Site icon Vistara News

PES CONVOCATION | ಯುವ ಪದವೀಧರರಿಗೆ ಯಶಸ್ವಿ ಉದ್ಯಮಿಗಳಾಗಲು ಮಹಾನ್‌ ಅವಕಾಶ ಎಂದ ರಾಜೀವ್‌ ಚಂದ್ರಶೇಖರ್‌

PES Convocation

ಬೆಂಗಳೂರು: ಕೇಂದ್ರ ಸರ್ಕಾರವು ಆಧುನಿಕ ಮೂಲಸೌಕರ್ಯದಲ್ಲಿ 10 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡಿದೆ. ಇದು ಯುವ ಪದವೀಧರರಿಗೆ ಯಶಸ್ವಿ ಉದ್ಯಮಿಗಳಾಗಲು ದೊಡ್ಡ ಅವಕಾಶ ಒದಗಿಸಿದೆ ಎಂದು ಕೇಂದ್ರದ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ರಾಜ್ಯ ಸಚಿವರಾದ ರಾಜೀವ್ ಚಂದ್ರಶೇಖರ್ ಹೇಳಿದರು. ರಾಜ್ಯದ ಪ್ರತಿಷ್ಠಿತ ಪಿಇಎಸ್ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಏಳನೇ ವಾರ್ಷಿಕ ಘಟಿಕೋತ್ಸವದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು.

ʻʻಈಗಿನ ಪದವೀಧರರು ನವಭಾರತದಲ್ಲಿದ್ದಾರೆ. ಕೆಲವು ದಶಕಗಳ ಹಿಂದೆ ಭಾರತವು ನಿಷ್ಕ್ರಿಯ ಪ್ರಜಾಪ್ರಭುತ್ವವಾಗಿತ್ತು. ಆದರೆ ಕೋವಿಡ್ ನಂತರದ ಜಗತ್ತಿನಲ್ಲಿ ಭಾರತವು ಅತ್ಯಂತ ಕ್ರಿಯಾತ್ಮಕ ಪ್ರಜಾಪ್ರಭುತ್ವವಾಗಿದೆ. ಹಳೆಯ ಭಾರತದ 4% ಬೆಳವಣಿಗೆಗೆ ಹೋಲಿಸಿದರೆ ಹೊಸ ಭಾರತದ ಬೆಳವಣಿಗೆಯ ಶೇಕಡಾವಾರು ಶೇಕಡಾ 13.5% ಆಗಿದೆ. ಇದು ಯುವಜನತೆಗೆ ಒಳ್ಳೆಯ ಅವಕಾಶವನ್ನು ಒದಗಿಸಿದೆʼʼ ಎಂದು ಅವರು ಹೇಳಿದರು.

ʻʻಕೋವಿಡ್ ಕಾಲದಲ್ಲಿ ಅತ್ಯಂತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳೇ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಂಕಷ್ಟ ಎದುರಿಸಿದವು. ಆದರೆ ಭಾರತವು ಈ ಸಮಯದಲ್ಲಿ ಅತ್ಯಧಿಕ ಎಫ್‌ಡಿಐ ಸ್ವೀಕರಿಸಿದೆ ಮತ್ತು ಅತಿದೊಡ್ಡ ಯುನಿಕಾರ್ನ್‌ಗಳನ್ನು ಹೊಂದಿದೆ. ಮುಂದುವರೆದ ದೇಶಗಳು ತಮ್ಮ ನಾಗರಿಕರಿಗೆ ಕೆಲವೇ ಕೋಟಿಗಳಲ್ಲಿ ವ್ಯಾಕ್ಸಿನೇಶನ್ ನೀಡಲು ಹೆಣಗುತ್ತಿದ್ದರೆ ಭಾರತವು ಅಸದೃಶವಾದ ಇನ್ನೂರು ಕೋಟಿ ವ್ಯಾಕ್ಸಿನೇಶನ್ ನೀಡಿದೆʼʼ ಎಂದು ರಾಜೀವ್‌ ಚಂದ್ರಶೇಖರ್‌ ಹೇಳಿದರು.

ಸಚಿವ ರಾಜೀವ್‌ ಚಂದ್ರಶೇಖರ್‌ ಅವರಿಗೆ ಪಿಇಎಸ್‌ ವಿವಿ ಚಾನ್ಸೆಲರ್‌ ದೊರೆಸ್ವಾಮಿ ಅವರಿಂದ ಸ್ಮರಣಿಕೆ. ಪ್ರೊ ಚಾನ್ಸೆಲರ್‌ ಪ್ರೊ. ಡಿ.ಜವಾಹರ್‌ ಅವರಿದ್ದರು.

ಯುವಶಕ್ತಿಭವ ಮತ್ತು ಯುವ ದೇವೋಭವ ಎಂದು ಯುವಕರ ಸಾಮರ್ಥ್ಯವನ್ನು ನಂಬಿರುವ ಈಗಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಉತ್ತೇಜನದಿಂದಲೇ  ಇವೆಲ್ಲಾ ನಡೆಯುತ್ತಿವೆ. ಪ್ರಧಾನಮಂತ್ರಿಗಳ ಭೇಟಿಯ ಸಂದರ್ಭದಲ್ಲಿ ಇಂಟೆಲ್ ಮತ್ತು ಮ್ಯಕಿಂಸ್ಜೆ ಸಂಸ್ಥೆಯ ಮುಖ್ಯಸ್ಥರು ಮೋದಿಯವರ ಆಡಳಿತ ವೈಖರಿಯನ್ನು ನೋಡಿ ಮುಂದಿನ ದಶಕಗಳು ಭಾರತದ ಧೀಶಕ್ತಿಗೆ ಮುನ್ನುಡಿ ಯಾಗಲಿವೆ ಎಂದಿದ್ದನ್ನು ರಾಜೀವ್‌ ಚಂದ್ರಶೇಖರ್‌ ಉಲ್ಲೇಖಿಸಿದರು.

