ಕಲಬುರಗಿ: ದೇವರು ನಿಜವಾಗಿಯೂ ಇದ್ದಾನೋ, ಅದು ಬರೀ ನಮ್ಮ ಕಲ್ಪನೆಯೋ ಎಂಬ ಚರ್ಚೆಗಳ ಮಧ್ಯೆಯೂ ದೈವವನ್ನು ನಂಬಿ, ಪೂಜಿಸುವವರ ಸಂಖ್ಯೆಯೇ ದೊಡ್ಡದಿದೆ. ಹಿಂದೆಲ್ಲ ದೇವ/ದೇವತೆಗಳು ಪ್ರತ್ಯಕ್ಷರಾಗಿ ಕೇಳಿದ ವರ ಕೊಡುತ್ತಿದ್ದರಂತೆ, ಜತೆಗಿದ್ದು ಕಾಯುತ್ತಿದ್ದರಂತೆ. ಆದರೆ ಕಲಿಯುಗದ ಜನರಿಗೆ ದೇವರನ್ನು ಪ್ರತ್ಯಕ್ಷವಾಗಿ ನೋಡುವ ಭಾಗ್ಯವೇನೂ ಇಲ್ಲ. ಆದರೆ ಜತೆಗೆ ದೇವರಿದ್ದಾನೆ ಎಂಬ ನಂಬಿಕೆಯಿಂದ ಬದುಕುತ್ತಿರುವವರು ಅದೆಷ್ಟೋ ಸಂದರ್ಭಗಳಲ್ಲಿ ದೈವದ ಅನುಭೂತಿ ಪಡೆದಿರುತ್ತಾರೆ. ಕಾಪಾಡಿದ್ದು ದೇವರು, ದೇವರನ್ನು ನಂಬಿದ್ದಕ್ಕೆ ಸಾರ್ಥಕವಾಯ್ತು ಎಂಬಂಥ ಮಾತುಗಳನ್ನು ನಾವು ಒಬ್ಬರಲ್ಲ ಒಬ್ಬರ ಬಾಯಿಂದ ಕೇಳುತ್ತಿರುತ್ತೇವೆ.
ಇಷ್ಟೆಲ್ಲ ಪೀಠಿಕೆ ಯಾಕೆಂದರೆ ಇದೀಗ ಕಲಬುರಗಿಯಲ್ಲಿ ನಡೆದ ಒಂದು ವಿಸ್ಮಯವನ್ನು ನಾವಿಲ್ಲಿ ತಿಳಿಸುತ್ತಿದ್ದೇವೆ. ಚಂಡಿಕಾ ಹೋಮ ನಡೆಯುತ್ತಿದ್ದ ವೇಳೆ, ಹೋಮಕುಂಡದಲ್ಲಿ ಉರಿಯುತ್ತಿದ್ದ ಬೆಂಕಿಯಲ್ಲಿ ಸಾಕ್ಷಾತ್ ದೇವಿ ಅಂಬಾ ಭವಾನಿ ಕಾಣಿಸಿಕೊಂಡಿದ್ದಾಗಿ ಹೇಳಲಾಗುತ್ತಿದೆ. ಅಂದರೆ ಹುಲಿಯ ಮೇಲೆ ಕುಳಿತ ದುರ್ಗಾ ಮಾತೆಯ ಚಿತ್ರ ಚಂಡಿಕಾ ಹವನದ ಉರಿವ ಬೆಂಕಿಯಲ್ಲಿ ಮೂಡಿದಂತೆ ಕಂಡುಬಂದಿದೆ. ಆ ಫೋಟೋ ಸಿಕ್ಕಾಪಟೆ ವೈರಲ್ ಆಗುತ್ತಿದೆ.
ಕಲಬುರಗಿಯ ಸನ್ನತಿ ಶ್ರೀ ಚಂದ್ರಲಾಂಬೆ ದೇಗುಲದಲ್ಲಿ, ಲೋಕಕಲ್ಯಾಣಾರ್ಥವಾಗಿ ಚಂಡಿಕಾ ಹೋಮ ನಡೆಯುತ್ತಿತ್ತು. ಶೇಷಾದ್ರಿಪುರ ಸದ್ಗುರು ಸಂಸ್ಕೃತ ವೇದಪಾಠೆ ಶಾಲೆಯ ವಿದ್ವಾಂಸ ಅಗಡಿ ಆನಂದನವನ ಶಂಕರ್ಭಟ್ ಶ್ರೀಗಳು, ಸನ್ನತಿ ದೇಗುಲದ ಅರ್ಚಕರ ಗೋಪಾಲಭಟ್ ನೇತೃತ್ವದಲ್ಲಿ ಈ ಹೋಮ, ಪೂಜೆ ನಡೆಯುತ್ತಿತ್ತು. ಪೂರ್ಣಾಹುತಿ ಹೊತ್ತಲ್ಲಿ ಹೀಗೆ ಬೆಂಕಿಯಲ್ಲಿ ದೇವಿ ಚಿತ್ರ ಕಾಣಿಸಿಕೊಂಡಿದ್ದು ಈಗ ಎಲ್ಲರ ಬಾಯಲ್ಲಿ ಚರ್ಚೆಯಾಗುತ್ತಿದೆ. ಆ ದೇವಿ ಸಂತಪ್ತಳಾಗಿ ದರ್ಶನ ಕೊಟ್ಟಳು ಎಂದು ಭಕ್ತರು ಹೇಳುತ್ತಿದ್ದಾರೆ. ಇದು ಅವರ ನಂಬಿಕೆಯಲ್ಲದೆ ಇನ್ನೇನು?
ಇದನ್ನೂ ಓದಿ: Rishab Shetty: ಪಂಜುರ್ಲಿ ದೈವದ ಆಶೀರ್ವಾದ ಪಡೆದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