ಬೆಂಗಳೂರು: ಹೇಗಾದರೂ ಮಾಡಿ ರಾಜಕೀಯ ಪ್ರವೇಶ ಪಡೆಯಲೇಬೇಕು (Criminal politics) ಎಂದು ಪಣ ತೊಟ್ಟಂತಿರುವ ರೌಡಿ ಸೈಲೆಂಟ್ ಸುನಿಲ್, ಈ ನಿಟ್ಟಿನಲ್ಲಿ ಹಲವು ರಾಜಕಾರಣಿಗಳ ಜತೆಗೆ ಸ್ನೇಹ ಸಂಬಂಧ ಬೆಳೆಸಿರುವುದು ಬೆಳಕಿಗೆ ಬಂದಿದೆ.
ಈಗಾಗಲೇ ಚಾಮರಾಜ ಪೇಟೆಯಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡುವ ಮೂಲಕ ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್ ಮತ್ತು ಶಾಸಕ ಉದಯ ಗರುಡಾಚಾರ್ ಅವರ ಜತೆ ವೇದಿಕೆ ಹಂಚಿಕೊಂಡು ಸುದ್ದಿಯಾದ ಸುನಿಲ್ ಈಗ ಬೇರೆ ನಾಯಕರ ಜತೆಗೂ ಸಂಬಂಧ ಹೊಂದಿರುವುದು ಕಂಡುಬಂದಿದೆ.
ಸೈಲೆಂಟ್ ಸುನಿಲ್‌ಗೆ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರ ಜತೆಗೆ ಸ್ನೇಹವಿರುವುದನ್ನು ಪ್ರತಿಪಾದಿಸುವ ಚಿತ್ರಗಳು ವೈರಲ್ ಆಗುತ್ತಿವೆ. ಸೈಲೆಂಟ್ ಸುನಿಲ್ ಜತೆ ಬೇರೆ ರೌಡಿಗಳಾದ ಸತೀಶ್ ಅಲಿಯಾಸ್ ಬುಲ್ಲೆಟ್ ಸತ್ತಿ ಮತ್ತು ಕಾಂತ ಕೂಡಾ ಇದ್ದಾರೆ.
ರೌಡಿ ಸತೀಶ್ ಅಲಿಯಾಸ್ ಬುಲ್ಲೆಟ್ ಸತ್ತಿ ವಿಶ್ವನಾಥ್ ಅವರ ಹೆಗಲ ಮೇಲೆ ಕೈ ಹಾಕಿರುವ ಚಿತ್ರವೂ ಈಗ ಸದ್ದು ಮಾಡಿದೆ. ಜತೆಗೆ ಎಲ್ಲರೂ ಜತೆ ಜತೆಯಾಗಿ ಕುಳಿತು ಊಟ ಮಾಡುತ್ತಾ ಆತ್ಮೀಯತೆ ತೋರುತ್ತಿದ್ದಾರೆ.
ಸೈಲೆಂಟ್ ಸುನಿಲ ಎಲ್ಲರ ವಿಶ್ವಾಸ ಗಳಿಸಿ ರಾಜಕಾರಣಕ್ಕೆ ಸೈಲೆಂಟ್ ಎಂಟ್ರಿ ಪಡೆಯುವ ಪ್ರಯತ್ನ ಮಾಡುತ್ತಿದ್ದಾನೆಯೇ ಎಂಬ ಪ್ರಶ್ನೆ ಮೂಡಿದೆ. ಆತ ಬೆಂಗಳೂರಿನ ಬೆಂಗಳೂರಿನ ಹಲವು ಕ್ಷೇತ್ರಗಳಿಗೆ ಸ್ಕೆಚ್ ಹಾಕಿರುವ ಸಾಧ್ಯತೆ ಇದೆ. ಎಲ್ಲೇ ಬಿಜೆಪಿ ಟಿಕೆಟ್ ಕೊಟ್ರೂ ನಿಲ್ಲಲು ರೆಡಿ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾನೆ ಎನ್ನಲಾಗಿದೆ. ಅದರೆ, ಈ ವಿಷಯ ಇಷ್ಟೊಂದು ರಗಳೆ ಆಗಿರುವುದರಿಂದ ಈ ಬಾರಿ ಯಾವುದೇ ಕಾರಣಕ್ಕೂ ಟಿಕೆಟ್ ಸಿಗುವ ಸಾಧ್ಯತೆಗಳಿಲ್ಲ ಎನ್ನಲಾಗಿದೆ.
ರವಿಕುಮಾರ್ ಆಕ್ರೋಶ
ಈ ನಡುವೆ ಬಿಜೆಪಿ ಮೇಲೆ ರೌಡಿ ರಾಜಕಾರಣದ ಆರೋಪ ಮಾಡುತ್ತಿರುವುದರ ವಿರುದ್ಧ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ʻʻಡಿಕೆ ಶಿವಕುಮಾರ್ ಅವರನ್ನು ಕೊತ್ವಾಲ್ ಶಿಷ್ಯ ಅಂತ ಯಾಕೆ ಕರೀತಾರೆ? ಇದಕ್ಕೆ ಕಾಂಗ್ರೆಸ್‌ನವರು ಉತ್ತರ ಕೊಡಬೇಕುʼʼ ಎಂದು ಆಗ್ರಹಿಸಿದರು.
ʻʻಹರಿಪ್ರಸಾದ್ ಹಿನ್ನೆಲೆ ಏನು? ನಳಪಾಡ್ ಬಗ್ಗೆ ಇರುವ ಇಮೇಜ್ ಏನು? ನಳಪಾಡ್ ರನ್ನು ಪಕ್ಷದಿಂದ ಕಿತ್ಹಾಕಲ್ವಾ? ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಮ್ಮ ಶಾಸಕ ಎಸ್ ಆರ್ ವಿಶ್ವನಾಥ್ ಗೆ ಸುಪಾರಿ ಕೊಡ್ತೀನಿ ಅಂತ ಹೇಳಿದಾರಲ್ವಾ? ಅಂಥವರೆಲ್ಲ ಕಾಂಗ್ರೆಸ್ ನಲ್ಲಿ ಯಾಕಿದಾರೆ? ಅವರೆಲ್ಲ ರೌಡಿಗಳಲ್ವಾ?ʼʼ ಎಂದು ಪ್ರಶ್ನಿಸಿದ ರವಿಕುಮಾರ್, ಕಾಂಗ್ರೆಸ್ ಪಕ್ಷ ಪಾಕಿಸ್ತಾನದಲ್ಲಿರೋಕ್ಕೆ ಲಾಯಕ್ ಆದ ಪಕ್ಷ ಎಂದರು.
ಇದನ್ನೂ ಓದಿ | Criminal politics | ರೌಡಿ ಮಾರ್ಕೆಟ್ ವೇಡಿ, ಒಂಟೆ ರೋಹಿತ್ ಜತೆ ಸಚಿವ ಅಶ್ವತ್ಥನಾರಾಯಣ: ಫೋಟೊ ವೈರಲ್