ಪಿಇಎಸ್‌ನ ಅಭಯ, ವಿದ್ಯಾರ್ಥಿಗಳ ಪರಿಶ್ರಮದಿಂದ ಯಶಸ್ಸು
ಪಿಇಎಸ್ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ಡಾ.ಎಂ.ಆರ್.ದೊರೆಸ್ವಾಮಿ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ʻʻಪಿಇಎಸ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರುವ ಎಲ್ಲಾ ಪದವೀಧರ ವಿದ್ಯಾರ್ಥಿಗಳು ಅವರ ಸಾಮರ್ಥ್ಯ ಮತ್ತು ಪರಿಶ್ರಮದಿಂದ, ಪಿಇಎಸ್‌ನ ಅಭಯ ಮತ್ತು ಮಾರ್ಗದರ್ಶನದಲ್ಲಿ ಉದ್ಯೋಗ ಗಳಿಸಿದ್ದಾರೆ ಎಂದರು. ಅವಕಾಶಗಳು ಅಪರಿಮಿತವಾಗಿರುವ ಆಧುನಿಕ ಭಾರತದಲ್ಲಿ ಯುವಕರು ನವ ಭಾರತವನ್ನು ನಿರ್ಮಿಸಬಹುದು. ಪಿಇಎಸ್ ನಿಸ್ವಾರ್ಥ ಸೇವೆಯ ಮೌಲ್ಯಗಳನ್ನು ಪೋಷಿಸುತ್ತದೆ. ಎಲ್ಲಾ ಪಿಇಎಸ್ ಪದವೀಧರರು ಮಹಾತ್ಮಾ ಗಾಂಧಿ, ಸ್ವಾಮಿ ವಿವೇಕಾನಂದ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಅವರ ಜೀವನ ಘಟನೆಗಳು ಮತ್ತು ಕೊಡುಗೆಗಳ ಬಗ್ಗೆ ತಿಳಿದಿರುತ್ತಾರೆ. ಅದು ಸಮಾಜಕ್ಕೆ ಮರಳಿ ಕೊಡುಗೆ ನೀಡಲು ಸಹಾಯ ಮಾಡುತ್ತದೆʼʼ ಎಂದು ದೊರೆಸ್ವಾಮಿ ಹೇಳಿದರು.

ಮೂರು ಎಂಗಳನ್ನು ಗೌರವಿಸಿ
ವಿದ್ಯಾರ್ಥಿಗಳು ಹಂಚಿಕೊಳ್ಳುವ ಮತ್ತು ಕಾಳಜಿ ವಹಿಸುವ ಮನೋಭಾವವನ್ನು ಹೊಂದಿರಬೇಕು ಮತ್ತು ಮೂರು ‘ಎಂ’ಗಳು: ಮಾತೆ, ಮಾತೃಭಾಷೆ ಮತ್ತು ಮಾತೃಭೂಮಿಯನ್ನು ಗೌರವಿಸುವುದರ ಮೂಲಕ  ಸಾರ್ಥಕ ಜೀವನವನ್ನು ಹೊಂದಬೇಕೆಂದು ದೊರೆಸ್ವಾಮಿ ಸಲಹೆ ನೀಡಿದರು.

ಪಿಇಎಸ್ ವಿಶ್ವವಿದ್ಯಾಲಯದ ಕುಲಪತಿ ಡಾ.ಜೆ.ಸೂರ್ಯಪ್ರಸಾದ್ ಗಣ್ಯರನ್ನು ಸ್ವಾಗತಿಸಿದರು. ಪಿಇಎಸ್ ವಿಶ್ವವಿದ್ಯಾಲಯದ ಸಮ ಕುಲಾಧಿಪತಿಗಳಾದ ಪ್ರೊ. ಡಿ. ಜವಾಹರ್ ಗೌರವ ಸ್ಕ್ರಾಲ್ ಅನಾವರಣಗೊಳಿಸಿ ಉತ್ತೀರ್ಣರಾದ ಪದವೀಧರರಿಗೆ ಪ್ರಮಾಣ ವಚನ ಬೋಧಿಸಿದರು. ಪಿಇಎಸ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಕೆ.ಎಸ್. ಶ್ರೀಧರ್ ವಂದಿಸಿದರು.

೩೪೯೫ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ನಾಲ್ವರು ಪಿಎಚ್‌ಡಿ ಮತ್ತು 24 ಮಂದಿ ಚಿನ್ನದ ಪದಕ ವಿಜೇತರು ಸೇರಿದಂತೆ 3495 ವಿದ್ಯಾರ್ಥಿಗಳು ತಮ್ಮ ಘಟಿಕೋತ್ಸವ ಪದವಿಯನ್ನು ಪಡೆದರು. ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರು. ಕಾರ್ಯಕ್ರಮದ ನಂತರ, ಮಾನ್ಯ ಕೇಂದ್ರ ಸಚಿವರು PESU 52 ಲ್ಯಾಬ್‌ಗೆ ಭೇಟಿ ನೀಡಿದರು. ಅಲ್ಲಿ PESU ವೆಂಚರ್ ಲ್ಯಾಬ್ಸ್‌ನ (Venture labs) ವಿದ್ಯಾರ್ಥಿಗಳು ತಮ್ಮ ಯೋಜನೆಗಳು ಮತ್ತು ಆವಿಷ್ಕಾರಗಳನ್ನು ಪ್ರದರ್ಶಿಸಿದರು.

Exit mobile version