ಹಾವೇರಿ: ಹಾನಗಲ್‌ನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣ (Physical Abuse) ಹಿನ್ನೆಲೆ ಸಂತ್ರಸ್ತೆಯನ್ನು ಭೇಟಿಯಾಗಲು ಬಿಜೆಪಿ ಮಹಿಳಾ ಘಟಕದ ನಿಯೋಗ (BJP women’s wing delegation) ಹಾವೇರಿಗೆ (Haveri News) ಬಂದಿತ್ತು. ಆದರೆ ನಿಯೋಗ ಬರುವ ಹೊತ್ತಿಗೆ ಹಾವೇರಿ ಮಹಿಳಾ ಸಾಂತ್ವನ ಕೇಂದ್ರದಿಂದ ಉತ್ತರ ಕನ್ನಡದ ಶಿರಸಿಗೆ ಸಂತ್ರಸ್ತೆಯನ್ನು ಪೊಲೀಸರು ಸ್ಥಳಾಂತರ ಮಾಡಿದ್ದಾರೆ. ಹೀಗಾಗಿ ಬಿಜೆಪಿ ನಿಯೋಗದ ಸದಸ್ಯರು ಕಿಡಿಕಾರಿದರು.
ಈ ಸಂಬಂಧ ಹಾವೇರಿಯಲ್ಲಿ ಬಿಜೆಪಿ ಮಹಿಳಾ ನಿಯೋಗದ ಸದಸ್ಯರು ಸುದ್ದಿಗೋಷ್ಟಿ ನಡೆಸಿದರು. ಕಾಳಜಿ ಇಲ್ಲದ ರಣಹೇಡಿ ಸರ್ಕಾರವಿದು, ಸಂತ್ರಸ್ತೆಯನ್ನು ಲೀಗಲ್ ಕಿಡ್ನ್ಯಾಪ್ ಮಾಡಿದೆ ಎಂದು ಬಿಜೆಪಿ ಮಹಿಳಾ ರಾಜ್ಯ ಮೋರ್ಚಾ ಅಧ್ಯಕ್ಷೆ ಕೆ.ಮಂಜುಳಾ ಆರೋಪಿಸಿದರು. ಕಾಂಗ್ರೆಸ್ ಸರ್ಕಾರವು ನಮ್ಮ ಹೋರಾಟಕ್ಕೆ ಬೆದರಿದೆ. ತಕ್ಷಣ ಸಂತ್ರಸ್ತೆಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆತರಬೇಕು ಜತೆಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಬೇಕು ಎಂದು ತಾಕೀತು ಮಾಡಿದರು.
ಇದನ್ನೂ ಓದಿ:Physical Abuse : ಸಾಂತ್ವನ ಕೇಂದ್ರದಿಂದ ಮನೆಗೆ ಸಂತ್ರಸ್ತೆ ಶಿಫ್ಟ್; ಲೈಂಗಿಕ ಕಿರುಕುಳ ನೀಡಿದ ಮತ್ತಿಬ್ಬರು ಅರೆಸ್ಟ್
ಸಂಜೆ 6 ಗಂಟೆ ಮೇಲೆ ಮಹಿಳಾ ಸಾಂತ್ವನ ಕೇಂದ್ರಕ್ಕೆ ಹೋಗುವಂತಿಲ್ಲ. ಆದರೆ ರಾತ್ರಿ ವೇಳೆ ಶಾಸಕರು ಸಾಂತ್ವನ ಕೇಂದ್ರಕ್ಕೆ ಹೋಗಿದ್ದಾರೆ. ಅತಿಕ್ರಮಣ ಪ್ರವೇಶ ಮಾಡಿದ ಶಾಸಕರ ಮೇಲೆ ಪ್ರಕರಣ ದಾಖಲಾಗಬೇಕು. ಜತೆಗೆ ಶಾಸಕರು ಬಂದಾಗ ಸಂತ್ರಸ್ತೆ ಭೇಟಿಗೆ ಅನುವು ಮಾಡಿಕೊಟ್ಟ ಪೊಲೀಸರ ಮೇಲೂ ಗೃಹ ಸಚಿವರು ಕ್ರಮ ಕೈಗೊಳ್ಳಬೇಕು ಎಂದರು. ಜತೆಗೆ ಮಹಿಳಾ ಆಯೋಗಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿಲ್ಲ, ಕೂಡಲೇ ನೇಮಕ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.
ಈ ವರ್ಷ 52 ಪೋಕ್ಸೋ ಪ್ರಕರಣ ದಾಖಲಾಗಿದೆ. ಪ್ರತಿ ತಿಂಗಳು ಅತ್ಯಾಚಾರ ಪ್ರಕರಣ ದಾಖಲಾಗುತ್ತಿವೆ. ಮಹಿಳೆಯರ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರವು ಆಟವಾಡುತ್ತಿದೆ. ಮಹಿಳಾ ಸಚಿವೆ ಇಲ್ಲಿಗೆ ಬಂದು ಮಹಿಳೆಯರ ಪರವಾಗಿ ನಾನು ಬದುಕಿದ್ದೇನೆ ಎಂಬುದನ್ನು ಹೇಳಲಿ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬ್ಯಾಟಿಂಗ್ ಮಾಡಿದರು.
