Site icon Vistara News

Viral Video | ಉಚಿತ ಹೆಲ್ಮೆಟ್‌ಗಾಗಿ ಮುಗಿಬಿದ್ದ ಜನ; ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೊ ವೈರಲ್‌

tumkur helmet vedio viral social media

ತುಮಕೂರು: ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವ ಹೊತ್ತಿನಲ್ಲೇ ರಾಜಕೀಯ ನಾಯಕರು ಉಚಿತವಾಗಿ ವಸ್ತುಗಳನ್ನು ಕೊಡುತ್ತಿರುವ ಸುದ್ದಿಗಳು ಅಲ್ಲೊಂದು, ಇಲ್ಲೊಂದು ಕೇಳುತ್ತಿರುವ ಹೊತ್ತಿನಲ್ಲಿಯೇ ಈಗ ಶಿರಾ ನಗರದಲ್ಲಿ ಹೆಲ್ಮೆಟ್‌ ಸುದ್ದಿ ಮಾಡಿದೆ. ಉಚಿತವಾಗಿ ಕೊಡಲಾಗುತ್ತಿದೆ ಎಂದು ಘೋಷಣೆಯಾಗಿದ್ದೇ ಆಗಿದ್ದು, ನಾ ಮುಂದು, ತಾ ಮುಂದು ಎಂಬಂತೆ ಜನಜಂಗುಳಿ ಏರ್ಪಟ್ಟಿದ್ದು, ಗಾಬರಿಗೊಂಡ ಆಯೋಜಕರು ವಿತರಣೆಯನ್ನು ಅರ್ಧಕ್ಕೇ ಸ್ಥಗಿತಗೊಳಿಸಿ ಕಾಲ್ಕಿತ್ತಿದ್ದಾರೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

ತುಮಕೂರು ಜಿಲ್ಲೆ ಶಿರಾ ನಗರದಲ್ಲಿ ಹಲವು ದಿನಗಳಿಂದ ವಾಹನ ಸವಾರರಿಗೆ ರಸ್ತೆ ನಿಯಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಆರ್‌. ಉಗ್ರೇಶ್‌ ಆಯೋಜನೆ ಮಾಡುತ್ತಾ ಬರುತ್ತಿದ್ದಾರೆ. ಇದರ ಭಾಗವಾಗಿ ಭಾನುವಾರ (ನ. ೨೦) ಉಚಿತ ಹೆಲ್ಮೆಟ್‌ ನೀಡುವುದಾಗಿ ಘೋಷಣೆ ಮಾಡಿದ್ದರು.

ಹೆಲ್ಮೆಟ್‌ ಪಡೆಯಲು ನೂಕುನುಗ್ಗಲು
ನಗರದ ಪ್ರವಾಸ ಮಂದಿರದ ಸರ್ಕಲ್ ಉಚಿತವಾಗಿ ಹೆಲ್ಮೆಟ್ ವಿತರಣೆ ಮಾಡಲಾಗುತ್ತಿದೆ ಎಂಬ ಸುದ್ದಿ ಬಂದ ಬೆನ್ನಲ್ಲೇ ಅಲ್ಲಿಗೆ ಸಾರ್ವಜನಿಕರು ದಾಂಗುಡಿ ಇಟ್ಟಿದ್ದಾರೆ. ಇದರಿಂದ ಕೆಲ ಸಮಯ ಸುತ್ತಮುತ್ತ ಮಾರ್ಗದಲ್ಲಿ ಟ್ರಾಫಿಕ್‌ ಜಾಮ್‌ ಆಗಿತ್ತು. ಈ ವೇಳೆ ನನಗೊಂದು, ತನಗೊಂದು ಎಂದು ಜನ ಹೆಲ್ಮೆಟ್ ಪಡೆಯಲು ಮುಗಿಬಿದ್ದಿದ್ದಾರೆ.

ಉಚಿತ ಹೆಲ್ಮೆಟ್ ಪಡೆಯಲು ಜನರು ಮುಗಿಬೀಳುತ್ತಿದ್ದಂತೆ ಜನರನ್ನು ನಿಯಂತ್ರಣ ಮಾಡಲು ಆಯೋಜಕರಿಗೆ ಆಗಲಿಲ್ಲ. ಈ ಹಿನ್ನೆಲೆಯಲ್ಲಿ ಟ್ರಾಫಿಕ್‌ ಜಾಮ್‌ ಸಹ ಹೆಚ್ಚಾಗಿದ್ದು, ಉಳಿದ ನಾಗರಿಕರಿಂದ ಆಕ್ಷೇಪ ವ್ಯಕ್ತವಾಗಿದೆ. ಇದರಿಂದ ಉಚಿತ ಹೆಲ್ಮೆಟ್‌ ನೀಡುವ ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಿದ ಆಯೋಜಕರು ಅಲ್ಲಿಂದ ತೆರಳಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಲ್ಮೆಟ್‌ ಸಿಗದವರು ನಿರಾಸೆಯಿಂದ ತೆರಳಿದ್ದಾರೆ.

ಇದನ್ನೂ ಓದಿ | Siddaramaiah Fans | ಹೆಲಿಕಾಪ್ಟರ್‌ನಲ್ಲಿ ಬಂದ ಸಿದ್ದರಾಮಯ್ಯ; ನೋಡೋಕೆ ನೂಕುನುಗ್ಗಲು, ಲಘು ಲಾಠಿ ಪ್ರಹಾರ

Exit mobile version