ಬೆಂಗಳೂರು: ತೈಲ ದರ ಏರಿಕೆ (Petrol Diesel Price Hike) ಖಂಡಿಸಿ ಬಿಜೆಪಿಯಿಂದ ಬೆಂಗಳೂರು ಸೇರಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಬೆಲೆ ಏರಿಕೆ ವಿಚಾರ ಪ್ರಸ್ತಾಪಿಸಿ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಈಗ ಗ್ಯಾರಂಟಿಗಳಿಗಾಗಿ ಬಡ ಜನರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಎಂದು ಕಮಲ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಸುದ್ದಿಗೋಷ್ಠಿ ನಡೆಸಿ, ಬೆಲೆ ಏರಿಕೆ ಸಮರ್ಥನೆ ಮಾಡಿಳ್ಳುವ ಮೂಲಕ ತಿರುಗೇಟು ನೀಡಿದರು.
ಬೆಲೆ ಏರಿಕೆ ಮಾಡಿರುವುದು ಪಿಎಂ ಮೋದಿ, ನಮ್ಮ ಪರಿಹಾರದ ಹಣ ಪಡೆಯಲು ಕೋರ್ಟ್‌ಗೆ ಹೋಗಬೇಕಾಯಿತು. ಆದರೆ, ಕೇಂದ್ರ ಸರ್ಕಾರದ ನಡೆ ಬಗ್ಗೆ ಬಿಜೆಪಿ ನಾಯಕರು ಒಂದೇ ಒಂದು ದಿನ ಮಾತನಾಡಲಿಲ್ಲ, ಇವತ್ತು ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚು ಮಾಡಿದರು ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿ, ಜೆಡಿಎಸ್‌ನವರು ಪ್ರತಿಭಟನೆ ಮಾಡಬೇಕಾಗಿರುವುದು ಕೇಂದ್ರ ಸರ್ಕಾರದ ವಿರುದ್ಧ ಎಂದು ಹೇಳಿದರು.
ಮೋದಿಯವರು ಗುಜರಾತ್ ಸಿಎಂ ಆಗಿದ್ದಾಗ ಕೇಂದ್ರದಲ್ಲಿ ತೈಲ ಬೆಲೆ ಏರಿಕೆಯಾಗಿದೆ ಎಂದು ಹೇಳಿಕೆ ಕೊಡುತ್ತಿದ್ದರು. ನಾನು ಪಿಎಂ ಆದ ಮೇಲೆ ತೈಲ ಬೆಲೆ ಕಡಿಮೆ ಮಾಡುತ್ತೀನಿ ಅಂತ ಹೇಳಿದ್ದರು. ಆದರೆ ಅದರ ವಿರುದ್ಧವಾಗಿ ಮೋದಿ ನಡೆದುಕೊಂಡಿದ್ದಾರೆ. ಮೋದಿ ಪಿಎಂ ಆದಾಗ ಪೆಟ್ರೋಲ್ ಬೆಲೆ 72.26 ರೂ ಇತ್ತು. ಅದು ಜೂನ್ 24ರಲ್ಲಿ 104 ಆಗಿತ್ತು ಈಗ ಕಡಿಮೆ ಆಗಿದೆ. ಡೀಸೆಲ್ ಬೆಲೆ 57.28 ಇತ್ತು, ಅದನ್ನು 98 ರೂಪಾಯಿ ಮಾಡಿದರು. ಯಾರು ಹೆಚ್ಚು ಮಾಡಿದ್ದು? ಮನಮೋಹನ್ ಸಿಂಗ್ ಕಾಲದಲ್ಲಿ ಕಚ್ಚಾ ತೈಲ ಬೆಲೆ ಬ್ಯಾರೆಲ್ 113 ಡಾಲರ್ ಇತ್ತು, ಈಗ ಎಷ್ಟು ಇದೆ? 82 ಡಾಲರ್ ಇದೆ. ಹೀಗಾಗಿ ಮೋದಿಯೇ ದರ ಕಡಿತ ಮಾಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ | Petrol Diesel Price: ನೆರೆ ರಾಜ್ಯಗಳಿಗಿಂತ ಕರ್ನಾಟಕದಲ್ಲೇ ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆ: ಸಿಎಂ ಸಮರ್ಥನೆ
