ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ನಗರದಲ್ಲಿರುವ ವಿಐಎಸ್‌ಎಲ್ ಕಾರ್ಖಾನೆಯಲ್ಲಿ (VISL Factory) ಉತ್ಪಾದನಾ ಚಟುವಟಿಕೆ ಪುನಾರಂಭಕ್ಕೆ ಸೇಲ್ ಆಡಳಿತ ಮಂಡಳಿ ಅನುಮತಿ ನೀಡಿದೆ. ಆ.10ರಿಂದ ಬಾರ್ ಮಿಲ್ ಕೆಲಸ ಆರಂಭವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ (MP BY Raghavendra) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Shah), ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಉಕ್ಕು ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ನಿರ್ದೇಶನದ ಬಳಿಕ ಸೇಲ್ ಆಡಳಿತ ಮಂಡಳಿ ವಿಐಎಸ್‌ಎಲ್ (VISL) ಕಾರ್ಖಾನೆಯಲ್ಲಿ ಉತ್ಪಾದನಾ ಚುಟವಟಿಕೆ ಪುನಾರಂಭ ಮಾಡಲು ಮುಂದಾಗಿದೆ. ಆ.10ರಿಂದ ಬಾರ್ ಮಿಲ್‌ನಲ್ಲಿ ಉತ್ಪಾದನೆ ಶುರುವಾಗಲಿದೆ. ಮುಂದೆ ಪ್ರಾಥಮಿಕ ಗಿರಣಿ ಪುನರಾರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ವಿಐಎಸ್‌ಎಲ್ ಕಾರ್ಖಾನೆಯನ್ನು ನಂಬಿಕೊಂಡಿರುವ ಉದ್ಯೋಗಿಗಳಿಗೆ, ಭದ್ರಾವತಿಯ ಜನರ ಪಾಲಿಗೆ ಇದು ಮಹತ್ವದ ನಿರ್ಧಾರ ಎಂದುಕೊಂಡಿದ್ದೇನೆ. ಕೇಂದ್ರ ಸರ್ಕಾರ, ಸಂಬಂಧಿಸಿದ ಸಚಿವರ ನಿರಂತರ ಪ್ರಯತ್ನದ ಫಲವಾಗಿ ಸೇಲ್ ಆಡಳಿತ ಮಂಡಳಿ ಪ್ರಮುಖ ನಿರ್ಧಾರ ಕೈಗೊಂಡಿದೆ. ಇದಕ್ಕಾಗಿ ದಣಿವರಿಯದೆ ಕೆಲಸ ಮಾಡಿದ್ದೇವೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ಇದನ್ನೂ ಓದಿ: Karnataka politics : ಕೈ ಹೈಕಮಾಂಡ್‌ಗೆ ಸರ್ಕಾರದ ವರ್ಗಾವಣೆ ದಂಧೆ ರಿಪೋರ್ಟ್ ಕೊಟ್ಟ ಬಿ.ಕೆ. ಹರಿಪ್ರಸಾದ್!
ಬಿ.ವೈ. ರಾಘವೇಂದ್ರ ಪತ್ರದಲ್ಲೇನಿದೆ?
ಕೇಂದ್ರ ಗೃಹ ಸಚಿವರಾದ ಅಮಿತ್ ಶಾ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಉಕ್ಕು ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಸ್ಪಷ್ಟ ನಿರ್ದೇಶನದೊಂದಿಗೆ, SAIL ಆಡಳಿತ ಮಂಡಳಿಯು ಭದ್ರಾವತಿ ವಿಐಎಸ್‌ಎಲ್‌ನಲ್ಲಿ (VISL) ಉತ್ಪಾದನಾ ಚಟುವಟಿಕೆಯನ್ನು ಪುನರಾರಂಭಿಸಲು ಅಂತಿಮವಾಗಿ ಒಪ್ಪಿಕೊಂಡಿರುವುದನ್ನು ತಿಳಿಸಲು ನನಗೆ ಅತ್ಯಂತ ಸಂತೋಷವಾಗುತ್ತಿದೆ.
