Site icon Vistara News

Physical Abuse : ಕಾಮುಕನಾದ ಉಪನ್ಯಾಸಕ; ವಿಡಿಯೊ ಮಾಡಿ ವಿದ್ಯಾರ್ಥಿನಿಗೆ ಬ್ಲ್ಯಾಕ್‌ಮೇಲ್‌!

Student sexually assaulted by lecturer

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಲೈಂಗಿಕ ಕಿರುಕುಳದಂತಹ ಪ್ರಕರಣಗಳು ಹೆಚ್ಚಾಗುತ್ತಿದೆ. ಕಳೆದ ವಾರವಷ್ಟೇ ದಾವಣಗೆರೆಯಲ್ಲಿ 7 ವರ್ಷದ ಬಾಲಕಿ ಮೇಲೆ ಎರಗಿದ ಶಾಲಾ ಶಿಕ್ಷಕನೊಬ್ಬ ಲೈಂಗಿಕ ದೌರ್ಜನ್ಯ (Physical Abuse) ನಡೆಸಿ ಅರೆಸ್ಟ್‌ ಆಗಿದ್ದ. ಅದರಲ್ಲೂ ಬೆಂಗಳೂರಲ್ಲಿ ವಯಸ್ಸಿನ ಮಿತಿಯಿಲ್ಲದೇ ವಾರಕ್ಕೊಂದು ಕೇಸ್‌ ದಾಖಲಾಗುತ್ತಿದೆ. ಇದೀಗ ವಿದ್ಯಾರ್ಥಿನಿಗೆ ಕೆಲಸ ಕೊಡಿಸುವ ನೆಪದಲ್ಲಿ ಖಾಸಗಿ ಕಾಲೇಜಿನ ಉಪನ್ಯಾಸಕನೊಬ್ಬ ಲೈಂಗಿಕ ದೌರ್ಜನ್ಯವೆಸಗಿದ್ದಾನೆ.

ಗಂಗಮ್ಮನಗುಡಿ ಪೊಲೀಸರು ಮದನ್ ಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ. ಯಲಹಂಕದ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕನಾಗಿರುವ ಮದನ್ ಕುಮಾರ್ ಬಳಿ ವಿದ್ಯಾರ್ಥಿನಿ ಪಾರ್ಟ್‌ ಟೈಂ ಜಾಬ್‌ ಕೊಡಿಸುವಂತೆ ಕೇಳಿದ್ದಳು. ಇದನ್ನೇ ಬಂಡವಾಳ ಮಾಡಿಕೊಂಡ ಮದನ್‌ ಪ್ಲ್ಯಾನ್‌ ಮಾಡಿ ಎಂ.ಜಿ. ರಸ್ತೆಯಲ್ಲಿ ಇಂಟರ್ ವ್ಯೂ ಇದೆ ಎಂದು ಹೋಟೆಲ್‌ಗೆ ಕರೆದೊಯ್ದಿದ್ದಾನೆ.

ಬಳಿಕ ದೌರ್ಜನ್ಯವೆಸಗಿ ಅದನ್ನೂ ವಿಡಿಯೊ ಮಾಡಿಕೊಂಡಿದ್ದಾನೆ. ನಾನು ಯಾವಾಗ ಕರೆದರೂ ನೀನು ಬರಬೇಕೆಂದು ವಿಡಿಯೊ ತೋರಿಸಿ ಬ್ಲ್ಯಾಕ್‌ ಮೇಲ್‌ ಮಾಡಿದ್ದಾನೆ. ಮದನ್ ಕಿರುಕುಳದಿಂದ ಬೇಸತ್ತು ವಿದ್ಯಾರ್ಥಿನಿ ಗಂಗಮ್ಮನಗುಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಮದನ್ ಕುಮಾರ್‌ನನ್ನು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Physical Abuse: ಹೋಟೆಲ್‌ನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ; ಫ್ರೆಂಡ್‌ ಮಾಡಿದ ದ್ರೋಹ

7 ವರ್ಷದ ಬಾಲಕಿ ಮೇಲೆ ಎರಗಿದ ಶಾಲಾ ಶಿಕ್ಷಕ ಅರೆಸ್ಟ್‌!

ದಾವಣಗೆರೆ : ಅಕ್ಷರ ಕಲಿಸುವ ಶಿಕ್ಷಕನೇ ಭಕ್ಷಕನಾದರೆ ಮಕ್ಕಳ ಗತಿಯೇನು. ಇಂತಹದೊಂದು ಪ್ರಶ್ನೆ ಕಾಡದೆ ಇರದು. ಕಾಮುಕ ಶಿಕ್ಷಕನೊಬ್ಬ ಅಪ್ರಾಪ್ತೆ ಮೇಲೆ ಎರಗಿ, ನಿರಂತರವಾಗಿ ಅತ್ಯಾಚಾರವೆಸಗಿರುವ (Physical Abuse) ಘಟನೆ ಬೆಳಕಿಗೆ ಬಂದಿದೆ. ದಾವಣಗೆರೆ ನಗರದ ಸರ್ಕಾರಿ ಶಾಲೆಯೊಂದರಲ್ಲಿ ಈ ಕೃತ್ಯ ನಡೆದಿದೆ.

