Site icon Vistara News

Petrol Bomb | ಮಡಿಕೇರಿ ನರಮೇಧ ಪ್ಲ್ಯಾನ್‌ ಆಡಿಯೊ ಪ್ರಕರಣ: ಇಬ್ಬರ ಬಂಧನ, ಹಿಂದಿನ ಕೈಗಳ ಬಗ್ಗೆ ತೀವ್ರ ವಿಚಾರಣೆ

betageri abdulla

ಮಡಿಕೇರಿ: ನಗರದ ೫೦ ಕಡೆಗಳಲ್ಲಿ ಪೆಟ್ರೋಲ್‌ ಬಾಂಬ್‌ ಇಟ್ಟು ದೊಡ್ಡ ಮಟ್ಟದಲ್ಲಿ ನರಮೇಧ ನಡೆಸುವ ಪ್ಲ್ಯಾನ್‌ ಬಗ್ಗೆ ಮೊಬೈಲ್‌ನಲ್ಲಿ ಚರ್ಚೆ ನಡೆಸಿದ ಇಬ್ಬರು ಆರೋಪಿಗಳಾದ ಮಡಿಕೇರಿ ನಗರಸಭಾ ಸದಸ್ಯ ಮುಸ್ತಫಾ ಮತ್ತು ಬೆಟಗೇರಿ ಅಬ್ದುಲ್ಲಾ ಅವರನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ. ೨೦೨೨ರ ಏಪ್ರಿಲ್‌ ೨೫ರಂದು ಈ ಇಬ್ಬುರ ಫೋನ್‌ನಲ್ಲಿ ಮಾತನಾಡಿದ್ದನ್ನು ಶೇಷಪ್ಪ ಬಿ.ಎನ್‌. ಎಂಬವರು ರೆಕಾರ್ಡ್‌ ಮಾಡಿಕೊಂಡು ಪೊಲೀಸರಿಗೆ ಒಪ್ಪಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ.

ಏಪ್ರಿಲ್‌ ೨೫ರ ಮಧ್ಯಾಹ್ನ ೨.೧೫ರ ಸುಮಾರಿಗೆ ಬಹುಕಾಲದ ಗೆಳೆಯರೂ, ಕಾಮಗಾರಿ ಮತ್ತು ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಆತ್ಮೀಯರೂ ಆಗಿರುವ ಶೇಷಪ್ಪ ಬಿ.ಎನ್‌. ಅವರು ಅಬ್ದುಲ್ಲಾ ಅವರಿಗೆ ಕರೆ ಮಾಡಿದ್ದರು. ಆಗ ಅಬ್ದುಲ್ಲಾ ಅವರು ಫೋನ್‌ನಲ್ಲಿ ಒಂದೆರಡು ಬಾರಿ ಹಲೋ ಹಲೋ ಎಂದಿದ್ದರು. ಆದರೆ, ಸರಿಯಾಗಿ ಕನೆಕ್ಟ್‌ ಆಗಿಲ್ಲ ಎಂದು ತಿಳಿದು ಇನ್ನೊಂದು ಫೋನ್‌ನಲ್ಲಿ ಮಾತುಕತೆ ಮುಂದುವರಿಸಿದ್ದರು. ಆದರೆ, ಶೇಷಪ್ಪ ಅವರಿಗೆ ಮತ್ತೊಂದು ಕರೆ ಚೆನ್ನಾಗಿ ಕೇಳಿಸುತ್ತಿತ್ತು. ಅದರಲ್ಲಿ ಮಡಿಕೇರಿ ನಗರಕ್ಕೆ ಬಾಂಬ್‌ ಹಾಕುವ ಯೋಜನೆಯ ಬಗ್ಗೆ ಚರ್ಚೆ ನಡೆದಿತ್ತು.

