Site icon Vistara News

Petrol Diesel Price: ಪೆಟ್ರೋಲ್ ದರ ಹೆಚ್ಚಳ ಆದೇಶ‌ ವಾಪಸ್ ಪಡೆಯದಿದ್ದರೆ ಉಗ್ರ ಪ್ರತಿಭಟನೆ: ವಿಜಯೇಂದ್ರ ಎಚ್ಚರಿಕೆ

Petrol Diesel Price

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಿರೀಕ್ಷಿತ ಸ್ಥಾನಗಳು ಬಾರದ ಹಿನ್ನೆಲೆಯಲ್ಲಿ ಆ ಸಿಟ್ಟನ್ನು ಜನರ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ. ವಿದ್ಯುತ್ ದರ ಹೆಚ್ಚಳ,‌ ಸ್ಟ್ಯಾಂಪ್ ಡ್ಯೂಟಿ‌ ಹೆಚ್ಚಿಸಿದ್ದರು. ಇದೀಗ ಈಗ ಪೆಟ್ರೋ‌ಲ್, ಡೀಸೆಲ್‌ ದರ ಲೀಟರ್‌ಗೆ 3 ರೂ‌. ಹೆಚ್ಚಳ (Petrol Diesel Price) ಮಾಡಿದ್ದಾರೆ. ಈ ಮೂಲಕ ರಾಜ್ಯದ ಜನರಿಗೆ ಬರೆ‌ ಹಾಕಲು ಹೊರಟಿದ್ದಾರೆ. ಇದನ್ನು ಖಂಡಿಸಿ ಮುಂದಿನ ಸೋಮವಾರ ಪ್ರತಿಭಟನೆ ಮಾಡುತ್ತೇವೆ, ಅಷ್ಟರೊಳಗೆ ಎಚ್ಚೆತ್ತು ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಆದೇಶ‌ ವಾಪಸ್ ಪಡೆಯಬೇಕು ಎಂದು ರಾಜ್ಯ ಸರ್ಕಾರವನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಆಗ್ರಹಿಸಿದ್ದಾರೆ.

ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ‌ದ ಬಗ್ಗೆ ನಗರದಲ್ಲಿ ಪ್ರತಿಕ್ರಿಯಿಸಿ, ಈ ಸರ್ಕಾರದಲ್ಲಿ ಅಧಿಕಾರಿಗಳಿಗೆ ಸಂಬಳ ಕೊಡಲೂ ಆಗದಂತಹ ಪರಿಸ್ಥಿತಿ ಇದೆ. ಹೀಗಾಗಿ ‌ತೆರಿಗೆ‌ ಹೆಚ್ಚಳ‌ ಮಾಡಿದ್ದಾರೆ. ಇದನ್ನು ಒಪ್ಪಿಕೊಳ್ಳಲು ಸಿಎಂ ರೆಡಿ ಇಲ್ಲ, ಅವರು‌ ಭಂಡತನ ಬಿಡಬೇಕು. ಮುಂದಿನ ಸೋಮವಾರ ಪ್ರತಿಭಟನೆ ಮಾಡುತ್ತೇವೆ. ಅಷ್ಟರೊಳಗೆ ಎಚ್ಚೆತ್ತುಕೊಂಡು ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಆದೇಶ‌ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ | Petrol Diesel Price: ಜನರಿಗೆ ಸಿದ್ದರಾಮಯ್ಯ ಸರ್ಕಾರ ಶಾಕ್; ಪೆಟ್ರೋಲ್‌, ಡೀಸೆಲ್‌ ಬೆಲೆ 3 ರೂ. ಏರಿಕೆ

