Site icon Vistara News

Rain News | ತುಂಗೆಯಲ್ಲಿ ತೇಲಿ ಬರುತ್ತಿವೆ ಸಾಗುವಾನಿ; ಪುಷ್ಪ ಸಿನಿಮಾ ಸ್ಟೈಲ್‌ನಲ್ಲಿ ಅಕ್ರಮ ಸಾಗಣೆ!

ತುಂಡುಗಳು

ಶಿವಮೊಗ್ಗ: ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಯಲ್ಲಿ ರಕ್ತಚಂದನ ತುಂಡುಗಳನ್ನು ತೇಲಿ ಬಿಟ್ಟು, ಆನಂತರ ಅವುಗಳನ್ನು ಅಕ್ರಮ ಸಾಗಣೆ ಮಾಡುವ ದೃಶ್ಯವನ್ನು ನಾವು ತೆಲುಗಿನ ಪುಷ್ಪ ಸಿನಿಮಾದಲ್ಲಿ ನೋಡಿದ್ದೇವೆ. ಅದೇ ತುಂಗಾ ನದಿ ಹಿನ್ನೀರಿನಲ್ಲಿ ಸಾಗುವಾನಿ ಮರದ ತುಂಡುಗಳು ತೇಲಿಬರುವ ದೃಶ್ಯಾವಳಿ ಜಿಲ್ಲೆಯಲ್ಲಿ ಕಂಡುಬಂದಿದೆ.

ಸತತ ಮಳೆ ಹಿನ್ನೆಲೆಯಲ್ಲಿ ತುಂಗಾನದಿಯಲ್ಲಿ ಭಾರಿ ಪ್ರಮಾಣದ ನೀರು ಹರಿಯುತ್ತಿದೆ. ಈ ನಡುವೆ ತುಂಗಾ ಡ್ಯಾಂನಿಂದ ಹರಿಯುತ್ತಿರುವ ನೀರಿನಲ್ಲಿ ಗರಗಸದಿಂದ ಕತ್ತರಿಸಲ್ಪಟ್ಟ ಸಾಗುವಾನಿ ಮರದ ತುಂಡುಗಳು ತೇಲಿ ಬಂದಿವೆ. ಇದನ್ನು ಗಮಿಸಿದರೆ ಸಾಗುವಾನಿ ಮರಗಳ ಅಕ್ರಮ ಸಾಗಾಟ ನಡೆಯುತ್ತಿದೆಯೇ ಎಂಬ ಅನುಮಾನ ಮೂಡುತ್ತದೆ. ಕಾರಣ, ಸಾಗಾಟಕ್ಕೆ ಅನುಕೂಲವಾಗುವಂತೆ ಅಳತೆ, ಗಾತ್ರದ ಲೆಕ್ಕಾಚಾರಗಳಲ್ಲಿ ತುಂಡುಗಳನ್ನು ಕತ್ತರಿಸಲಾಗಿದೆ. ಹೀಗೆ ನೀರಿನಲ್ಲಿ ತೇಲಿ ಬರುತ್ತಿರುವ ವಿಡಿಯೊ ವೈರಲ್‌ ಆಗಿದ್ದರೂ ಸಹ ಅರಣ್ಯ ಇಲಾಖೆ ಮಾತ್ರ ನಿರ್ಲಕ್ಷ್ಯ ವಹಿಸಿದೆ.

ಪುಷ್ಪ ಸಿನಿಮಾದಲ್ಲಿ ರಕ್ತ ಚಂದನ ತುಂಡುಗಳ ಅಕ್ರಮ ದಸ್ತಾನಿನ ಮೇಲೆ ಪೊಲೀಸರು ದಾಳಿ ಮಾಡಿದಾಗ ನಾಯಕ ನಟ ಮರದ ತುಂಡುಗಳನ್ನು ಸಾಗಿಸಲು ನದಿ ಮಾರ್ಗವನ್ನು ಬಳಸಿಕೊಳ್ಳುತ್ತಾನೆ. ಮೊದಲು ನದಿಯಲ್ಲಿ ಮರದ ತುಂಡುಗಳನ್ನು ತೇಲಿಬಿಟ್ಟು ನಂತರ ಡ್ಯಾಂ ಕ್ರೆಸ್ಟ್‌ ಗೇಟ್‌ಗಳನ್ನು ಮುಚ್ಚುವಂತೆ ಇಂಜಿನಿಯರ್‌ಗೆ ಹೇಳಿ ತನ್ನ ಮಾಲನ್ನು ಉಳಿಸಿಕೊಳ್ಳುವುದು ಆ ಸಿನಿಮಾದ ಹೈಲೈಟ್‌ ಆಗಿದೆ.

