Site icon Vistara News

Pig attack : ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಬಂದವರ ಮೇಲೆ ಹಂದಿ ದಾಳಿ, ಆಹಾರಕ್ಕಾಗಿ ಆಕ್ರಮಣ

ಚಾಮರಾಜನಗರ ಹಂದಿ ದಾಳಿ

#image_title

ಚಾಮರಾಜನಗರ: ಹುಲಿ, ಚಿರತೆ, ಆನೆ, ಕರಡಿ, ತೋಳ, ಮಂಗ ಆಯ್ತು… ಈಗ ಹಂದಿಗಳು ಕೂಡಾ ಮನುಷ್ಯನ ಮೇಲೆ ದಾಳಿ (Pig attack) ಮಾಡಲು ಆರಂಭ ಮಾಡಿವೆ. ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯಲ್ಲಿ ಬರುತ್ತಿರುವ ಭಕ್ತರಿಗೆ ಹಂದಿ ಕಾಟ ಜೋರಾಗಿದೆ.

ಕಾಲ್ನಡಿಗೆಯಲ್ಲಿ ಬಂದು ವಿಶ್ರಾಂತಿಗಾಗಿ ರಾತ್ರಿ ಮಲಗಿರುವವರ ಮೇಲೆ ಹಂದಿಗಳ ದಾಳಿ ಮಾಡಿದ್ದು, ಆತಂಕ ಮೂಡಿಸಿದೆ.

ಬಸ್‌ ನಿಲ್ದಾಣದಲ್ಲಿ ಮಲಗಿದವರ ಮೇಲೆ ದಾಳಿ

ಮಲೆಮಹದೇಶ್ವರ ಬೆಟ್ಟಕ್ಕೆ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಭಕ್ತರು ಪಾದಯಾತ್ರೆ ಮೂಲಕ ಬರುವುದು ಒಂದು ಸಂಪ್ರದಾಯವಾಗಿದೆ. ರಾಜ್ಯದಿಂದ ಮಾತ್ರವಲ್ಲ, ತಮಿಳುನಾಡಿನಿಂದಲೂ ಜನರು ಬರುತ್ತಾರೆ. ಹೀಗೆ ಬರುವವರಲ್ಲಿ ಹೆಚ್ಚಿನವರಿಗೆ ಛತ್ರ ಮತ್ತಿತರ ವ್ಯವಸ್ಥೆಗಳು ಇರುವುದಿಲ್ಲ. ಹಾಗಾಗಿ ಅವರೆಲ್ಲ ಮಲೆಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದಲ್ಲಿ ಮಲಗುತ್ತಿದ್ದಾರೆ. ಈ ವೇಳೆ ಆಹಾರಕ್ಕಾಗಿ ಮನುಷ್ಯರ ಮೇಲೆ ಹಂದಿಗಳು ದಾಳಿ ನಡೆಸಿವೆ.

ಎರಡು ದಿನದ ಹಿಂದೆ ಇಲ್ಲಿನ ಬಸ್‌ ನಿಲ್ದಾಣದಲ್ಲಿ ಮಲಗಿದ್ದವರ ಮೇಲೆ ಹಂದಿಗಳು ದಾಳಿ ನಡೆಸಿವೆ. ತಮಿಳುನಾಡು ಮೂಲದ ಭಕ್ತನಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಊರಿಗೆ ವಾಪಸ್‌ ಕಳುಹಿಸಬೇಕಾಯಿತು. ಕಳೆದ ವರ್ಷವೂ ಹಂದಿಗಳು ನಾಲ್ಕು ವರ್ಷದ ಬಾಲಕಿಯನ್ನು ತಿವಿದು ಗಾಯಗೊಳಿಸಿದ್ದವು.

ಹಂದಿಗಳು ಮನುಷ್ಯರ ಮೇಲೆ ದಾಳಿ ಮಾಡುವುದು ಮಾತ್ರವಲ್ಲದೆ, ಅವರ ಬಳಿ ಇರುವ ಆಹಾರ ಮತ್ತಿತರ ವಸ್ತುಗಳನ್ನು ಎಳೆದು ಹಾಳು ಮಾಡುತ್ತಿವೆ. ಸಮಸ್ಯೆಯ ಗಂಭೀರತೆ ಅರಿವಿದ್ದರೂ ಹಂದಿ ಉಪಟಳ ತಡೆಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಭಕ್ತರು ಮತ್ತು ಊರಿನವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪಾದಯಾತ್ರಿಗಳು

ಹಂದಿಗಳಿಂದಾಗಿ ಊರಿನ ವಾತಾವರಣವೂ ಹಾಳಾಗಿದೆ, ಅಪಘಾತಗಳು ನಡೆಯುತ್ತಿವೆ, ಜನರ ಓಡಾಟಕ್ಕೂ ತೊಂದರೆಯಾಗಿದೆ ಎನ್ನುವುದು ಸಾರ್ವಜನಿಕರ ದೂರು. ಜಿಲ್ಲಾಡಳಿತ, ಮ.ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರ ಈ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದೆ ಎಂದೂ ಆರೋಪಿಸಲಾಗಿದೆ.

ಇದನ್ನೂ ಓದಿ : Wolf attack : ಎಲ್ಲಾ ಆಯ್ತು, ಈಗ ತೋಳ: ಗದ್ದೆಯಲ್ಲಿದ್ದ ಹಿಂಡಿನ ಮೇಲೆ ತಡರಾತ್ರಿ ತೋಳ ದಾಳಿ, 25 ಕುರಿಗಳು ಸ್ಥಳದಲ್ಲೇ ಸಾವು

Exit mobile version