ಬೆಂಗಳೂರು: ಮಹಿಳೆಗೆ ಪ್ರಜ್ಞೆ ತಪ್ಪಿಸಿ ಅತ್ಯಾಚಾರವೆಸಗಿರುವ (Physical assault) ಆರೋಪದಡಿ ನಟ ಹಾಗೂ ನಿರ್ಮಾಪಕ (Actor Arrest) ಸ್ವಯಂಕೃಷಿ ವೀರೇಂದ್ರ ಬಾಬು (swayam krishi veerendra babu) ಹಾಗೂ ಮತ್ತವರ ಸ್ನೇಹಿತರ ವಿರುದ್ಧ ದೂರು ದಾಖಲಾಗಿದೆ. ಮಹಿಳೆ ಮೇಲೆ ಅತ್ಯಾಚಾರ ಮಾಡಿ ಅದನ್ನು ವಿಡಿಯೋ ಮಾಡಿದ್ದಲ್ಲದೇ ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದಾರೆ ಎನ್ನಲಾಗಿದೆ. ಸಂತ್ರಸ್ಥೆ ನೀಡಿದ ದೂರಿನ ಮೇರೆಗೆ ಕೊಡಿಗೆಹಳ್ಳಿ ಪೊಲೀಸರು ಸ್ವಯಂಕೃಷಿ ವೀರೇಂದ್ರ ಬಾಬುರನ್ನು ಬಂಧಿಸಿದ್ದಾರೆ.
ಕಳೆದ 2021ರಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ. ಬಳಿಕ ಹಣ ನೀಡದಿದ್ದರೆ ವಿಡಿಯೋ ರಿಲೀಸ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈಗಾಗಲೇ ಬೆದರಿಕೆವೊಡ್ಡಿ 15 ಲಕ್ಷ ರೂ. ಹಣ ಪೀಕಿದ್ದಾರೆ ಎಂದು ಸಂತ್ರಸ್ಥೆ ಆರೋಪಿಸಿದ್ದಾರೆ. ಅಂದು ಒಡವೆ ಮಾರಿ ಹಣ ಕೊಟ್ಟು ಮಹಿಳೆ ಸುಮ್ಮನಾಗಿದ್ದಾರೆ.
ಆದರೆ ಪುನಃ ಕಳೆದ ಜುಲೈ 30 ರಂದು ನಟ ಸ್ವಯಂಕೃಷಿ ವೀರೇಂದ್ರ ಬಾಬು ಮಹಿಳೆಯನ್ನು ಕರೆಸಿಕೊಂಡು ಬೆದರಿಕೆ ಹಾಕಿದ್ದಾರೆ. ಮಹಿಳೆಯನ್ನು ಕಾರಿನಲ್ಲಿ ಸುತ್ತಾಡಿಸಿ ಮೈಮೇಲಿದ್ದ ಚಿನ್ನಾಭರಣ ಕಿತ್ತುಕೊಂಡಿರುವುದಾಗಿ ಆರೋಪಿಸಿದ್ದಾರೆ. ಜತೆಗೆ ಪಾಯಿಂಟ್ ಬ್ಲಾಕ್‌ನಲ್ಲಿ ಗನ್ ಇಟ್ಟು ಬೆದರಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಘಟನೆ ಸಂಬಂಧ ಸ್ವಯಂಕೃಷಿ ವೀರೇಂದ್ರ ಬಾಬು ಹಾಗೂ ಸ್ನೇಹಿತರ ಮೇಲೆ ಎಫ್ಐಆರ್ ದಾಖಲಾಗಿದೆ. ಕೊಡಿಗೆಹಳ್ಳಿ ಪೊಲೀಸರು ಸದ್ಯ ಆರೋಪಿ ಸ್ವಯಂಕೃಷಿ ವೀರೇಂದ್ರ ಬಾಬುರನ್ನು ಬಂಧಿಸಿದ್ದು, ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.
ಸ್ವಯಂಕೃಷಿ ವೀರೇಂದ್ರ ಬಾಬು ಮೇಲೆ ಕೋಟಿ ರೂ ವಂಚನೆ!
