ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಅದ್ಯಾಕೋ ಏನೋ ಹೆಣ್ಮಕ್ಕಳಿಗೆ ಸುರಕ್ಷಿತವಲ್ಲ ಎಂಬ ಭಾವನೆ ಶುರುವಾಗಿದೆ. ಯಾಕೆಂದರೆ ಸಾಲು ಸಾಲು ಘಟನೆಗಳೇ ಪುಷ್ಟಿ ನೀಡುತ್ತಿವೆ. ಮಾಲ್, ನಮ್ಮ ಮೆಟ್ರೋ ಆಯಿತು, ಇದೀಗ ಬಿಎಂಟಿಸಿ ಬಸ್‌ನಲ್ಲೂ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ಕಿರುಕುಳ ಕೊಟ್ಟಿದ್ದು ಸಹ ಪ್ರಯಾಣಿಕರಲ್ಲ, ಬದಲಿಗೆ ಬಿಎಂಟಿಸಿ ಕಂಡಕ್ಟರೇ ಯುವತಿಯೊಂದಿಗೆ ಅಸಭ್ಯವಾಗಿ (Physical Abuse) ವರ್ತಿಸಿದ್ದಾನೆ.
ಕಳೆದ ಅ.19ರ ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆಂಪಣ್ಣ ಎಂಬಾತ ಮಹಿಳಾ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ರಮ್ಯ (ಹೆಸರು ಬದಲಾಯಿಸಲಾಗಿದೆ) ಎಂಬಾಕೆ ಶಿವಾಜಿನಗರದಿಂದ ಕೆ.ಆರ್.ಪುರ ಕಡೆಗೆ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಬಸ್‌ನಲ್ಲಿ ರಶ್ ಇಲ್ಲದಿದ್ದರೂ ರಮ್ಯ ಕುಳಿತಿದ್ದ ಸೀಟಿಗೆ ಒರಗಿಕೊಂಡು ಮೈಯನ್ನು ಉಜ್ಜಿ ಅಸಭ್ಯವಾಗಿ ವರ್ತಿಸಿದ್ದಾನೆ. ಹೀಗಾಗಿ ರಮ್ಯ ನಿಗಮಕ್ಕೆ ಇ-ಮೇಲ್ ಮೂಲಕ ಲೈಂಗಿಕ ಕಿರುಕುಳ ನೀಡಿದ ಕಂಡಕ್ಟರ್ ವಿರುದ್ಧ ದೂರು ನೀಡಿದ್ದಾರೆ.
ಕಂಡೆಕ್ಟರ್ ಕೆಂಪಣ್ಣ ಲೈಂಗಿಕ ಕಿರುಕುಳ ನೀಡಿರುವುದು ಮಾತ್ರವಲ್ಲದೆ, ಬಸ್‌ನಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಫೋಟೊ, ವಿಡಿಯೋವನ್ನು ಗೌಪ್ಯವಾಗಿ ಮೊಬೈಲ್‌ನಲ್ಲಿ ಸೆರೆ ಹಿಡಿದು ವಿಕೃತವಾಗಿ ನಡೆದುಕೊಂಡಿದ್ದಾನೆ. ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದಾಗ ಆರೋಪವು ಸಾಬೀತಾಗಿದೆ. ಹೀಗಾಗಿ ಬಸ್ ಕಂಡೆಕ್ಟರ್ ಕೆಂಪಣ್ಣನನ್ನು ಅಮಾನತ್ತು ಮಾಡಿ ಆದೇಶಿಸಲಾಗಿದೆ.
ಇದನ್ನೂ ಓದಿ: Physical Abuse : ಸಿಗ್ನಲ್ ಜಂಪ್ ಕಿರಿಕ್; ಯುವತಿ ಬಟ್ಟೆ ಎಳೆದವನು ಅರೆಸ್ಟ್!
ಮೆಟ್ರೊದಲ್ಲಿ ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ
ನಮ್ಮ ಮೆಟ್ರೋ (Namma Metro) ಸಂಚಾರ ಎಲ್ಲ ರೀತಿಯಿಂದಲೂ ಸುರಕ್ಷಿತ ಎಂಬ ಭಾವ ಕ್ರಮೇಣ ಕಡಿಮೆಯಾಗುತ್ತಿದೆ. ಅತ್ಯಂತ ಕಠಿಣವಾದ ಪ್ರವೇಶ ನಿಯಮಗಳು, ರೈಲು ಹತ್ತುವಾಗ ಪಾಲಿಸಬೇಕಾದ ಕ್ರಮಗಳಿಂದ ಮೆಟ್ರೋ ರೈಲಿನಲ್ಲಿ ಓಡಾಡುವುದು ಅತ್ಯಂತ ಸೆಕ್ಯೂರ್ಡ್ ಅನ್ನುವ ಫೀಲಿಂಗ್ ಇತ್ತು. ಆದರೆ, ಈಗ ಏಕಾಏಕಿಯಾಗಿ ಜನದಟ್ಟಣೆ ಹೆಚ್ಚಿರುವುದು, ಎಲ್ಲ ರೀತಿಯ ಜನರು ರೈಲು ಹತ್ತುತ್ತಿರುವುದರಿಂದ ಅಲ್ಲೂ ಲೈಂಗಿಕ ಕಿರುಕುಳ (Sexual Harassment), ಜೋರಾಗಿ ಮಾತನಾಡುವುದು, ದಬಾಯಿಸುವುದು ಮೊದಲಾದ ವಿದ್ಯಮಾನಗಳು ನಡೆಯುತ್ತಿವೆ.