ಸರ್ಕಾರಿ ಶಾಲೆಯ ಶಿಕ್ಷಕನೊಬ್ಬ 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಯಾರಿಗೂ ಹೇಳದಂತೆ ಕಾಮುಕ ಶಿಕ್ಷಕ ಬಾಲಕಿಗೆ ಬೆದರಿಕೆ ಹಾಕಿದ್ದಾನೆ. ಎರಡು ದಿನಗಳ ಹಿಂದೆ ಬಾಲಕಿ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲು ಆದಾಗ ಪ್ರಕರಣ ಬೆಳಕಿಗೆ ಬಂದಿದೆ.

ವೈದ್ಯರ ತಪಾಸಣೆ ವೇಳೆ ಅತ್ಯಾಚಾರವಾಗಿರುವುದು ತಿಳಿದು ಬಂದಿದೆ. ಸದ್ಯ ಕಾಮುಕ ಶಿಕ್ಷಕನ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಪೋಕ್ಸೋ ಪ್ರಕರಣದಡಿ ಕಾಮುಕ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಅತ್ಯಾಚಾರಕ್ಕೆ ಒಳಗಾದ ಬಾಲಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಕೂಟರ್‌ ಅಡ್ಡಗಟ್ಟಿ ಯುವತಿ ಬಟ್ಟೆ ಹಿಡಿದು ಎಳೆದಾಡಿದ ಕಾಮುಕ!

ರಾತ್ರಿ ಕೆಲಸ ಮುಗಿಸಿ ಮನೆಗೆ ಸ್ಕೂಟರ್‌ನಲ್ಲಿ ವಾಪಸ್‌ ಆಗುತ್ತಿದ್ದ ಯುವತಿಯನ್ನು ಕಾಮುಕನೊಬ್ಬ (Physical Abuse) ಹಿಂಬಾಲಿಸಿದ್ದಾನೆ. ಬಳಿಕ ಒಮ್ಮೆಲೆ ಸ್ಕೂಟರ್‌ಗೆ ಅಡ್ಡಗಟ್ಟಿದ್ದಾನೆ. ನಂತರ ನಡುರಸ್ತೆಯಲ್ಲೇ ಯುವತಿಯ ಬಟ್ಟೆಯನ್ನು ಹಿಡಿದು ಎಳೆದಾಡಿದ್ದಾನೆ.

ಜಯನಗರದ ಸೌತ್‌ ಎಂಡ್‌ ಸರ್ಕಲ್‌ನಲ್ಲಿ ಬಳಿ ಇರುವ ಉಪ ಪೊಲೀಸ್ ಆಯುಕ್ತರ ಕಚೇರಿ ಸಮೀಪವೇ ಈ ದುರ್ಘಟನೆ ನಡೆದಿದೆ. ಯುವತಿ ಕೆಲಸ ಮುಗಿಸಿ ರಾತ್ರಿ ಸುಮಾರು 10:40ರ ಸುಮಾರಿಗೆ ಕೂಡ್ಲುಗೇಟ್‌ನಿಂದ ಬಸವನಗುಡಿ ಕಡೆ ಬರುತ್ತಿದ್ದರು.

ಈ ವೇಳೆ ವೈಟ್ ಸ್ವೆಟ್ ಶರ್ಟ್ ಹಾಗೂ ಹ್ಯಾಟ್ ಧರಿಸಿಕೊಂಡು ಬಂದಿದ್ದ ಅಪರಿಚಿತನೊಬ್ಬ ಯುವತಿಯನ್ನು ಸ್ವಲ್ಪ ದೂರ ಹಿಂಬಾಲಿಸಿದ್ದಾನೆ. ಬಳಿಕ ಸೌತ್‌ ಎಂಡ್ ಸರ್ಕಲ್ ಬಳಿ ಏಕಾಏಕಿ ಅಡ್ಡಗಟ್ಟಿ ಬಳಿಕ ಯುವತಿಯ ಬಟ್ಟೆ ಹಿಡಿದು ಎಳೆದಾಡಿ ಲೈಂಗಿಕ ಕಿರುಕುಳ ನೀಡಿದ್ದಾನೆ.

ಮಾತ್ರವಲ್ಲದೆ ಯುವತಿ ಕಿರುಚಾಡಲು ಶುರು ಮಾಡುತ್ತಿದ್ದಂತೆ ಅಶ್ಲೀಲ ಪದಗಳಿಂದ ನಿಂದಿಸಿ ಕಾಮುಕ ಪರಾರಿ ಆಗಿದ್ದಾನೆ. ಸದ್ಯ ಯುವತಿ ಈ ಸಂಬಂಧ ಜಯನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಕಾಮುಕನಿಗಾಗಿ ಹುಡುಕಾಟ ನಡೆಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version