ಇದನ್ನೂ ಓದಿ | ಮಳೆಗೆ ಸಂಪೂರ್ಣ ಮನೆ ಹಾನಿಯಾದರೆ ₹5 ಲಕ್ಷ, ಭಾಗಶಃ ಹಾನಿಯಾದರೆ ₹50 ಸಾವಿರ ಪರಿಹಾರ: ಸಚಿವ ಆರ್‌.ಅಶೋಕ್‌

ಅದೇ ರೀತಿ ತುಂಗಾನದಿ ಹಿನ್ನೀರಿನಲ್ಲಿ ಸಾಗುವಾನಿ ಮರದ ತುಂಡುಗಳು ತೇಲಿ ಬರುವುದನ್ನು ಕಂಡರೆ ಪುಷ್ಪ ಸಿನಿಮಾಗಿಂತ ಮೊದಲೇ ಮಂಡಗದ್ದೆ ಟಿಂಬರ್ ಮಾಫಿಯಾ ಮರಗಳ ಅಕ್ರಮ ಸಾಗಾಟಕ್ಕೆ ತುಂಗಾ ನದಿಯನ್ನು ಅವಲಂಬಿಸಿತ್ತು. ಶಿವಮೊಗ್ಗ-ತೀರ್ಥಹಳ್ಳಿ ಮಾರ್ಗಮಧ್ಯೆ ಬರುವ ಮಂಡಗದ್ದೆ ದಶಕಗಳ ಹಿಂದೆ ಟಿಂಬರ್ ಮಾಫಿಯಾಗೆ ಕುಖ್ಯಾತಿ ಪಡೆದಿತ್ತು.

ಮಂಡಗದ್ದೆಯಲ್ಲಿ ಸಾಗುವಾನಿ ಪ್ಲಾಂಟೇಷನ್ ಇದ್ದು, ಇಲ್ಲಿ ಅಪಾರ ಪ್ರಮಾಣದ ಸಾಗುವಾನಿ, ಬೀಟೆ ಮರಗಳು ಬೆಳೆದುನಿಂತಿವೆ. ಹೀಗಾಗಿ ಇಲ್ಲಿ ಮರದ ತುಂಡುಗಳನ್ನು ತುಂಗಾನದಿಯಲ್ಲಿ ತೇಲಿಬಿಟ್ಟು, ಶಿವಮೊಗ್ಗದ ಮಂಡ್ಲಿ ಬಳಿ ಹಿಡಿಯುವ ಪರಿಪಾಠ ಇತ್ತು ಎಂದು ನಿವೃತ್ತ ಅಧಿಕಾರಿಗಳು ಹೇಳುತ್ತಾರೆ.

ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಮಂಡಗದ್ದೆಯ ಕಾಡನ್ನು ಹಿನ್ನೀರು ಆಪೋಷಣೆ ಪಡೆದುಕೊಂಡಿದ್ದು, ಕೋಟ್ಯಂತರ ಮೌಲ್ಯದ ಮರಗಳು ಹಿನ್ನೀರಿಗೆ ಸಿಲುಕಿ ಒಣಗಿ ಹೋಗಿವೆ. ಇದರಲ್ಲಿ ಸಾಗುವಾನಿ, ಬೀಟೆ ಮತ್ತಿತರ ಮರಗಳು ಇವೆ ಎನ್ನಲಾಗಿದ್ದು, ಈ ಮರದ ತುಂಡುಗಳನ್ನು ಮಳೆಗಾಲದಲ್ಲಿ ಪ್ರಾಣದ ಹಂಗು ತೊರೆದು ದಡಕ್ಕೆ ಸೇರಿಸುವ ತಂಡವೊಂದು ಸದ್ದಿಲ್ಲದೆ ಕೆಲಸ ಮಾಡುತ್ತಿದೆ ಎನ್ನಲಾಗಿದೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಇದಕ್ಕೆ ಅಷ್ಟೇನೂ ಪ್ರಾಮುಖ್ಯತೆ ಕೊಡದೆ, ಸ್ವಾಭಾವಿಕವಾಗಿ ಮರದ ತುಂಡುಗಳು ನದಿ ನೀರಿನಲ್ಲಿ ತೇಲಿಬರುತ್ತಿವೆ ಎಂದು ಹೇಳುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ.

ಇದನ್ನೂ ಓದಿ | Rain News | ನಿಲ್ಲದ ಧಾರಾಕಾರ ಮಳೆ; ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ, ನೂರಾರು ಎಕರೆ ಬೆಳೆ ಜಲಾವೃತ

Exit mobile version