ಗ್ಯಾಸ್ ಬೆಲೆ 805.50 ಇದೆ, ಇದನ್ನ ಹೆಚ್ಚು ಮಾಡಿದ್ದು ಯಾರು? ಕಚ್ಚಾ ತೈಲ ಬೆಲೆ ಕಡಿಮೆ ಇದ್ದರೂ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಿದೆ. ಯಾರ ವಿರುದ್ಧ ಪ್ರತಿಭಟನೆ ಮಾಡಬೇಕು. ಕೇಂದ್ರ GST ಆದ ಮೇಲೆ ರಾಜ್ಯ ಸರ್ಕಾರ ತೆರಿಗೆ ಹೆಚ್ಚು ಮಾಡುವ ಸ್ವಾತಂತ್ಯ ಕಡಿಮೆ ಆಗಿದೆ. ಮದ್ಯ, ಪೆಟ್ರೋಲ್, ಡೀಸೆಲ್, ಸೇರಿದಂತೆ ಕೆಲವು ಮಾತ್ರ ಹೆಚ್ಚು ಮಾಡಬಹುದು. GST ಅವರೇ ಕಲೆಕ್ಟ್ ಮಾಡುತ್ತಾರೆ. ನಮಗೆ ಅದರಲ್ಲಿ ರಾಜ್ಯದ ಪಾಲು ಕೂಡ ಕಡಿಮೆ ಕೊಡುತ್ತಾರೆ. 14, 15ನೇ ಹಣಕಾಸು ಆಯೋಗದಲ್ಲಿ ಒಂದು ಲಕ್ಷ 87 ಸಾವಿರ ಕೋಟಿ ನಷ್ಟ ಆಗಿದೆ. ಕೇಂದ್ರದಿಂದ ಬರುವ ಹಣ ಕಡಿಮೆ ಆಯ್ತು. ಒಂದು ದಿನ ಬಿಜೆಪಿಯವರು ಸಂಸತ್ತ್‌ನಲ್ಲಿ ಮಾತನಾಡಲಿಲ್ಲ. ವಿಶೇಷ ಅನುದಾನ ಕೊಡ್ತೀನಿ ಅಂದ್ರು ಕೊಡಲಿಲ್ಲ ಎಂದು ಕಿಡಿಕಾರಿದರು.
ಸಂಪನ್ಮೂಲ ಕ್ರೋಡೀಕರಣ ಎಂದರೆ ಏನು ಹೇಳಿ ಎಂದು ಮಾಧ್ಯಮದವರನ್ನು ಪ್ರಶ್ನಿಸಿದ ಅವರು, ಬೆಲೆ ಹೆಚ್ಚಳ ಮಾಡಿದಾಗ ಕೇಂದ್ರದ ವಿರುದ್ಧ ಎಷ್ಟು ಬಾರಿ ಸುದ್ದಿ ಹಾಕಿದ್ದೀರಿ? ಕಚ್ಚಾ ತೈಲ ಬೆಲೆ ಕಡಿಮೆಯಾದರೂ ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡದ ಬಗ್ಗೆ ಯಾರು ಕೂಡ ಬರೆಯಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಬಡವರು, ಅಭಿವೃದ್ಧಿ ಬಗ್ಗೆ ಕಾಳಜಿ ಬಿಜೆಪಿಗೆ ಇಲ್ಲ. ಮೋದಿ ಬೆಲೆ ಹೆಚ್ಚು ಮಾಡಿದರೂ ಬಿಜೆಪಿ ನಾಯಕರು ಮಾತನಾಡಲಿಲ್ಲ. ಅವರಿಗೆ ಈಗ ಕೇಳಲು ಏನು ಅಧಿಕಾರ ಇದೆ. ಲೋಕಸಭಾ ಚುನಾವಣೆಯಲ್ಲಿ ಶೇ.45ಗಿಂತ ವೋಟ್ ಜಾಸ್ತಿ ಆಗಿದೆ. ಒಂದು ಸೀಟ್‌ನಿಂದ 9ಕ್ಕೆ ಬಂದಿದ್ದೇವೆ. ಅವರು 25ರಿಂದ 19ಕ್ಕೆ ಬಂದಿದ್ದಾರೆ ಅವರಾ? ನಾವಾ ಸೋತಿದ್ದು. ವೋಟ್ ಪರ್ಸೆಂಟೇಜ್ ಶೇ. 13 ಜಾಸ್ತಿ ಆಗಿದೆ ನಮಗೆ, ಕೇಂದ್ರದಲ್ಲಿ ಸೀಟ್ ಕಡಿಮೆ ಆಗಿದೆ ಯಾರು ಸೋತಿದ್ದು ಎಂದು ಪ್ರಶ್ನಿಸಿದರು.
