ವಿಜಯಪುರ: ಇಲ್ಲಿನ ಮುದ್ದೇಬಿಹಾಳ ಪಟ್ಟಣದಲ್ಲಿ ಅಮಾನವೀಯ ಘಟನೆಯೊಂದು (Inhuman incident) ನಡೆದಿದೆ. ವಾಹನಗಳಿಗೆ ಡೀಸೆಲ್ ಹಾಕಿಸಿದ ವ್ಯಕ್ತಿಯೊಬ್ಬ ಬಾಕಿ ಹಣ (Recovery of money) ಕೊಡಲಿಲ್ಲ ಎಂದು ಬಂಕ್ ಮಾಲೀಕ ಅರೆಬೆತ್ತಲೆಯ ಶಿಕ್ಷೆ (Naked punishment) ನೀಡಿದ್ದಾನೆ.
ಭರತ ಭೋಸಲೆ ಎಂಬುವವರಿಗೆ ಭೋಸಲೆ ಪೆಟ್ರೋಲ್ ಡೀಸೆಲ್ ಬಂಕ್‌ನಲ್ಲಿ ಈ ಘಟನೆ ನಡೆದಿದೆ. ಮೌನೇಶ್ ಪತ್ತಾರ ಎಂಬಾತನನ್ನು ಅರೆಬೆತ್ತಲೆಗೊಳಿಸಿ ಬಂಕ್‌ನವರು ಕೂರಿಸಿದ್ದಾರೆ. ಮೌನೇಶ್ ತಮಿಳುನಾಡು ಮೂಲದ ಶಿವಶಕ್ತಿ ಬೋರ್ ವೆಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. ಶಿವಶಕ್ತಿ ಬೋರ್ ವೆಲ್ಸ್ ವಾಹನಗಳಿಗೆ ಬೋಸಲೆ ಅವರ ಬಂಕ್‌ನಲ್ಲಿ ಡೀಸೆಲ್ ಹಾಕಿಸಿದ್ದಾರೆ. 10 ರಿಂದ 15 ಲಕ್ಷ ರೂ. ಬಾಕಿ ಹಣ ಉಳಿಸಿಕೊಂಡಿದ್ದು, ಕೂಡಲೇ ಪೂರ್ತಿ ಹಣ ನೀಡುವಂತೆ ಭೋಸಲೆ ಬಂಕ್ ಮಾಲೀಕರು ಪಟ್ಟುಹಿಡಿದಿದ್ದಾರೆ.
ಕಳೆದ 12 ದಿನಗಳಿಂದ ಮೌನೇಶ್ ಪತ್ತಾರನನ್ನು ಅರೆಬೆತ್ತಲೆಗೊಳಿಸಿ ಬಂಕ್‌ನಲ್ಲಿ ಕೂಡಿ ಹಾಕಿದ್ದಾರೆ ಎಂಬ ಆರೋಪ ಇದೆ. ಪೆಟ್ರೋಲ್ ಬಂಕ್ ಮಾಲೀಕರು ಹಲ್ಲೆ ಮಾಡಿ ಅರೆಬೆತ್ತಲೆಗೊಳಿಸಿ ಕೂರಿಸಿದ್ದಾರೆಂದು ಮೌನೇಶ್ ಕುಟುಂಬಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿ: Snake Rescue: ಹೆಲ್ಮೆಟ್, ಶೂ, ಮಂಚದ ಒಳಗೂ ಹಾವು; ಮೈಸೂರೀಗ ಹಾವಿನ ನಗರಿ!
ಮೌನೇಶ್ ಬಿಡುಗಡೆಗಾಗಿ ಕಳೆದ ಮೂರು ದಿನಗಳಿಂದ ಭೋಸಲೆ ಬಂಕ್‌ನಲ್ಲೇ ಪತ್ನಿ ರಂಗಮ್ಮ ಮತ್ತು ಮಕ್ಕಳು ಜತೆಗೆ ಠೀಕಾಣಿ ಹಾಕಿದ್ದಾರೆ. ಮೌನೇಶ ಕುಟುಂಬಸ್ಥರನ್ನು ಪೊಲೀಸ್ ಠಾಣೆಗೂ ತೆರಳಲು ಬಿಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.
