Site icon Vistara News

ಬಿಜೆಪಿ ವಿಜಯ ಸಂಕಲ್ಪ ಅಭಿಯಾನ : ಜಗಮೆಚ್ಚಿದ ನಾಯಕನನ್ನು ಟೀಕಿಸುವ ಡಿಕೆಶಿ, ಸಿದ್ದರಾಮಯ್ಯಗೆ ಬುದ್ಧಿ ಕಲಿಸಿ ಎಂದ ಬಿಎಸ್‌ವೈ

BJP vijaya sankalpa Abhiyana

ಬಿಜಾಪುರ: ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಿಬ್ಬರು ಜಗತ್ತೇ ಮೆಚ್ಚಿದ ಪ್ರಧಾನಿಯವರನ್ನು ಟೀಕಿಸುತ್ತಾರೆ. ಅದಕ್ಕೆ ಜನರು ತಕ್ಕ ಉತ್ತರ ಕೊಡಬೇಕು ಎಂದು ಬಿಜೆಪಿಯ ಹಿರಿಯ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದರು. ಅವರು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ ಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಮಾತನಾಡಿದರು.

ʻʻಮಹಿಳೆಯರ ಸಬಲೀಕರಣಕ್ಕೆ ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ಶ್ರಮಿಸಿದೆ. ಬಿಜೆಪಿಯ ಗೆಲುವಿಗೆ ಪಕ್ಷ ಮಾಡಿದ ಕಾರ್ಯಗಳು ನೆರವಾಗಲಿದೆʼʼ ಎಂದು ಹೇಳಿದ ಅವರು, ಮನೆ ಮನೆಗೆ ಹೋಗಿ ಮತದಾರರ ಮನ ಒಲಿಸಿ ಪಕ್ಷವನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ʻʻಕಾಂಗ್ರೆಸ್‍ನಲ್ಲಿ ಸಮರ್ಥ ನಾಯಕರೇ ಇಲ್ಲ ಎಂದು ಟೀಕಿಸಿದ ಅವರು, ಕಾಂಗ್ರೆಸ್ಸಿಗರು ಕೇವಲ ನಾಟಕ ಮಾಡುವವರು. ದೇಶ, ರಾಜ್ಯದ ಜನರಿಗೆ ದ್ರೋಹ ಮಾಡಿದ್ದಾರೆ. ಆ ಪಕ್ಷದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಿಬ್ಬರು ಜಗತ್ತೇ ಮೆಚ್ಚಿದ ಪ್ರಧಾನಿಯವರನ್ನು ಟೀಕಿಸುತ್ತಾರೆ. ಅದಕ್ಕೆ ಜನರು ತಕ್ಕ ಉತ್ತರ ಕೊಡಬೇಕುʼʼ ಎಂದು ವಿನಂತಿಸಿದರು.

ʻʻಈ ಬಾರಿ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷವಾಗಬೇಕಿದೆ. ಮುಂದಿನ ಬಾರಿ ಕಾಂಗ್ರೆಸ್ ಪಕ್ಷ ನಿರ್ನಾಮವಾಗಲಿದೆʼ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷವು 140ಕ್ಕೂ ಹೆಚ್ಚು ಸ್ಥಾನ ಪಡೆಯಲು ನಾವೆಲ್ಲರೂ ಪ್ರಯತ್ನ ಮಾಡಬೇಕೆಂದು ವಿನಂತಿಸಿದರು. ಎಸ್‍ಸಿ/ಎಸ್‍ಟಿ ಸಮುದಾಯಕ್ಕೆ ಹೆಚ್ಚಿನ ಅನುಕೂಲ ಮಾಡುತ್ತಿದ್ದೇವೆ. ನೀರಾವರಿಗೆ ಆದ್ಯತೆ ಕೊಟ್ಟಿದ್ದೇವೆ. ಸರ್ವ ಜನಾಂಗದ ಶಾಂತಿಯ ತೋಟವಾದ ಕರ್ನಾಟಕದಲ್ಲಿ ಬಿಜೆಪಿಯ ಕಮಲ ಚಿಹ್ನೆಯನ್ನು ಅರಳಿಸಬೇಕೆಂದು ಕೋರಿದರು.

ರಾಜ್ಯದ ಸಚಿವ ಡಾ. ಅಶ್ವತ್ಥನಾರಾಯಣ ಅವರು ಮಾತನಾಡಿ, ಕಾರ್ಯಕರ್ತರು ವಿಜಯ ಸಂಕಲ್ಪ ಅಭಿಯಾನದಲ್ಲಿ ಸಕ್ರಿಯರಾಗಿ ಭಾಗವಹಿಸಲು ಮನವಿ ಮಾಡಿದರು. ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕೆಂದು ಕೋರಿದರು. ಪಕ್ಷವು ಈ ಬಾರಿ 150ಕ್ಕೂ ಹೆಚ್ಚು ಸ್ಥಾನ ಗೆದ್ದು ಅಧಿಕಾರ ಪಡೆಯುವಂತಾಗಬೇಕಿದೆ. ಸಮೃದ್ಧ, ಭವ್ಯ ಕರ್ನಾಟಕ ನಿರ್ಮಾಣಕ್ಕೆ ನಾವೆಲ್ಲರೂ ಶ್ರಮಿಸಬೇಕು ಎಂದು ತಿಳಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಸಂಸದರು, ಶಾಸಕರು, ಸ್ಥಳೀಯ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

ಇದನ್ನೂ ಓದಿ | ವಿಜಯ ಸಂಕಲ್ಪ ಅಭಿಯಾನ : ಕಾಂಗ್ರೆಸ್‌ ನಾಯಕನಿಲ್ಲದ ಪಕ್ಷ, ಸಮಾಜ ಒಡೆಯುವ ಪಕ್ಷ ಎಂದ ಜೆ.ಪಿ. ನಡ್ಡಾ

Exit mobile version