ಕೆಲವು ದಿನಗಳ ಹಿಂದೆ ಮೆಟ್ರೋ ರೈಲಿನೊಳಗೆ ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ. ಈ ಬಗ್ಗೆ ಆಕೆಯ ಗೆಳತಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ರಕ್ಷಣೆ ಒದಗಿಸಬೇಕು ಎಂದು ಕೋರಿದ್ದಾರೆ.
ಘಟನೆ ನಡೆದಿರುವುದು ಮೆಜೆಸ್ಟಿಕ್‌ನಲ್ಲಿರುವ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ. ಯುವತಿಯೊಬ್ಬಳು ಬೆಳಗ್ಗೆ 8.30ರ ಸುಮಾರಿಗೆ ಮೆಟ್ರೋದಲ್ಲಿ ಪ್ರಯಾಣಿಸಲೆಂದು ಮೆಜೆಸ್ಟಿಕ್ ರೈಲು ನಿಲ್ದಾಣಕ್ಕೆ ಬಂದಿದ್ದಳು. ಅಷ್ಟು ಹೊತ್ತಿಗೆ ಅಲ್ಲಿ ಭಾರಿ ಜನದಟ್ಟಣೆ ಇತ್ತು. ರೈಲು ಏರುವಾಗಲೂ ಹಿಂದಿನಿಂದ ತಳ್ಳಾಟ ಜೋರಾಗಿತ್ತು. ಹಾಗೆ ಕಷ್ಟು ಕಟ್ಟು ಏರಿ ಹೇಗೋ ಒಳಗೆ ನಿಂತ ಮೇಲೆ ಕೆಂಪು ಅಂಗಿ ಧರಿಸಿದ್ದ ವ್ಯಕ್ತಿಯೊಬ್ಬ ಆಕೆಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಆಕೆಯ ಹಿಂದಿನ ಭಾಗವನ್ನು ಸ್ಪರ್ಶಿಸಿ ಕಿರುಕುಳ ನೀಡಲು ಆರಂಭ ಮಾಡಿದ್ದಾನೆ. ಆರಂಭದಲ್ಲಿ ಆಕೆಗೆ ಇದು ಜನರ ಒತ್ತಡದ ನಡುವೆ ಏನೋ ತಪ್ಪಾಗಿ ನಡೆಯುತ್ತಿರಬಹುದು ಎಂದು ಭಾವಿಸಿದ್ದಾಳೆ. ಆದರೆ, ಕೆಲವೇ ಸೆಕೆಂಡುಗಳಲ್ಲಿ ಆಕೆಗೆ ಆತನ ದುಷ್ಟ ವರ್ತನೆ ಅರ್ಥವಾಗಿದೆ.
ಆಕೆ ಆತನಿಂದ ತಪ್ಪಿಸಿಕೊಂಡು ಸ್ವಲ್ಪ ಮುಂದೆ ಹೋಗಿ ಬೇರೆಯವರ ಸಹಾಯ ಕೋರಿದರೂ ಎಲ್ಲರೂ ತಮ್ಮ ಲೋಕದಲ್ಲೇ ಮುಳುಗಿದ್ದರು ಬಿಟ್ಟರೆ ಯಾರೂ ಸಹಾಯಕ್ಕೆ ಬರಲಿಲ್ಲ ಎಂದು ಆಕೆಯ ಗೆಳತಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಗೆಳತಿಗೆ ಆಗಿರುವ ಲೈಂಗಿಕ ಕಿರುಕುಳದ ಬಗ್ಗೆ ಮತ್ತೊಬ್ಬ ಯುವತಿ ಬರೆದುಕೊಂಡಿರುವ ಬಗ್ಗೆ ಜನರು ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ. ಇಡೀ ಮೆಟ್ರೋ ರೈಲು ಮತ್ತು ನಿಲ್ದಾಣ ಸಿಸಿ ಟಿವಿ ಕಣ್ಗಾವಲಿನಲ್ಲಿರುತ್ತದೆ. ಈ ಬಗ್ಗೆ ಮೆಟ್ರೋ ಅಧಿಕಾರಿಗಳಿಗೆ ಇಲ್ಲವೇ ಪೊಲೀಸರಿಗೆ ದೂರು ನೀಡಿದರೆ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: 142 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಾಂಶುಪಾಲ; ತಂದೆ ವಯಸ್ಸು ಇವನಿಗೆ!
