ಬೆಂಗಳೂರು: ಪೆಪ್ಪರ್ ಸ್ಪ್ರೇ(Pepper Spray) ಬಹಳ ಅಪಾಯಕಾರಿಯಾಗಿದ್ದು, ರಕ್ಷಣೆಗಾಗಿ ಅದನ್ನು ಅಸ್ತ್ರವನ್ನಾಗಿ ಬಳಸಬಾರದು. ಪ್ರಾಣಕ್ಕೆ ಅಪಾಯವಾದ ಸಂದರ್ಭ ಬಿಟ್ಟು ಬೇರೆ ಸಂದರ್ಭಗಳಲ್ಲಿ ಅದನ್ನು ಬಳಸಲು ಕಾನೂನಿನಲ್ಲಿ ಯಾವುದೇ ಅವಕಾಶ ಇಲ್ಲ ಎಂದು ಕರ್ನಾಟಕ ಹೈಕೋರ್ಟ್(High court of Karnataka) ಸ್ಪಷ್ಟಪಡಿಸಿದೆ. ಬೆಂಗಳೂರಿನಲ್ಲಿ ನಡೆದಿದ್ದ ಪೆಪ್ಪರ್ ಸ್ಪ್ರೇ ದಾಳಿ ಪ್ರಕರಣದ ತನಿಖೆಗೆ ಕೈಗೆತ್ತಿಕೊಂಡ ಹೈಕೋರ್ಟ್‌ನ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ , ಪ್ರಾಣಕ್ಕೆ ಕಂಟಕ ತಂದೊಡ್ಡುವ ಪೆಪ್ಪರ್ ಸ್ಪ್ರೇಯನ್ನು ಸ್ವಯಂ ರಕ್ಷಣೆಗಾಗಿ ಬಳಸಲು ಅವಕಾಶ ಇಲ್ಲ ಎಂದು ಹೇಳಿದೆ. ಸಿ. ಕೃಷ್ಣಯ್ಯ ಚೆಟ್ಟಿ ಅಂಡ್ ಸನ್ಸ್ ಕಂಪನಿ ಚಿನ್ನಾಭರಣಗಳ ಮಳಿಗೆಯ ನಿರ್ದೇಶಕ ಸಿ. ಗಣೇಶ್ ನಾರಾಯಣ ಮತ್ತು ಅವರ ಪತ್ನಿ ವಿದ್ಯಾ ನಟರಾಜ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿದ ಏಕಸದಸ್ಯ ನ್ಯಾಯಪೀಠ ಈ ಅಂಶದ ಮೇಲೆ ಗಮನ ಸೆಳೆದಿದೆ.
ಏನಿದು ಪ್ರಕರಣ?
ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕೃಷ್ಣಯ್ಯ ಚೆಟ್ಟಿ ಅಂಡ್ ಸನ್ಸ್ ಕಂಪನಿ ಕಂಪನಿಯ ಉದ್ಯೋಗಿ ರಾಜ್‌ದೀಪ್ ದಾಸ್ ಅವರ ಮೇಲೆ ಸಿ. ಗಣೇಶ್ ನಾರಾಯಣ ಮತ್ತು ಅವರ ಪತ್ನಿ ವಿದ್ಯಾ ನಟರಾಜ್ ಪೆಪ್ಪರ್ ಸ್ಪ್ರೇ ದಾಳಿ ನಡೆಸಿದ್ದರು. ರಾಜ್‌ದೀಪ್ ದಾಸ್ ಅವರು ನೀಡಿದ ದೂರಿನ ಆಧಾರದ ಮೇಲೆ ಅವರ ವಿರುದ್ಧ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ. ಏಪ್ರಿಲ್ 30, 2023 ರಂದು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರಲ್ಲಿ ದೂರು ದಾಖಲಿಸಲಾಗಿದೆ. ಪ್ರಕರಣದ ಕಾನೂನುಬದ್ಧತೆಯನ್ನು ಪ್ರಶ್ನಿಸಿದ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ತಮ್ಮ ರಕ್ಷಣೆಗಾಗಿ ಪೆಪ್ಪರ್ ಸ್ಪ್ರೆ ಬಳಸಿದ್ದಾರೆ ಮತ್ತು ಅದನ್ನು ಐಪಿಸಿ ಸೆಕ್ಷನ್ 100 ರ ಅಡಿಯಲ್ಲಿ ರಕ್ಷಿಸಲಾಗಿದೆ. ದಾಸ್ ಮತ್ತು ಭದ್ರತಾ ಸಿಬ್ಬಂದಿ ಅರ್ಜಿದಾರರ ಆಸ್ತಿಯಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸಿದ್ದರಿಂದ ಹಾಗೆ ಮಾಡಬೇಕಾಯಿತು. ಹೀಗಾಗಿ ಅವರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ವಾದಿಸಿದರು.
ದಂಪತಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಅದನ್ನು ತಿರಸ್ಕರಿಸಿದೆ. ಅಲ್ಲದೇ ದಂಪತಿಗೆ ಯಾವುದೇ ರೀತಿಯ ಪ್ರಾಣಾಪಾಯ ಎದುರಾಗಿರಲಿಲ್ಲ. ಅದಾಗ್ಯೂ ಅವರು ದೂರುದಾರರ ಮೇಲೆ ಪೆಪ್ಪರ್ ಸ್ಪ್ರೇ ಮಾಡಿದ್ದಾರೆ. ಪರಿಣಾಮವಾಗಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಕೋರ್ಟ್ ಹೇಳಿದೆ. ಇನ್ನು ಇದೇ ವೇಳೆ 2018ರಲ್ಲಿ ಪ್ರಕರಣವೊಂದರಲ್ಲಿ ಅಮೆರಿಕ ನ್ಯಾಯಾಲಯದ ತೀರ್ಪನ್ನು ಉಲ್ಲೇಖಿಸಿದ ಕೋರ್ಟ್, ಪೆಪ್ಪರ್ ಸ್ಪ್ರೇ ಸಹ ಹಾನಿಕಾರಕ ರಾಸಾಯನಿಕಗಳಿರುವ ಅಪಾಯಕಾರಿ ಆಯುಧ ಎಂಬುದಾಗಿ ಅಮೆರಿಕ ನ್ಯಾಯಾಲಯ ಸ್ಪಷ್ಟಪಡಿಸಿದೆ ಎಂದು ಹೇಳಿದೆ.
ಇದನ್ನೂ ಓದಿ:Palthady Ramakrishna Achar: ತುಳು ಸಾಹಿತಿ, ವಿದ್ವಾಂಸ ಡಾ|ಪಾಲ್ತಾಡಿ ರಾಮಕೃಷ್ಣ ಆಚಾರ್ ವಿಧಿವಶ
ಅಲ್ಲದೆ, ಸಿವಿಲ್ ವ್ಯಾಜ್ಯವೊಂದರ ವಿಚಾರವಾಗಿ ಅರ್ಜಿದಾರರು ಹಾಗೂ ದೂರುದಾರರು ನಡುವೆ ನಡೆದ ಗಲಾಟೆ ಸಂಬಂಧ ಇಬ್ಬರು ದೂರು-ಪ್ರತಿ ದೂರು ದಾಖಲಿಸಿದ್ದಾರೆ. ಅವುಗಳ ತನಿಖೆ ನಡೆಯಬೇಕಿದೆ. ಪ್ರಕರಣ ತನಿಖಾ ಹಂತದಲ್ಲಿದೆ. ಈ ಸಂದರ್ಭದಲ್ಲಿ ಎಫ್‌ಐಆರ್ ರದ್ದುಪಡಿಸಿದರೆ ತನಿಖೆಯನ್ನು ತಡೆದಂತಾಗುತ್ತದೆ. ಆದ್ದರಿಂದ ಪ್ರಕರಣದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ತಿಳಿಸಿದ ನ್ಯಾಯಪೀಠ, ಅರ್ಜಿ ವಜಾಗೊಳಿಸಿದೆ.