ಯಾರು ಕೂಡ ಅಭಿವೃದ್ಧಿಗೆ ಹಣ ಕೊಟ್ಟಿಲ್ಲ ಅಂತ ಹೇಳಿಲ್ಲ. ವೋಟ್‌ಗಾಗಿ ಗ್ಯಾರಂಟಿಗಳನ್ನು ಮಾಡಿಲ್ಲ, ಬಡವರಿಗೆ ಅರ್ಥಿಕ ಶಕ್ತಿ ಕೊಡಲು ಜಾರಿ ಮಾಡಿದ್ದೇವೆ. ಇದಕ್ಕೂ ಚುನಾವಣೆಗೂ ಸಂಬಂಧವಿಲ್ಲ. ನಾವು ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸುತ್ತೇವೆ ಎಂದು ಮತ್ತೊಮ್ಮೆ ಸ್ಪಷ್ಟನೆ ನೀಡಿದರು.
ಇದನ್ನೂ ಓದಿ | Petrol Diesel Price Hike: ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ವ್ಯಾಪಕ ಪ್ರತಿಭಟನೆ; ಎತ್ತಿನಗಾಡಿ, ಹೆಣ ಮೆರವಣಿಗೆ
ಸದ್ಯಕ್ಕೆ ಬಸ್ ಟಿಕೆಟ್ ದರ ಹೆಚ್ಚಳ ಮಾಡಲ್ಲ
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನಂತರ ಮುಂದೆ ಮತ್ತೆ ಯಾವುದು ಏರಿಕೆ ಮಾಡುತ್ತಾರೋ ಎಂಬ ಅತಂಕ ಜನರಲ್ಲಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಜನರಿಗೆ ತೊಂದರೆ ಆಗುವ ರೀತಿ ಯಾವುದೇ ತೆರಿಗೆ ಹೆಚ್ಚಳ ಮಾಡಲ್ಲ. ಟಿಕೆಟ್ ದರ ಏರಿಕೆಯಾಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿ, ಕೊನೇ ಬಾರಿ ಯಾವಾಗ ಟಿಕೆಟ್ ದರ ಏರಿಕೆಯಾಗಿದೆ ಎಂಬುವುದು ಗೊತ್ತಾ? ಈಗ ಸದ್ಯಕ್ಕೆ ಬಸ್ ಟಿಕೆಟ್ ದರ ಹೆಚ್ಚಳ ಮಾಡಲ್ಲ. ನಾನು ಇನ್ನೂ ಇಲಾಖೆಯ ಜೊತೆ ಚರ್ಚೆ ಮಾಡಬೇಕು ಎನ್ನುವ ಮೂಲಕ ಪರೋಕ್ಷವಾಗಿ ಮುಂದೆ ಟಿಕೆಟ್ ದರ ಹೆಚ್ಚಳದ ಸುಳುವು ನೀಡಿದರು. ಆದರೆ ಸದ್ಯಕ್ಕೆ ಯಾವುದೇ ಟಿಕೆಟ್ ದರ ಹೆಚ್ಚಳ ಮಾಡಲ್ಲ ಎಂದಿದ್ದಾರೆ.