ಬಾಗಲಕೋಟೆ: ಮಕ್ಕಳ ಕಳ್ಳರೆಂದು ಭಾವಿಸಿ ಪ್ರಯಾಣಿಕರು ಸಾಗುತ್ತಿದ್ದ ಕಾರಿಗೆ ಬೆಂಕಿ ಹಚ್ಚಿರುವ ಘಟನೆ ತಾಲೂಕಿನ ಖಜ್ಜಿಡೋಣಿ ಗ್ರಾಮದ ಬಳಿ ಶುಕ್ರವಾರ ನಡೆದಿದೆ. ಬಾಗಲಕೋಟೆ-ಬೆಳಗಾವಿ (Bagalkote News) ಹೆದ್ದಾರಿಯಲ್ಲಿ ಹುಬ್ಬಳ್ಳಿ ಪಾಸಿಂಗ್ ಕೆಎ 25 ಎಂಸಿ 2832 ಸಂಖ್ಯೆಯ ಕಾರಿಗೆ ಬೆಂಕಿ ಹಚ್ಚಲಾಗಿದೆ. ಇದರಿಂದ ಕಾರು ಧಗ ಧಗ ಸುಟ್ಟು ಕರಕಲಾಗಿದೆ.
ಚಿಕ್ಕೂರು ಗ್ರಾಮದಿಂದ ಮಕ್ಕಳ ಕಳ್ಳರೆಂದು ಕಾರನ್ನು ಸ್ಥಳೀಯರು ಬೆನ್ನಟ್ಟಿದ್ದಾರೆ. ಇದರಿಂದ ಕಾರಿನಲ್ಲಿದ್ದವರು ಗಾಬರಿಯಾಗಿ ಖಜ್ಜಿಡೋಣಿ ಗ್ರಾಮದ ಕಡೆ ಬಂದಿದ್ದಾರೆ. ಅಲ್ಲಿ ಪ್ರಯಾಣಿಕರನ್ನು ತಡೆದಿರುವ ಸ್ಥಳೀಯರು ಕಾರನ್ನು ರಸ್ತೆ ಬದಿ ತಳ್ಳಿ ಬೆಂಕಿ ಹಚ್ಚಿದ್ದಾರೆ. ಲೋಕಾಪುರ ಠಾಣೆ ಪೊಲೀಸರು ಆಗಮಿಸಿ ಕಾರು ಪ್ರಯಾಣಿಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಾರಿನಲ್ಲಿದ್ದವರು ಮಕ್ಕಳ ಕಳ್ಳರೋ ಅಥವಾ ಅಲ್ಲವೋ ಎಂಬುವುದು ಪೊಲೀಸ್ ತನಿಖೆ ಬಳಿಕ ತಿಳಿದುಬರಬೇಕಿದೆ.
ಕಾಂಗ್ರೆಸ್ ಅಭ್ಯರ್ಥಿ ತೇಜೋವಧೆಗೆ ಯತ್ನ ಆರೋಪ; ಇಬ್ಬರ ವಿರುದ್ಧ ಪ್ರಕರಣ
ಕಾರವಾರ: ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಮಂಕಾಳು ವೈದ್ಯ ವಿರುದ್ಧ ನಕಲಿ ಫೇಸ್‍ಬುಕ್ ಖಾತೆ ಮೂಲಕ ತೇಜೋವಧೆಗೆ ಯತ್ನಿಸಿದ ಇಬ್ಬರ ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಭಟ್ಕಳ ತಾಲೂಕಿನ ಶಿರಾಲಿಯ ಗುಮ್ಮನಹಕ್ಕಲದ ನಿವಾಸಿ ಚಂದ್ರು ನಾಯ್ಕ (33), ಮುರ್ಡೇಶ್ವರ ಜನತಾ ಕಾಲೋನಿಯ ನಾಗರಾಜ ಪಟಗಾರ (38) ನಕಲಿ ಫೇಸ್‍ಬುಕ್ ಖಾತೆ ತೆರೆದು ಅವಹೇಳನಕಾರಿ ಸಂದೇಶ ಪೋಸ್ಟ್ ಮಾಡಿದ ಆರೋಪಿಗಳಾಗಿದ್ದಾರೆ.