ಅದರನ್ವಯ ಬಾರ್‌ಮಿಲ್ ಕಾರ್ಯಾಚರಣೆಗಳು ಆಗಸ್ಟ್ 10 ರಿಂದ ಪ್ರಾರಂಭವಾಗಲಿದ್ದು, ಮುಂದಿನ ದಿನಗಳಲ್ಲಿ ಪ್ರಾಥಮಿಕ ಗಿರಣಿ ಪುನರಾರಂಭವಾಗಲಿದೆ. ವಿಐಎಸ್ಎಲ್ ಅನ್ನು ನಂಬಿಕೊಂಡಿರುವ ಉದ್ಯೋಗಿ ಸಮುದಾಯಕ್ಕೆ ಮತ್ತು ಭದ್ರಾವತಿಯ ಜನ ಸಾಮಾನ್ಯರಿಗೆ ಈ ಒಂದು ನಿರ್ಧಾರ ಮಹತ್ವದ ಕ್ಷಣವಾಗಿದೆ ಎಂಬುದಾಗಿ ಭಾವಿಸಿದ್ದೇನೆ. ಕೇಂದ್ರ ಸರ್ಕಾರದ ಸಂಬಂಧಿಸಿದ ಮಂತ್ರಿಗಳೊಂದಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಡೆಸಲಾದ ನಿರಂತರ ಪ್ರಯತ್ನದ ಫಲವಾಗಿ ಇಂತಹ ಒಂದು ಮಹತ್ತರವಾದ ನಿರ್ಣಯವನ್ನು SAIL ಕೈಗೊಳ್ಳಲು ಸಹಕಾರವಾಗಿದ್ದು, ಈ ಮಹತ್ವದ ಮೈಲಿಗಲ್ಲನ್ನು ಪಡೆಯಲು ದಣಿವರಿಯಿಲ್ಲದೆ ಕೆಲಸ ಮಾಡಿದ್ದೇವೆ.
ವಿಐಎಸ್‌ಎಲ್‌ನ ಪುನರುಜೀವನಕ್ಕೆ ಕೇಂದ್ರ ಸರ್ಕಾರ ನೀಡಿದಂತಹ ಭರವಸೆಗಳನ್ನು ಈಡೇರಿಸಿದ ಅವರ ಅಚಲ ಬದ್ಧತೆಗಾಗಿ ಕೇಂದ್ರ ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ವಿಐಎಸ್‌ಎಲ್ ಶೀಘ್ರದಲ್ಲಿಯೇ ಉನ್ನತ ಯಶಸ್ಸು ಮತ್ತು ಸಮೃದ್ಧಿಯ ಹಾದಿಯಲ್ಲಿ ಸಾಗಿ ತನ್ನ ಗತ ವೈಭವವನ್ನು ಮರಳಿ ಪಡೆಯುತ್ತದೆ ಎಂಬ ವಿಶ್ವಾಸವಿದೆ.
ಇದನ್ನೂ ಓದಿ: Karnataka Politics : ದೆಹಲಿ ಸಭೆಗೂ ಮುನ್ನ ರಿಪೋರ್ಟ್ ಕಾರ್ಡ್ ಕೊಟ್ಟ ಪ್ರಿಯಾಂಕ್ ಖರ್ಗೆ!
ಇಂತಹ ಒಂದು ಮಹತ್ತರವಾದ ತೀರ್ಮಾನ ಬರುವಲ್ಲಿ ತಾಳ್ಮೆಯಿಂದ ಸಹಕರಿಸಿದ ವಿ.ಐ.ಎಸ್.ಎಲ್,ನ ಎಲ್ಲ ನೌಕರರರಿಗೆ, ಕಾರ್ಮಿಕ ಸಂಘಟನೆ ಮುಖಂಡರಿಗೆ, ಜನಪ್ರತಿನಿಧಿಗಳಿಗೆ ಧನ್ಯವಾದಗಳನ್ನು ಅರ್ಪಿಸುವುದಾಗಿ ಬಿ.ವೈ. ರಾಘವೇಂದ್ರ ಅವರು ಪತ್ರದಲ್ಲಿ ತಿಳಿಸಿದ್ದಾರೆ.