ಬೆಂಗಳೂರು: ಚಾಮರಾಜಪೇಟೆ ಮೈದಾನದಲ್ಲಿ ತ್ರಿವರ್ಣ ಧ್ವಜಾರೋಹಣ ಸಂಭ್ರಮದಿಂದ ನಡೆದ ಬಗ್ಗೆ ಕ್ಷೇತ್ರದ ಶಾಸಕ ಜಮೀರ್ ಅಹಮದ್ ಖಾನ್ ಖುಷಿ ವ್ಯಕ್ತಪಡಿಸಿದ್ದಾರೆ. ʻʻಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಾಡಿರೋದು ನನಗೆ ಖುಷಿ ತಂದಿದೆ. ನಾನು ಅಂದುಕೊಂಡಂತೆಯೇ ಆಗಿದೆ. ನಾನು ಎರಡು ತಿಂಗಳ ಹಿಂದೆಯೇ ಸ್ವಾತಂತ್ರ್ಯ ದಿನಾಚರಣೆ ಬಗ್ಗೆ ಹೇಳಿದ್ದೆʼʼ ಎಂದು ಕಾರ್ಯಕ್ರಮದ ಬಳಿಕ ಜಮೀರ್ ಹೇಳಿದರು.
ʻʻಇನ್ನು ಮುಂದೆ ಇಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣ ರಾಜ್ಯೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಈ ಮೂರು ಆಚರಣೆಗಳನ್ನು ಮಾಡುತ್ತೇವೆ. ಮುಂದಿನ ಧಾರ್ಮಿಕ ಹಬ್ಬದ ಬಗ್ಗೆ ಸರ್ಕಾರ ಚಿಂತನೆ ಮಾಡಲಿದೆ. ನಾನು ನಿರ್ಧಾರ ಮಾಡಲಾಗದು. ಈಗ ಈ ಮೈದಾನ ಸರಕಾರದ ಆಸ್ತಿʼʼ ಎಂದ ಜಮೀರ್, ಸಂಭ್ರಮದ ದಿನ ಇದಕ್ಕಿಂತ ಹೆಚ್ಚು ಮಾತನಾಡುವುದು ಬೇಡ ಎಂದರು. ಇಲ್ಲಿವರೆಗೆ ಧ್ವಜಾರೋಹಣ ಮಾಡಿಲ್ಲ ಯಾಕೆ ಎಂದು ಸರಕಾರವನ್ನು ಕೇಳಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಂತಸವಾಗಿದೆ ಎಂದ ಮೋಹನ್
ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ.ಮೋಹನ್ ಅವರು ಸರಕಾರಕ್ಕೆ ಧನ್ಯವಾದ ತಿಳಿಸಿದರು. ಶಾಂತಿಯುತವಾಗಿ ಕಾರ್ಯಕ್ರಮ ನಡೆದಿರುವುದು ಸಂತೋಷ ತಂದಿದೆ. ಇನ್ನು ಮುಂದೆ ಧಾರ್ಮಿಕ ಕಾರ್ಯಕ್ರಮದ ಬಗ್ಗೆಯೂ ಕೂಡ ನೋಡೋಣ. ವರ್ಷಕ್ಕೆ ಮೂರು ಬಾರಿ ಧ್ವಜಾರೋಹಣ ಮಾಡಬೇಕಾಗುತ್ತದೆ. ಹೀಗಾಗಿ ಶಾಶ್ವತ ಸ್ಥಂಭ ನಿಲ್ಲಿಸುವ ಬಗ್ಗೆ ಮಾತುಕತೆ ನಡೆದಿದೆ ಎಂದರು ಮೋಹನ್.
ಚಾಮರಾಜಪೇಟೆ ಮೈದಾನದಲ್ಲಿ ರಾಷ್ಟ್ರೀಯ ಕಾರ್ಯಕ್ರಮಗಳಿಗೆ ಮಾತ್ರ ಅವಕಾಶ, ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗದು ಎಂದು ಶಾಸಕ ಜಮೀರ್ ಖಾನ್ ಹೇಳಿದ್ದು ಇತ್ತೀಚೆಗೆ ಭಾರಿ ವಿವಾದವಾಗಿತ್ತು.
ಇದನ್ನೂ ಓದಿ |ಚಾಮರಾಜಪೇಟೆ ಮೈದಾನದಲ್ಲಿ ತಿರಂಗಾ ಅರಳಿತು, ಇನ್ನು ಗಣೇಶೋತ್ಸವ ಮಾಡಿಯೇ ಸಿದ್ಧ ಎಂದ ಶ್ರೀರಾಮ ಸೇನೆ