ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ರೋಡ್ ರೇಜ್ ಪ್ರಕರಣಗಳೊಂದಿಗೆ ಮಹಿಳೆಯರ ಜತೆಗೆ ಅಸಭ್ಯವಾಗಿ ವರ್ತಿಸಿ (Physical Abuse) ಸಿಕ್ಕಿ ಬೀಳುವ ಪ್ರಕರಣಗಳು ಹೆಚ್ಚಾಗುತ್ತಿದೆ. ಕಳೆದ 9ರಂದು ಜಯನಗರದ ಸೌತ್ ಎಂಡ್ ಸರ್ಕಲ್‌ನ ಉಪ ಪೊಲೀಸ್ ಆಯುಕ್ತರ ಕಚೇರಿ ಸಮೀಪವೇ ಯುವತಿಯನ್ನು ಅಡ್ಡಗಟ್ಟಿ ಬಟ್ಟೆ ಹಿಡಿದು ಎಳೆದಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹರೀಶ್ ಬಂಧಿತ ಆರೋಪಿಯಾಗಿದ್ದಾನೆ.
ದಕ್ಷಿಣ ವಿಭಾಗದ ಡಿಸಿಪಿ ಕಚೇರಿಯ ಮುಂಭಾಗದಲ್ಲಿಯೇ ಈ ಘಟನೆ ನಡೆದಿದ್ದ ಕಾರಣಕ್ಕೆ ಹೆಚ್ಚು ಗಂಭೀರತೆಯನ್ನು ಪಡೆದುಕೊಂಡಿತ್ತು. ಯುವತಿಯ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಹರೀಶ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಫ್ಲೋರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಬಿನ್ನಿಪೇಟೆ ನಿವಾಸಿ ಹರೀಶ್, ಸಿಗ್ನಲ್ ಜಂಪ್ ವಿಚಾರಕ್ಕೆ ಯುವತಿಯ ಜತೆ ಅಸಭ್ಯವಾಗಿ ವರ್ತಿಸಿದ್ದ. ಸ್ಕೂಟರ್‌ನಲ್ಲಿದ್ದ ಯುವತಿಯನ್ನು ಅಡಗಟ್ಟಿ ಆಕೆ ಬಟ್ಡೆ ಎಳೆದಾಡಿ ಕಿರುಕುಳ ಕೊಟ್ಟಿದ್ದ. ಪ್ರಶ್ನೆ ಮಾಡಿದಾಗ ಯುವತಿಯ ಮೇಲೆ ಹಲ್ಲೆಗೆ ಮುಂದಾಗಿದ್ದ. ನಂತರ ಅಶ್ಲೀಲ ಪದಗಳಿಂದ ನಿಂದಿಸಿ ಅಲ್ಲಿಂದ ಪರಾರಿಯಾಗಿದ್ದ.
ಈತನಿಗಾಗಿ ಹುಡುಕಾಟ ನಡೆಸಿದ ಪೊಲೀಸರು ಸುಮಾರು 500 ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ. ಜಯನಗರದಲ್ಲಿ ಪರಾರಿಯಾದವನು ಬಿನ್ನಿಪೇಟೆಯಲ್ಲಿ ಸಿಕ್ಕಿಬಿದ್ದಿದ್ದ. ಹರೀಶ್‌ನ ಮನೆ ಬಾಗಿಲಿಗೆ ಪೊಲೀಸರು ಹೋದಾಗ, ಆತನಿಗೆ ತನ್ನ ವಿರುದ್ಧ ದೂರು ದಾಖಲಾಗಿರುವ ವಿಚಾರವೇ ತಿಳಿದಿರಲಿಲ್ಲ. ಹೀಗಾಗಿ ಆತ ಪರಾರಿಯಾಗದೆ ಮನೆಯಲ್ಲಿಯೇ ಇದ್ದ ಎನ್ನಲಾಗಿದೆ. ಸದ್ಯ ಜಯನಗರ ಪೊಲೀಸರು ವಶಕ್ಕೆ ಪಡೆದಾಗ ಆರೋಪಿ ಹರೀಶ್ ತಪ್ಪಾಯ್ತು ಎಂದು ಕೇಳಿದ್ದಾನೆ.
ನಾದಿನಿ ಜತೆ ಅಶ್ಲೀಲ ವರ್ತನೆ ಪ್ರಶ್ನಿಸಿದ್ದಕ್ಕೆ ಯದ್ವಾತದ್ವಾ ಹಲ್ಲೆ, ಮುಖಕ್ಕೆ ಮೂತ್ರ ಮಾಡಿ ವಿಕೃತಿ
ಮೈಸೂರು: ತನ್ನ ನಾದಿನಿ ಜತೆ ಅಶ್ಲೀಲವಾಗಿ (Indescent Behaviour) ನಡೆದುಕೊಂಡಿದ್ದನ್ನು ಪ್ರಶ್ನಿಸಿದ ಯುವಕನಿಗೆ ಆಂಬ್ಯುಲೆನ್ಸ್ ಡ್ರೈವರ್ (Ambulance driver) ಒಬ್ಬ ಮಾರಣಾಂತಿಕವಾಗಿ ಹಲ್ಲೆ (Murderous attack) ಮಾಡಿದ್ದಾನೆ. ಮನ ಬಂದಂತೆ ಥಳಿಸಿದ್ದು (Attack on youth) ಮಾತ್ರವಲ್ಲ, ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದಾನೆ ಆಂಬ್ಯುಲೆನ್ಸ್ ಡ್ರೈವರ್.
ಮೈಸೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಟ್ರಾಮಾ ಸೆಂಟರ್‌ನ ಆಂಬ್ಯುಲೆನ್ಸ್ ಡ್ರೈವರ್ ಸಂದೇಶ್ ಈ ರೀತಿಯಾಗಿ ವಿಕೃತಿ ಮೆರೆದವನು. ಅದೇ ಆಸ್ಪತ್ರೆ ಸೆಕ್ಯೂರಿಟಿ ಗಾರ್ಡ್ ಮಹೇಶ್ ಮೇಲೆ ಆತ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಇದೀಗ ಮಹೇಶ್ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸಂದೇಶ್ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶೌಚಾಲಯಲ್ಲಿ ಕ್ಯಾಮೆರಾ ಇಟ್ಟಿದ್ದ ಕಿರಾತಕ!
ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಆಗಿದ್ದ ಮಹೇಶ್‌ನನ್ನು ಭೇಟಿಯಾಗಲು ಆಗಾಗ ಅವನ ನಾದಿನಿ ಬರುತ್ತಿದ್ದಳು. ಆಗ ಆಂಬ್ಯುಲೆನ್ಸ್ ಚಾಲಕ ಸಂದೇಶ್ ಆಕೆಯ ಜತೆಗೆ ಅಶ್ಲೀಲವಾಗಿ ನಡೆದುಕೊಳ್ಳುತ್ತಿದ್ದನಂತೆ. ಮಹೇಶ್ ಅದನ್ನು ಪ್ರಶ್ನೆ ಮಾಡಿದ್ದ, ಜತೆಗೆ ಆಸ್ಪತ್ರೆ ಅಧಿಕಾರಿಗಳಿಗೆ ದೂರು ಕೂಡಾ ನೀಡಿದ್ದ. ಇದು ಸಂದೇಶ್‌ನನ್ನು ಕೆರಳಿಸಿತ್ತು.
ಕಳೆದ ಸೋಮವಾರ ಆಸ್ಪತ್ರೆಗೆ ಕೆಲಸಕ್ಕೆ ಬರುತ್ತಿದ್ದ ಮಹೇಶ್ ನನ್ನು ಮೈಸೂರಿನ ಹೊರವಲಯದ ಬಂಡೀಪಾಳ್ಯದ ಬಳಿಗೆ ಕರೆದುಕೊಂಡು ಹೋಗಿರುವ ಸಂದೇಶ್ ಅಲ್ಲಿ ಗೆಳೆಯರ ಜತೆ ಸೇರಿ ಹಲ್ಲೆ ಮಾಡಿದ್ದಾನೆ.
ಸಂದೇಶ್ ಹಾಗೂ ಸ್ನೇಹಿತರು ಮಹೇಶ್ ತಲೆ ಭಾಗ ಹೊಡೆದು ಹಾಗೂ ಕೈ ಮುರಿದು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಬಳಿಕ ಮಹೇಶ್ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದಾರೆ ಸಂದೇಶ್ ಹಾಗೂ ಆತನ ಸ್ನೇಹಿತರು.
ಸಂದೇಶ್‌ನ ವಿಕೃತಿ ಇದು ಮೊದಲೇನಲ್ಲ. ಆತ ಈ ಹಿಂದೆ ಶೌಚಾಲಯದಲ್ಲಿ ಹಿಡನ್ ಕ್ಯಾಮರಾ ಇಟ್ಟು ಯುವತಿಯರು, ಆಸ್ಪತ್ರೆ ನರ್ಸ್ ಗಳ ವಿಡಿಯೊ ಮಾಡಿ ಸಿಕ್ಕಿಬಿದ್ದಿದ್ದ. ಈ ವಿಚಾರಕ್ಕೆ ಕೆ.ಆರ್.ಆಸ್ಪತ್ರೆಯಿಂದ ಸಂದೇಶ್ ನನ್ನು ಕೆಲಸದಿಂದ ತೆಗೆಯಲಾಗಿತ್ತು. ಮತ್ತೆ ಟ್ರಾಮಾ ಸೆಂಟರ್ ಗೆ ಕೆಲಸಕ್ಕೆ ಸೇರಿದ್ದ. ಆದರೆ, ಇಲ್ಲೂ ತನ್ನ ವಿಕೃತಿಯನ್ನು ಮುಂದುವರಿಸಿದ್ದ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.