ತುಮಕೂರು: ಜಿಲ್ಲೆಯ ತಿಪಟೂರು ತಾಲೂಕು (Tiptur News) ಮಡೆನೂರು ಭೋವಿ ಕಾಲೋನಿಯಲ್ಲಿ ದೆವ್ವದ ಹೆಸರಿನಲ್ಲಿ ಕುಚೇಷ್ಟೆಗೆ ಜನರು ಕಂಗಲಾಗಿದ್ದಾರೆ. ಕಳೆದ ಏಳೆಂಟು ತಿಂಗಳಿಂದ ಪ್ರತಿ ದಿನ ಸಂಜೆ 6 ಗಂಟೆ ನಂತರ ಶುರುವಾಗುವ ದೆವ್ವದ ಕಾಟದಿಂದ ಜನರು ಬೆಚ್ಚಿ ಬಿದ್ದಿದ್ದಾರೆ.
ರಾತ್ರಿ ವೇಳೆ ಮನೆ ಮೇಲೆ ನಿರಂತರವಾಗಿ ಕಲ್ಲು ಎಸೆಯುತ್ತದೆ. ಶಿಳ್ಳೆ ಹೊಡೆದರೆ ಪ್ರತಿಯಾಗಿ ಶಿಳ್ಳೆ ಹೊಡೆಯುತ್ತದೆ. ಮನೆ ಸುತ್ತಮುತ್ತಲ ಹುಲ್ಲಿನ ಬಣವೆಗೆ ಬೆಂಕಿ ಹಚ್ಚುತ್ತದೆ. ಈವರೆಗೂ ಎರಡು ಬಾರಿ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಮೊಬೈಲ್ ನಂಬರ್ ಹೇಳಿ, ದೆವ್ವ ಕೇಕೆ ಹಾಕುತ್ತದೆ. ನನ್ನ ಸಾವಿಗೆ ಕಾರಣರಾದವರನ್ನು ಕೊಲ್ಲುತ್ತೇನೆ ಎಂದು ಪತ್ರ ಬರೆದು ಬೆದರಿಸುತ್ತದೆ. ಪೇಪರ್‌ನಲ್ಲಿ ಬರೆದು ಅದನ್ನು ಕಲ್ಲಿನಲ್ಲಿ ಸುತ್ತಿ ಮನೆ ಮೇಲೆ ಎಸೆಯುತ್ತದೆ. ಮೂರ್ನಾಲ್ಕು ದಿನಗಳಿಂದ ಕತ್ತಲೆಯಿಂದ ಧ್ವನಿ ಬರುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಕಳೆದ 8 ತಿಂಗಳ ಹಿಂದೆ ಇದೇ ಗ್ರಾಮದ ಶಂಕರ ಎಂಬಾತ ಹೃದಯಾಘಾತದಿಂದ ಮೃತಪಟ್ಟಿದ್ದ. ಆತ ನಿಧನವಾದ ಬಳಿಕ ದಾಯಾದಿಗಳ ಮೇಲೆ ಹಗೆ ಸಾಧಿಸಲು ದೆವ್ವದ ರೀತಿ ಕಾಡುತ್ತಿದ್ದಾನೆ. ನಾನು ಶಂಕರ್ ಉರುಫ್ ಇಡ್ಲಿ, ನಿಮ್ಮನ್ನೆಲ್ಲಾ ಕೊಲೆ ಮಾಡುತ್ತೇನೆ ಎಂದು ದೆವ್ವ ಹೇಳುತ್ತದೆ. ದಾಯಾದಿಗಳಾದ ಗಂಗಾಧರ್, ಮೂರ್ತಿ ಹಾಗೂ ಹೆಂಡತಿ ಲಾವಣ್ಯ ವಾಸವಿರುವ ಮನೆ ಮೇಲೆ ಕಲ್ಲು ಎಸೆಯುವುದು, ಮನೆ ಮುಂದೆ ಇರುವ ಕುರಿಗಳನ್ನು ಕದಿವಂತಹ ಘಟನೆಗಳು ನಡೆಯುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ | Kidnap case : ತವರು ಮನೆ ಸೇರಿದವಳನ್ನು ಭೀಮನ ಅಮಾವಾಸ್ಯೆಯಂದೇ ಅಪಹರಿಸಿದ ಪತಿ!
ಪವಾಡ ಭಂಜಕ ಹುಲಿಕಲ್ ನಟರಾಜು ಭೇಟಿ
ದೆವ್ವದ ಹೆಸರಿನಲ್ಲಿ ಕುಚೇಷ್ಟೆಗೆ ಜನರು ಕಂಗಲಾದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಪವಾಡ ಭಂಜಕ ಹುಲಿಕಲ್ ನಟರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಡೀ ರಾತ್ರಿ ಕಾದರೂ ದೆವ್ವ ಬಂದಿಲ್ಲ. ಕೂಗಿದರೂ, ಶಿಳ್ಳೆ ಹೊಡೆದರೂ ದೆವ್ವ ಪ್ರತಿಕ್ರಿಯೆ ಕೊಟ್ಟಿಲ್ಲ. ಹೀಗಾಗಿ ಇದು ಯಾರೋ ಕಿಡಿಗೇಡಿಗಳ ಕೃತ್ಯವಾಗಿದೆ ಎಂದು ಭಯಗ್ರಸ್ತ ಕುಟುಂಬಕ್ಕೆ ಹುಲಿಕಲ್ ನಟರಾಜು ಧೈರ್ಯ ತುಂಬಿದ್ದಾರೆ.
ಅದೇ ರೀತಿ ಸ್ಥಳಕ್ಕೆ ತಿಪಟೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜನರಲ್ಲಿ ಭಯ ಹುಟ್ಟು ಹಾಕುತ್ತಿರುವ ಕಿಡಿಗೇಡಿಯನ್ನು ಶೀಘ್ರ ಪತ್ತೆ ಹಚ್ಚುತ್ತೇವೆ ಎಂದು ಪೊಲೀಸರು ಭರವಸೆ ನೀಡಿದ್ದಾರೆ.