ತನಿಖೆಗೆ ಆದೇಶಿಸಿದ ಸಚಿವ ಎಂ ಬಿ ಪಾಟೀಲ
ಮುದ್ದೇಬಿಹಾಳ ಪಟ್ಟಣದಲ್ಲಿ ವ್ಯಕ್ತಿಯೊಬ್ಬನನ್ನು ಅರೆಬೆತ್ತಲೆ ಮಾಡಿ ಕೂಡಿಸಿದ ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಡಿಸಿ ಮತ್ತು ಎಸ್‌ಪಿಗೆ ಸೂಚನೆ ನೀಡಿದ್ದಾರೆ.
ಹುಬ್ಬಳ್ಳಿ ಮತ್ತು ಧಾರವಾಡ ಪ್ರವಾಸದಲ್ಲಿರುವ ಸಚಿವರು ಈ ಘಟನೆ ಕುರಿತು ಮಾಧ್ಯಮಗಳಿಂದ ಮಾಹಿತಿ ತಿಳಿದ ತಕ್ಷಣ ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮತ್ತು ಎಸ್‌ಪಿ ಎಚ್. ಡಿ. ಆನಂದಕುಮಾರ ಅವರ ಜತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಅಲ್ಲದೇ ಈ ಪ್ರಕರಣದ ಸತ್ಯಾಸತ್ಯತೆ ಕುರಿತು ಕೂಲಂಕಷ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಶಿಕ್ಷೆಯಿಂದ ಬಿಡುಗಡೆಗೊಳಿಸಿದ ತಹಸೀಲ್ದಾರ್
ಅರೆಬೆತ್ತಲೆ ಶಿಕ್ಷೆ ವರದಿ ಪ್ರಸಾರವಾದ ಹಿನ್ನೆಲೆ ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಭೋಸಲೆ ಬಂಕ್‌ಗೆ ಭೇಟಿ ನೀಡಿದರು. ತಹಸೀಲ್ದಾರ್ ಟಿ ರೇಖಾ ಹಾಗೂ ಮುದ್ದೇಬಿಹಾಳ ಪೊಲೀಸ್ ಠಾಣೆಯ ಪಿಎಸ್‌ಐ ಆರೀಫ್ ಮುಶಾಪುರೆ ಭೇಟಿ ನೀಡಿ, ಸಿಬ್ಬಂದಿ ವಿಚಾರಣೆ ನಡೆಸಿದರು. ಅರೆಬೆತ್ತಲೆಗೊಳಿಸಿ ಕೂಡಿಟ್ಟಿದ್ದ ಮೌನೇಶ ಪತ್ತಾರನನ್ನು ರಕ್ಷಣೆ ಮಾಡಿದರು.
ಪತಿ ರಕ್ಷಣೆ ಮಾಡಿ ಎಂದು ಕಾಲಿಗೆ ಬಿದ್ದ ಪತ್ನಿ
ತನ್ನ ಪತಿಯನ್ನು ರಕ್ಷಣೆ ಮಾಡಿ ನ್ಯಾಯ ಕೊಡಿಸಿ ಎಂದು ಅಧಿಕಾರಿಗಳ ಕಾಲಿಗೆ ರಂಗಮ್ಮ ಎರಗಿದರು. ಬಳಿಕ ಆಕೆಗೆ ಸಮಾಧಾನ ಮಾಡಿ ಮೌನೇಶನನ್ನು ರಕ್ಷಣೆ ಮಾಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಸದ್ಯ ಘಟನೆ ಕುರಿತು ದೂರು ನೀಡಲು ಪೊಲೀಸ್ ಠಾಣೆಗೆ ಮೌನೇಶ ಪತ್ನಿ ರಂಗಮ್ಮ ಹಾಗೂ ಮಕ್ಕಳು ತೆರಳಿದ್ದಾರೆ. ಶಿವಶಕ್ತಿ ಬೋರ್ ವೆಲ್ಸ್‌ನ ಉಸ್ತುವಾರಿಯಾಗಿ ಮೌನೇಶ್ ಕೆಲಸ ಮಾಡುತ್ತಿದ್ದು, ಶಿವಶಕ್ತಿ ಬೋರ್ ವೆಲ್ಸ್‌ನವರು ಹಣ ನೀಡಿಲ್ಲ. ಹೀಗಾಗಿ ಬಾಕಿ ಹಣ ನೀಡುವಂತೆ ಒತ್ತಾಯಿಸಿ ಮೌನೇಶನನ್ನು ಅರೆಬೆತ್ತಲೆ ಮಾಡಿ ಬಂಕ್‌ನಲ್ಲಿ 12 ದಿನಗಳು ಕೂಡಿಟ್ಟಿದ್ದರು ಎನ್ನಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