Site icon Vistara News

Physical Abuse: ಚಾಕೊಲೇಟ್‌ ಆಮಿಷ ಒಡ್ಡಿ 9ರ ಬಾಲೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 78ರ ವೃದ್ಧ!

physical abuse

physical abuse

ಶಿವಮೊಗ್ಗ: ದಿನೇದಿನೆ ಲೈಂಗಿಕ ದೌರ್ಜನ್ಯದಂತಹ (Physical Abuse) ಪ್ರಕರಣಗಳು ಹೆಚ್ಚಾಗುತ್ತಿದೆ. ಯಾವುದೇ ವಯಸ್ಸಿನ ಮಿತಿಯಿಲ್ಲದೇ ಕಾಮುಕರ ಕೆಂಗಣ್ಣಿಗೆ ಹೆಣ್ಮಕ್ಕಳು ಬಲಿಯಾಗುತ್ತಿದ್ದಾರೆ. ಸದ್ಯ ಶಿವಮೊಗ್ಗದಲ್ಲಿ ಬಾಲಕಿ ಮೇಲೆ 78ರ ವೃದ್ಧನೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕಿಗೆ ಚಾಕೊಲೇಟ್‌ ಕೊಡಿಸುವ ಆಮಿಷ ಒಡ್ಡಿ ಲೈಂಗಿಕ ದೌರ್ಜನ್ಯ ನಡೆಸಿದ ಹೀನಾಯ ಘಟನೆಯೊಂದು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಹೊಳೆಹೊನ್ನೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿಯು ಚಾಕೊಲೇಟ್‌ ಆಸೆ ತೋರಿಸಿ ಅಡಿಕೆ ಗೋದಾಮಿಗೆ ಕರೆದೊಯ್ದಿದ್ದಾನೆ. ಬಳಿಕ ಅತ್ಯಾಚಾರ ಎಸಗಿದ್ದಾನೆ.

ಮನೆಗೆ ಬಂದಾಗ ಬಾಲಕಿ ತೀವ್ರ ಯಾತನೆಯಿಂದ ನರಳುತ್ತಿದ್ದನನ್ನು ಪೋಷಕರು ಗಮನಿಸಿ ವಿಚಾರಿಸಿದಾಗ ಅಡಿಕೆ ಗೋದಾಮಿನಲ್ಲಿ ನಡೆದ ಘೋರ ಘಟನೆಯನ್ನು ವಿವರಿಸಿದ್ದಾಳೆ. ಕೂಡಲೇ ಪೋಷಕರು ತೀವ್ರ ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಪೋಷಕರ ದೂರಿನ ಮೇರೆಗೆ ಲೈಂಗಿಕ ದೌರ್ಜನ್ಯ ಎಸಗಿದ ವೃದ್ಧನನ್ನು ಪೊಲೀಸರು ಬಂಧಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.

ಯುವತಿ ಮೈ ಮುಟ್ಟಿ ಕುಚೇಷ್ಟೆ ಮಾಡಿದ ಬಿಎಂಟಿಸಿ ಕಂಡಕ್ಟರ್‌!

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಅದ್ಯಾಕೋ ಏನೋ ಹೆಣ್ಮಕ್ಕಳಿಗೆ ಸುರಕ್ಷಿತವಲ್ಲ ಎಂಬ ಭಾವನೆ ಶುರುವಾಗಿದೆ. ಯಾಕೆಂದರೆ ಸಾಲು ಸಾಲು ಘಟನೆಗಳೇ ಪುಷ್ಟಿ ನೀಡುತ್ತಿವೆ. ಮಾಲ್‌, ನಮ್ಮ ಮೆಟ್ರೋ ಆಯಿತು, ಇದೀಗ ಬಿಎಂಟಿಸಿ ಬಸ್‌ನಲ್ಲೂ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ಕಿರುಕುಳ ಕೊಟ್ಟಿದ್ದು ಸಹ ಪ್ರಯಾಣಿಕರಲ್ಲ, ಬದಲಿಗೆ ಬಿಎಂಟಿಸಿ ಕಂಡಕ್ಟರೇ ಯುವತಿಯೊಂದಿಗೆ ಅಸಭ್ಯವಾಗಿ (Physical Abuse) ವರ್ತಿಸಿದ್ದಾನೆ.

ಕಳೆದ ಅ.19ರ ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆಂಪಣ್ಣ ಎಂಬಾತ ಮಹಿಳಾ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ರಮ್ಯ (ಹೆಸರು ಬದಲಾಯಿಸಲಾಗಿದೆ) ಎಂಬಾಕೆ ಶಿವಾಜಿನಗರದಿಂದ ಕೆ.ಆರ್‌.ಪುರ ಕಡೆಗೆ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಬಸ್‌ನಲ್ಲಿ ರಶ್‌ ಇಲ್ಲದಿದ್ದರೂ ರಮ್ಯ ಕುಳಿತಿದ್ದ ಸೀಟಿಗೆ ಒರಗಿಕೊಂಡು ಮೈಯನ್ನು ಉಜ್ಜಿ ಅಸಭ್ಯವಾಗಿ ವರ್ತಿಸಿದ್ದಾನೆ. ಹೀಗಾಗಿ ರಮ್ಯ ನಿಗಮಕ್ಕೆ ಇ-ಮೇಲ್‌ ಮೂಲಕ ಲೈಂಗಿಕ ಕಿರುಕುಳ ನೀಡಿದ ಕಂಡಕ್ಟರ್‌ ವಿರುದ್ಧ ದೂರು ನೀಡಿದ್ದಾರೆ.

ಕಂಡೆಕ್ಟರ್‌ ಕೆಂಪಣ್ಣ ಲೈಂಗಿಕ ಕಿರುಕುಳ ನೀಡಿರುವುದು ಮಾತ್ರವಲ್ಲದೆ, ಬಸ್‌ನಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಫೋಟೊ, ವಿಡಿಯೋವನ್ನು ಗೌಪ್ಯವಾಗಿ ಮೊಬೈಲ್‌ನಲ್ಲಿ ಸೆರೆ ಹಿಡಿದು ವಿಕೃತವಾಗಿ ನಡೆದುಕೊಂಡಿದ್ದಾನೆ. ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದಾಗ ಆರೋಪವು ಸಾಬೀತಾಗಿದೆ. ಹೀಗಾಗಿ ಬಸ್ ಕಂಡೆಕ್ಟರ್‌ ಕೆಂಪಣ್ಣನನ್ನು ಅಮಾನತ್ತು ಮಾಡಿ ಆದೇಶಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version