ಈ ವಿಷಯವನ್ನು ಕೆಲವು ಸಮಯದಿಂದ ಯಾರಲ್ಲಿ ಹೇಳಬೇಕು ಎಂದು ತಿಳಿಯದೆ ಶೇಷಪ್ಪ ಸುಮ್ಮನಿದ್ದರು. ಆದರೂ ಏನಾದರೂ ಅವಘಡ ಸಂಭವಿಸಿಬಿಟ್ಟರೆ ತಾನು ಗೊತ್ತಿದ್ದೂ ಸುಮ್ಮನಿದ್ದಂತಾಗುತ್ತದೆ ಎಂದು ಭಾವಿಸಿ ಇತ್ತೀಚೆಗೆ ಮಡಿಕೇರಿ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಮಡಿಕೇರಿ ಪೊಲೀಸರು ಐಪಿಸಿ 1860 (urs – 153A, 153, 120B, 505(2), 34) ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದು, ಮಡಿಕೇರಿ ನಗರಸಭಾ ಸದಸ್ಯ ಮುಸ್ತಫಾ ಮತ್ತು ಬೆಟ್ಟಗೇರಿ ಅಬ್ದುಲ್ಲಾ‌ ಅವರನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಮಡಿಕೇರಿ ನಗರದ ಮೇಲೆ ಪೆಟ್ರೋಲ್ ಬಾಂಬ್ ಹಾಕುವ ಸಂಚಿನ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಏನು ಹೇಳಿದ್ದಾರೆ ದೂರವಾಣಿ ಸಂಭಾಷಣೆಯಲ್ಲಿ?
ಏಪ್ರಿಲ್ ತಿಂಗಳಿನಲ್ಲಿ ಮಲಯಾಳಂ ಭಾಷೆಯಲ್ಲಿ ಪೆಟ್ರೋಲ್‌ ಬಾಂಬ್‌ ಹಾಕುವ ಬಗ್ಗೆ ಆರೋಪಿಗಳಿಬ್ಬರೂ 3 ನಿಮಿಷದ ಕಾಲ ಮಾತನಾಡಿರುವ ಆಡಿಯೋ ವೈರಲ್‌ ಆಗಿದೆ. ಇವರ ಸಂಭಾಷಣೆಯಲ್ಲಿ ಕೊಡಗಿನ 50ಕ್ಕೂ ಅಧಿಕ ಸ್ಥಳಗಳಲ್ಲಿ ಪೆಟ್ರೋಲ್‌ ಬಾಂಬ್‌ ಹಾಕುವ ಬಗ್ಗೆ ಮಾತನಾಡಿದ್ದಾರೆ.

ಹಿಂದೂಗಳು ಜಾಸ್ತಿ ಸೇರುವ ಜಾಗದಲ್ಲಿ ಪೆಟ್ರೋಲ್ ಬಾಂಬ್ ಹಾಕಬೇಕು. ಹಿಂದು ನಾಯಿಗಳನ್ನು‌ ನಾವು ಸುಮ್ಮನೆ ಬಿಡಬಾರದು, ಪೆಟ್ರೋಲ್ ಬಾಂಬ್ ಹಾಕಿ ಹಿಂದುಗಳನ್ನು ಕೊಲ್ಲಬೇಕು. ಆ ಮೂಲಕ ಇಡೀ ಮಡಿಕೇರಿ ನಗರ ಹೊತ್ತಿ ಉರಿಯುವಂತೆ ಮಾಡಬೇಕು. ನಾವು ಸತ್ತರೂ ಪರವಾಗಿಲ್ಲ ಹಿಂದೂಗಳನ್ನ ಬಿಡಬಾರದು. ಎಷ್ಟೇ ಹಣ ಖರ್ಚಾದರೂ ತೊಂದರೆ ಇಲ್ಲ, ನಾವೆಲ್ಲ ಸೇರಿ ಅದಕ್ಕೆ ಬೇಕಾಗುವ ಹಣ ಹೊಂದಿಸಬೇಕು” ಎಂದು ಮಲಯಾಳಂನಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | PFI Protest | ಕಣ್ಣೂರಿನ ಆರ್​ಎಸ್​ಎಸ್​ ಕಚೇರಿ ಮೇಲೆ ಪೆಟ್ರೋಲ್​ ಬಾಂಬ್​ ದಾಳಿ; ಕಿಟಕಿ ಗಾಜು ಪುಡಿ

Exit mobile version