಾಂಶದ ಬಳಿಕ ಬಿಜೆಪಿ-ಜೆಡಿಎಸ್ ಜತೆಗೂಡಿ ಸರ್ಕಾರ ರಚಿಸಲಿವೆ ಎಂಬ ಮಾತುಗಳಿವೆ. ಆದರೆ, ಈ ವೇದಿಕೆ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ. ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಮತ್ತು ಏಕಾಂಗಿಯಾಗಿಯೇ ಅಧಿಕಾರಕ್ಕೆ ಏರಲಿದೆ ಎಂದು ಅಮಿತ್ ಶಾ ಹೇಳಿದರು.

ಇದನ್ನೂ ಓದಿ | Karnataka Election | ಜೆಡಿಎಸ್‌ಗೆ ವೋಟ್ ಮಾಡಿದ್ರೆ ಕಾಂಗ್ರೆಸ್‌ಗೆ ವೋಟ್ ಮಾಡಿದ ಹಾಗೆ ಎಂದ ಅಮಿತ್ ಶಾ!

Exit mobile version