ಹೆಚ್ಚುತ್ತಿರುವ ಒತ್ತಡದ ಪರಿಣಾಮ
ಮೆಟ್ರೋ ರೈಲಿನಲ್ಲಿ ಈಗ ಪೀಕ್ ಅವರ್ ಸಂಚಾರ ಎನ್ನುವುದು ನಿಜಕ್ಕೂ ದುಸ್ವಪ್ನವೇ ಆಗಿದೆ. ಚಲ್ಲಘಟ್ಟದಿಂದ ನೇರವಾಗಿ ವೈಟ್ ಫೀಲ್ಡ್ ಕನೆಕ್ಷನ್ ಸಿಗುವುದರಿಂದ ಜನರು ಹೆಚ್ಚು ಹೆಚ್ಚು ಮೆಟ್ರೋ ರೈಲನ್ನು ಅವಲಂಬಿಸಿದ್ದಾರೆ. ಇದರಿಂದಾಗಿ ಜನರ ಒತ್ತಡ ಹೆಚ್ಚಿದೆ. ಈಗ ಎಲ್ಲ ರೀತಿಯ ಜನರೂ ಮೆಟ್ರೋ ಹತ್ತುವುದರಿಂದು ಕೆಲವರು ತಮ್ಮ ಕೆಟ್ಟ ಚಾಳಿಗಳನ್ನು ಇಲ್ಲಿಗೂ ತಂದಿದ್ದಾರೆ.
ಜನದಟ್ಟಣೆಯ ಸಂದರ್ಭದಲ್ಲಿ ರೈಲನ್ನು ಏರುವುದೇ ಕಷ್ಟವಾಗುತ್ತದೆ. ಒಳಗೆ ಹೋದರೆ ಉಸಿರಾಡಲಾಗದ ಒತ್ತೊತ್ತಾಗಿ ನಿಲ್ಲಬೇಕಾದ ಪರಿಸ್ಥಿತಿ. ಜತೆಗೆ ಬ್ಯಾಗ್‌ಗಳ ಒತ್ತಡ. ಇಂಥ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಕೆಲವರು ಕಿರುಕುಳ ನೀಡಲು ಶುರು ಮಾಡುತ್ತಾರೆ. ಕೆಲವೊಮ್ಮೆ ಕಿರುಕುಳ ನೀಡುತ್ತಿದ್ದಾರೆ ಎಂಬುದು ಗೊತ್ತಾದರೂ ವಿರೋಧಿಸಲಾಗದ ಪರಿಸ್ಥಿತಿ ಇರುತ್ತದೆ. ನಾವು ಬೇಕೂಂತ ಮಾಡಿಲ್ಲ. ಇಷ್ಟೊಂದು ಜನ ಇದ್ದಾಗ ಒಬ್ಬರಿಗೊಬ್ಬರು ತಾಕುವುದನ್ನೇ ದೊಡ್ಡ ವಿಷಯ ಯಾಕೆ ಮಾಡುತ್ತೀರಿ ಎಂದು ತಿರುಗಿ ಪ್ರಶ್ನೆ ಕೇಳುತ್ತಾರೆ. ಇವರು ಮಾಡುವ ಕುಚೇಷ್ಟೆಗಳನ್ನು ಯಾವ ಸಿಸಿ ಕ್ಯಾಮೆರಾವೂ ಪತ್ತೆ ಹಚ್ಚುವುದು ಕಷ್ಟ.
ಇನ್ನು ಮೆಟ್ರೋಗಳಲ್ಲಿ ಈಗ ಜನರ ಬೈದಾಟ, ತಳ್ಳಾಟವೂ ಜಾಸ್ತಿಯಾಗಿದೆ. ಬಸ್ ಸ್ಟಾಂಡ್‌ಗಳ ವಾತಾವರಣವೇ ಇಲ್ಲೂ ಕಂಡುಬರುತ್ತಿದೆ. ಇದಕ್ಕೆ ಪರಿಹಾರವಾಗಿ, ಪೀಕ್ ಅವರ್‌ಗಳಲ್ಲಿ ಹೆಚ್ಚುವರಿ ರೈಲುಗಳನ್ನು ಬಿಡುವುದು ಒಂದೇ ಮಾರ್ಗ ಎಂದು ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.