ಹಿಂದೊಮ್ಮೆ ಸ್ವಯಂಕೃಷಿ ವೀರೇಂದ್ರ ಬಾಬು 1.8 ಕೋಟಿ ರೂಪಾಯಿ ವಂಚನೆ ಮಾಡಿರುವ ಪ್ರಕರಣವೂ ಬೆಳಕಿಗೆ ಬಂದಿತ್ತು. ಬೆಂಗಳೂರಿನ ಯಲಹಂಕ ನಿವಾಸಿಯಾದ ವಿರೇಂದ್ರಬಾಬು, ಮುಂದಿನ ಚುನಾವಣೆ ವೇಳೆಗೆ ರಾಷ್ಟ್ರೀಯ ಜನಹಿತ ಪಕ್ಷ ಕಟ್ಟಲು ಮುಂದಾಗಿದ್ದರು. ಇದಕ್ಕಾಗಿ ಎಂಎಲ್‌ಎ ಆಗಬೇಕು ಎಂಬ ಆಸೆ ಇರುವವರು ಲಕ್ಷಾಂತರ ರೂಪಾಯಿ ಹಣ ನೀಡಬೇಕು ಎಂದಿದ್ದರು ಎಂಬ ಆರೋಪ ಇದೆ.
ಆ ಹಣದಲ್ಲಿ ಆರ್ಯನ್ ಇನ್ಫೋ ಟೆಕ್ ಎಂಬ ಕಂಪೆನಿ ಅಡಿ ವಿಕೇರ್ ಲರ್ನಿಂಗ್ ಆ್ಯಪ್ ಮೂಲಕ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತ ಆನ್‌ಲೈನ್ ಶಿಕ್ಷಣ ಸೇರಿದಂತೆ, ವಿವಿಧ ಉಪಕರಣಗಳನ್ನು ನೀಡುವ ಮೂಲಕ ಜನರನ್ನು ತಮ್ಮ ಪಕ್ಷದ ಕಡೆಗೆ ಸೆಳೆಯುವ ಪ್ಲಾನ್ ಬಗ್ಗೆ ಹೇಳಿಕೊಂಡಿದ್ದರು. ಇದನ್ನು ನಂಬಿದ ಬಸವರಾಜ್ ಘೋಷಲ್ ಎಂಬುವವರು ಸೇರಿ ಹಲವಾರು ಮಂದಿ ವಿರೇಂದ್ರಬಾಬುಗೆ 1.8 ಕೋಟಿ ಹಣ ನೀಡಿದ್ದರು ಎನ್ನಲಾಗಿದೆ. ಈಗ ಹಣ ಪಡೆದ ವೀರೇಂದ್ರ ಬಾಬು ಸೇರಿದಂತೆ ಏಳು ಜನರ ಮೇಲೆ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲೇ ಎಫ್‌ಐಆರ್ ದಾಖಲಾಗಿದೆ.
ಉಚಿತ ಶಿಕ್ಷಣ ಕೊಡಿಸುವ ನೆಪದಲ್ಲಿ ಸಾರ್ವಜನಿಕರಿಂದ ಕೋಟ್ಯಂತರ ಹಣ ಸಂಗ್ರಹಿಸಿ ಯಾವುದೇ ಸಹಾಯ ಮಾಡದೇ ವಂಚಿಸಿದ್ದಾರೆ ಎಂದು ದೂರುದಾರ ಬಸವರಾಜ್ ಘೋಷಲ್ ಆರೋಪಿಸಿದ್ದರು.
ಹೈದರಾಬಾದ್ ಪೊಲೀಸರ ಅತಿಥಿಯಾಗಿದ್ದ ಸ್ವಯಂಕೃಷಿ ವೀರೇಂದ್ರ ಬಾಬು
ನಟ, ನಿರ್ಮಾಪಕ ವೀರೇಂದ್ರ ಬಾಬು ಸ್ವಯಂಕೃಷಿ ಹೆಸರಲ್ಲಿ ಹತ್ತಾರು ಕಂಪನಿಗಳನ್ನು ಹುಟ್ಟುಹಾಕಿ, ಹಲವರಿಗೆ ವಂಚನೆಯನ್ನು ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. 3 ವರ್ಷಗಳ ಹಿಂದೆ ಹೈದರಾಬಾದ್‌ನಲ್ಲಿ ಪೊಲೀಸರು ಬಂಧಿಸಿದ್ದರು. ಅಂದು ಸ್ವಯಂಕೃಷಿ ಕಂಪನಿಗಳಿಂದ ಮೋಸ ಹೋದ ನೂರಾರು ಮಂದಿ ಬೆಂಗಳೂರಿನ ದೇವನಹಳ್ಳಿ ಪೊಲೀಸ್ ಠಾಣೆಯ ಎದುರು ಜಮಾಯಿಸಿದ್ದರು. ಇದೀಗ ಈತನ ಮೇಲೆ ಅತ್ಯಾಚಾರ ಹಾಗೂ ಬೆದರಿಕೆ ಆರೋಪದಡಿ ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