ಆರೋಪಿಗಳು `ಕಾವೇರಿ ನ್ಯೂಸ್’ ಎಂಬ ನಕಲಿ ಫೇಸ್‍ಬುಕ್ ಖಾತೆಯನ್ನು ತೆರೆದು, ಮಂಕಾಳು ವೈದ್ಯ ವಿರುದ್ಧ ಅವಹೇಳನಕಾರಿ ಸಂದೇಶ ರವಾನಿಸಿದ್ದರು. ಈ ಕುರಿತು ಹೊನ್ನಾವರ ತಾಲೂಕಿನ ಹಡಿನಬಾಳ ನಿವಾಸಿ ರಮೇಶ ನಾಯ್ಕ ಅವರು ಹೊನ್ನಾವರ ಠಾಣೆಯಲ್ಲಿ ದೂರು ನೀಡಿದ್ದರು. ಭಟ್ಕಳ-ಹೊನ್ನಾವರ ಕ್ಷೇತ್ರದ ಮಾಜಿ ಶಾಸಕ ಮಂಕಾಳು ವೈದ್ಯ ಅವರ ಕುಟುಂಬದ ಕುರಿತು ಅವಹೇಳನಕಾರಿಯಾದ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ್ದಾರೆ. ಆರೋಪಿತರು ಯಾವುದೋ ಮಹಿಳೆಯ ನೇಣು ಹಾಕಿಕೊಂಡ ಫೋಟೋವನ್ನು ಎಡಿಟ್ ಮಾಡಿ ಮಂಕಾಳ ವೈದ್ಯರವರು ತಮ್ಮ ಪತ್ನಿಯನ್ನು ಕೊಲೆ ಮಾಡಿ ನೇಣು ಹಾಕಿ, ಆತ್ಮಹತ್ಯೆ ಎಂದು ಬಿಂಬಿಸಿದ್ದಾಗಿ ಸುಳ್ಳು ಸುದ್ದಿ ಪ್ರಸಾರ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು.
ಇದನ್ನೂ ಓದಿ | Rudresh Murder : ರುದ್ರೇಶ್ ಕೊಲೆ ಆರೋಪಿ ಮಹಮ್ಮದ್ ಗೌಸ್ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ ಎನ್‌ಐಎ
ಆರೋಪಿಗಳು ಈ ಹಿಂದೆಯೂ ಹಲವು ಬಾರಿ ಮಂಕಾಳು ವೈದ್ಯ ಅವರ ಹೆಸರನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಡಿಸುವ ಪ್ರಯತ್ನ ಮಾಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಂಕಾಳು ವೈದ್ಯರಿಗೆ ಹಾಗೂ ಮಂಕಾಳು ವೈದ್ಯರ ಅಭಿಮಾನಿ ಬಳಗದ ಹೆಸರು ಕೆಡಿಸುವ ಹಾಗೂ ಅವರ ತೇಜೋವಧೆಯನ್ನು ಮಾಡುವ ಹುನ್ನಾರವನ್ನೂ ಆರೋಪಿಗಳು ಮಾಡುತ್ತಿದ್ದಾರೆ. ಅವರ ಹೆಸರನ್ನು ಹಾಳು ಮಾಡಿ, ಚುನಾವಣೆಯಲ್ಲಿ ಅವರಿಗೆ ಹಿನ್ನಡೆಯನ್ನುಂಟು ಮಾಡುವುದೇ ಆರೋಪಿತರ ಉದ್ದೇಶವಾಗಿದೆ. ಹೀಗಾಗಿ ಇಬ್ಬರು ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಡಿನಬಾಳದ ರಮೇಶ ನಾಯ್ಕ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಹೊನ್ನಾವರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.