ವಾಲ್ಮೀಕಿ ನಿಗಮ ಹಗರಣ ಖಂಡಿಸಿ ಜೂ.18ಕ್ಕೆ ಜಿಲ್ಲಾಧಿಕಾರಿ ಕಚೇರಿಗಳಿಗೆ ಬಿಜೆಪಿ ಮುತ್ತಿಗೆ

ಬೆಳಗ್ಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ವಾಲ್ಮೀಕಿ ಸಮುದಾಯದ ನಾಯಕರು ಕಚೇರಿಗೆ ಬಂದಿದ್ದರು. ವಾಲ್ಮೀಕಿ ನಿಗಮ ಹಗರಣ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಹೇಳಿದ್ದಾರೆ. ಏಕೆಂದರೆ ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಇಟ್ಟಿದ್ದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಪ್ರಕರಣವನ್ನ ಪಕ್ಷ ಇಲ್ಲಿಗೆ ಕೈ ಬಿಡಲ್ಲ, ಪಕ್ಷದಿಂದ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಲಿದ್ದೇವೆ. ಇದೇ 18 ರಂದು ರಾಜ್ಯದ ಜಿಲ್ಲಾಧಿಕಾರಿ ಕಚೇರಿಗಳಿಗೆ ಬಿಜೆಪಿ ಮುತ್ತಿಗೆ ಹಾಕಲಿದೆ ಎಂದು ಬಿ.ವೈ. ವಿಜಯೇಂದ್ರ ತಿಳಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕೌಂಟ್‌ಗೆ ವಾಪಸ್ ಬಂದಿದೆ ಎನ್ನುತ್ತಾರೆ. ಅದು ಮುಖ್ಯವಲ್ಲ, ಪ್ರಕರಣವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬೇಕು. ಸಮುದಾಯಕ್ಕೆ ಆದ‌ ಅನ್ಯಾಯ ಸರಿಪಡಿಸಬೇಕು. ಹಣಕಾಸು‌ ಇಲಾಖೆಗೆ‌ ಮಾಹಿತಿ‌ ಇಲ್ಲದೇ ಇಷ್ಟು ದೊಡ್ಡ‌ ಹಗರಣ ಆಗಲು ಸಾಧ್ಯವಿಲ್ಲ. ಇದನ್ನ ರಾಜ್ಯಸರ್ಕಾರ ಮುಚ್ಚಿ ಹಾಕಲು ಹೊರಟಿದೆ. 28 ರಂದು‌ ಎಲ್ಲಾ ಜಿಲ್ಲಾ‌ಧಿಕಾರಿ ಕಚೇರಿಗಳಿಗೂ ಮುತ್ತಿಗೆ‌ ಹಾಕಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ | Actor Darshan: ಕೃಷಿ ಇಲಾಖೆ ರಾಯಭಾರಿ ಹುದ್ದೆಯಿಂದ ಕೊಲೆ ಆರೋಪಿ ದರ್ಶನ್‌ ವಜಾ!

ಲೋಕಸಭಾ ಚುನಾವಣೆಯ‌ಲ್ಲಿ ಹಿನ್ನಡೆ‌ ಪರಿಣಾಮ ನಮ್ಮ ಕಾರ್ಯಕರ್ತರಿಗೆ‌ ಕಿರಿಕುಳ ನೀಡಿ, ಎಫ್‌ಐಆರ್‌ ಹಾಕುತ್ತಿದ್ದಾರೆ. ಹೀಗಾಗಿ ಕಾನೂನು‌ ಪ್ರಕೋಷ್ಠ‌ಗಳನ್ನು ಹೆಚ್ಚಿಸುತ್ತಿದ್ದೇವೆ. ಈ‌ ಬಂಡ ಕಾಂಗ್ರೆಸ್ ಸರ್ಕಾರವನ್ನು ಧೈರ್ಯವಾಗಿ ಎದುರಿಸುತ್ತೇವೆ. ಪ್ರತಿ‌ ಮಂಡಲ ಮಟ್ಟದಲ್ಲೂ ಕಾನೂನು‌ ಪ್ರಕೋಷ್ಠ‌ ಮಾಡುತ್ತೇವೆ ಎಂದು ಹೇಳಿದರು.

Exit mobile version