ಭಯ ಹುಟ್ಟಿಸಿ ರಾಜಿಗೆ ಮುಂದಾದರು- ಮಾಳವಿಕ ಅವಿನಾಶ್
ಸಂತ್ರಸ್ತೆಗೆ ಭಯ ಹುಟ್ಟಿಸಿ ರಾಜಿಗೆ ಮುಂದಾದರು ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಮಾಳವಿಕ ಅವಿನಾಶ್ ಆರೋಪಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತಾನಾಡಿದ ಅವರು, ಪೊಲೀಸರು ಲಾಡ್ಜ್‌ನ ಸಿಬ್ಬಂದಿ ಕೊಟ್ಟ ದೂರಿನಂತೆ ಮೊದಲು ಪ್ರಕರಣ ದಾಖಲು ಮಾಡಿದ್ದರು. ಆದರೆ ಸಂತ್ರಸ್ತೆಗೆ ಭಯ ಹುಟ್ಟಿಸಿ, ರಾಜಿ ಮಾಡಲು ಮುಂದಾಗಿದ್ದರು. ಇದೊಂದು ವ್ಯವಸ್ಥಿತ ಹಾಗೂ ಸಂಘಟನಾತ್ಮಕ ಅಪರಾಧವಾಗಿದೆ. ಸಂತ್ರಸ್ತೆಯ ಧೈರ್ಯವನ್ನು ಧೃತಿಗೇಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಹಾನಗಲ್‌ನಲ್ಲಿ ನಾಲ್ಕು ಕಿಡ್ನ್ಯಾಪ್ ಪ್ರಕರಣ ದಾಖಲಾಗಿದೆ. ಆದರೆ ಮಹಿಳಾ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಲ್ಲಿದ್ದಾರೆ? ಸೂಪಿ ಪೋರಮ್ ಸಂಘಟನೆ ಇಲ್ಲಿ ಆ್ಯಕ್ವಿವ್ ಆಗಿದೆ. ಸರಕಾರವು ಪೊಲೀಸರ ಮೂಲಕ ಆಕೆಯನ್ನು ಭಯದಲ್ಲಿ ಇರಿಸಿದ್ಯಾ ಎಂಬುದು ಬೆಳಕಿಗೆ ಬರಬೇಕು. ಸಿಎಂ ಸಿದ್ದರಾಮಯ್ಯ ನೈತಿಕ ಪೊಲೀಸ್ ಗಿರಿ ಮಾಡಲು ಬಿಡಲ್ಲ ಎನ್ನುತ್ತಾರೆ. ಘಟನೆ ನಡೆದಾಗಿನಿಂದ ಇದುವರೆಗೆ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿಲ್ಲ. ಜತೆಗೆ ಆರೋಪಿಗಳ ಬಂಧನವು ತಡವಾಗಿದೆ ಯಾಕಾಗಿ? ಇದೆಲ್ಲವು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ ಎಂದರು.
ಅತ್ಯಾಚಾರದ ಪ್ರಕರಣಗಳಲ್ಲಿ ನಮ್ಮ ಸರ್ಕಾರ ರಾಜಕಾರಣ ಮಾಡಿಲ್ಲ. ಆದರೆ ಕಾಂಗ್ರೆಸ್‌ನವರು ರಾಜಕಾರಣ ಮಾಡುತ್ತಿದ್ದಾರೆ. ಸೂಫಿ ಫೋರಂ ಹುಡುಗರ ತಂಡ ಹಾನಗಲ್‌ನಲ್ಲಿ ಇದೆಯಂತೆ. ಇವರು ಯಾವುದೇ ಸಮಾಜ ಸೇವೆ ಮಾಡುತ್ತಿಲ್ಲ. ಇನ್ನೂ ಘಟನೆ ನಡೆದಾಗ ಪೊಲೀಸರ ಮುಂದೆ ಸಂತ್ರಸ್ತೆ ಹೇಳಿಕೆ ನೀಡಲು ಯಾಕೆ ಹೆದರಿದಳು?ಇಂತಹ ಕೃತ್ಯ ನಡೆದಾಗ ಎಸ್‌ಐಟಿ ತಂಡ ಬರಬೇಕಿತ್ತು, ಬಂದಿದೆಯಾ? ನಾವು ಭೇಟಿ ಮಾಡಲು ಬರುತ್ತೇವೆ ಎಂದು ತಿಳಿದ ಮೇಲೆ ಕೂಡಲೇ ಆಕೆಯನ್ನು ಇಲ್ಲಿಂದ ಬೇರೆಡೆ ಶಿಫ್ಟ್ ಮಾಡಿದ್ದಾರೆ ಆಕ್ರೋಶ ಹೊರಹಾಕಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