ಧಾರವಾಡ: ಇದೊಂದು ವಿಚಿತ್ರ ಪ್ರಕರಣವಾಗಿದ್ದು, ವ್ಯಕ್ತಿಯೊಬ್ಬ ಮೊಬೈಲ್ ಟವರ್ (Mobile Tower) ಏರಿ ಕುಳಿತಿದ್ದಲ್ಲದೆ, ಕಾಲು ಅಲ್ಲಾಡಿಸುತ್ತಾ ಆರಾಮವಾಗಿದ್ದ. ಈತನ ರಕ್ಷಣೆಗೆ ತಂಡವೊಂದು ಮುಂದಾದರೆ ಬೇಡಿಕೆಗಳೇ ವಿಚಿತ್ರವಾಗಿದ್ದವು. ಊಟ ಕೊಟ್ಟರೆ ಬೇಡವೆಂದವ ಮೊದಲು ನೀರು ಕುಡಿದ. ಬಳಿಕ ತನಗೆ ಸಿಗರೇಟ್ ಬೇಕೆಂದು ಪಟ್ಟುಹಿಡಿದ ಪ್ರಕರಣವು ಧಾರವಾಡದ ಜುಬ್ಲಿ ವೃತ್ತದಲ್ಲಿ ಬೆಳಕಿಗೆ ಬಂದಿದೆ. ಸತತ ಮೂರು ಗಂಟೆಗಳ ಕಾಲ ಪೊಲೀಸರಿಗೆ ಆಟವಾಡಿಸಿದ ಈತ ಕೊನೆ ಪಿಕ್‌ಪಾಕೆಟರ್ ಎಂಬ ಸಂಗತಿ ಗೊತ್ತಾಗಿದೆ.
ಈತ ಮೊಬೈಲ್ ಟವರ್ ಏರಿ ಕುಳಿತಿದ್ದನ್ನು ನೋಡಿದ ಜನರು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ತಕ್ಷಣವೇ ಪೊಲೀಸರು ಸ್ಥಳಕ್ಕಾಗಮಿಸಿ, ಕೆಳಗೆ ಬರುವಂತೆ ಕೇಳಿದ್ದಾರೆ. ಆದರೆ, ಆತ ಕೆಳಕ್ಕಿಳಿಯಲು ಸಿದ್ಧನಿರಲಿಲ್ಲ. ಮೇಲೆ ಬಂದರೆ ಪ್ರಾಣ ಕಳೆದುಕೊಳ್ಳುವ ಬೆದರಿಕೆಯೊಡ್ಡಿದ್ದಾನೆ ಎನ್ನಲಾಗಿದೆ. ಹೀಗಾಗಿ ರಕ್ಷಣಾ ತಂಡವೊಂದನ್ನೂ ಕರೆಸಿಕೊಳ್ಳಲಾಗಿದೆ. ಈತನನ್ನು ಧಾರವಾಡ ಮೂಲದ ಜಾವೀದ್ ಎಂದು ಗುರುತಿಸಲಾಗಿದೆ.
ಊಟ ಕೊಟ್ಟರೆ ಬಿಸಾಡಿದ
ಮೊದಲಿಗೆ ಈತ ಮಾನಸಿಕ ಅಸ್ವಸ್ಥನಿರಬೇಕು ಎಂದು ಭಾವಿಸಲಾಗಿತ್ತು. ಹೀಗಾಗಿ ನಾಜೂಕಾಗಿ ಆತನನ್ನು ಕೆಳಕ್ಕೆ ಇಳಿಸಲು ರಕ್ಷಣಾ ತಂಡ ಸಾಕಷ್ಟು ಶ್ರಮವಹಿಸಿತು. ಈ ಮಧ್ಯೆ ಆತನಿಗೆ ನೀರನ್ನು ಕೊಡಲಾಯಿತು. ನೀರನ್ನು ಆತ ಕುಡಿದ ಮೇಲೆ ಊಟವನ್ನೂ ಕೊಡಲಾಯಿತು. ಆದರೆ, ತನಗೆ ಊಟ ಬೇಡವೆಂದು ಅದನ್ನು ಕೆಳಕ್ಕೆ ಬಿಸಾಡಿದ. ಏನೇ ಕೇಳಿದರೂ ಸರಿಯಾಗಿ ಉತ್ತರಿಸದ ಆತ ಒಟ್ಟು ಮೂರು ಗಂಟೆಗಳ ಕಾಲ ಪೊಲೀಸರಿಗೆ ಬಹಳವಾಗಿಯೇ ಕಾಡಿದ್ದಾನೆ.
ಸಿಗರೇಟ್ ಕೇಳಿದ
ಟವರ್‌ನ ತುದಿಯಲ್ಲಿ ಕುಳಿತುಕೊಂಡಿದ್ದರೂ ಆರಾಮವಾಗಿ ಕಾಲು ಅಲ್ಲಾಡಿಸುತ್ತಾ ಇದ್ದ ಎನ್ನಲಾಗಿದೆ. ಈ ವೇಳೆ ಏನೇ ಹೇಳಿದರೂ ಕೆಳಗೆ ಇಳಿಯಲು ಒಲ್ಲೆ ಎಂದಿದ್ದಾನೆ. ಕೊನೆಗೆ ಸಿಗರೇಟ್ ಕೇಳಿದ್ದಾನೆ. ಅದನ್ನೂ ಕೊಡಲು ರಕ್ಷಣಾ ತಂಡ ಮುಂದಾಗಿದೆ. ಕೊನೆಗೆ ಹಾಗೂಹೀಗೂ ಆತನನ್ನು ಕೆಳಕ್ಕೆ ಇಳಿಸುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಉಪನಗರ ಠಾಣೆ ಹಾಗೂ ಶಹರ ಠಾಣೆ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಆದರೆ, ಈತ ಯಾವ ಕಾರಣಕ್ಕಾಗಿ ಮೊಬೈಲ್ ಟವರ್ ಏರಿ ಕುಳಿತಿದ್ದ ಎಂಬ ಅಂಶ ಇನ್ನೂ ಗೊತ್ತಾಗಿಲ್ಲ. ಈತನನ್ನು ವಶಕ್ಕೆ ಪಡೆದಿರುವ ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | Prajadhwani : ಲಂಚ, ಲಂಚ, ಲಂಚ ಅಂತ ವಿಧಾನಸೌಧದ ಗೋಡೆಗಳು ಪಿಸುಗುಟ್ಟುತ್ತಿವೆ: ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