ಬೆಂಗಳೂರು: ಈಗಾಗಲೇ ಬಳಕೆಯಲ್ಲಿ ಇರುವ ಮರುಬಳಕೆ ಮಾಡಲಾಗದ 21 ವಿಧದ ಪ್ಲಾಸ್ಟಿಕ್ (Plastic Ban) ಅನ್ನು ಸಂಪೂರ್ಣ ನಿಷೇಧ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ. ಶಾಂತ ತಿಮ್ಮಯ್ಯ ಹೇಳಿದ್ದಾರೆ.
ಎನ್‌ಜಿಒ ಮತ್ತು ಪರಿಸರ ಕಾರ್ಯಕರ್ತರ ಸಮಾನ ಮನಸ್ಕರನ್ನು ಒಗ್ಗೂಡಿಸಲು ‘ಪರ್ಯಾವರಣ ಸಂರಕ್ಷಣಾ ಗತಿವಿಧಿ’ ಕರ್ನಾಟಕ ದಕ್ಷಿಣ ಪ್ರಾಂತವು ಬೆಂಗಳೂರಿನ ಯುವಪಥ್‌ನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು. ಪರಿಸರ ಕಾಳಜಿ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಹುಟ್ಟಬೇಕು. ಕಾನೂನಿನ ಹೊರತಾಗಿಯೂ ವೈಯಕ್ತಿಕವಾಗಿ ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿ ಎಂದು ತಿಳಿಯಬೇಕು ಎಂದರು.
ಎನ್‌ಜಿಒ ಕಾರ್ಯಕರ್ತೆ ರೇಷ್ಮಾ ಮಾತನಾಡಿ, ಈ ಸಮಾವೇಶ ತುಂಬಾ ಮಾಹಿತಿಯುಕ್ತವಾಗಿತ್ತು. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಇದು ತಲುಪಬೇಕು. ಆ ನಿಟ್ಟಿನಲ್ಲಿ ನಾವು ಕೈಜೋಡಿಸಲು ಸಿದ್ಧರಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಸಮರ್ಥ ಭಾರತದ ನಿರ್ದೇಶಕ ತಿಪ್ಪೇಸ್ವಾಮಿ, ಅಖಿಲಭಾರತ ಪರ್ಯಾವರಣ ಸಂಯೋಜಕರಾದ ಗೋಪಾಲ್ ಆರ್ಯಾಜಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಏರ್ಪಡಿಸಿದ್ದ ದಿನನಿತ್ಯ ಬಳಕೆಯ ಪರಿಸರಸ್ನೇಹಿ ವಸ್ತುಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಸಮಾವೇಶದಲ್ಲಿ 106 ಸ್ವಯಂ ಸೇವಾ ಸಂಸ್ಥೆಗಳು ಭಾಗವಹಿಸಿದ್ದವು. ಪರಿಸರ ಸಂರಕ್ಷಣೆಗೆ ಜನರನ್ನು ತಲುಪಲು ನಾವೂ ಕೈ ಜೋಡಿಸುತ್ತೇವೆ ಎಂದು ಎನ್‌ಜಿಒಗಳು ಈ ಸಂದರ್ಭದಲ್ಲಿ ಸಂಕಲ್ಪ ಮಾಡಿದವು.
‘ಪರಿಸರಕ್ಕಾಗಿ ಪರಸ್ಪರ ಸಹಕಾರʼ ಎನ್ನುವ ಪರಿಕಲ್ಪನೆಯಲ್ಲಿ ಆಯೋಜಿಸಿದ್ದ ಈ ಸಮಾವೇಶದಲ್ಲಿ ವೈಯಕ್ತಿಕ, ಸಾಮೂಹಿಕ, ಉದ್ಯೋಗ ಕ್ಷೇತ್ರ ಗಳಲ್ಲಿ ‘ಹರಿತ್ ಘರ್’ ಅಂಶವನ್ನು ಅಳವಡಿಸಿಕೊಳ್ಳುವ ನಿರ್ಧಾರ ಕೈಗೊಳ್ಳಲಾಯಿತು. ಜಲ-ವೃಕ್ಷ-ಜೀವ ವೈವಿಧ್ಯ ರಕ್ಷಣೆ, ಇಂಧನದ ಮಿತವ್ಯಯ ಮತ್ತು ಮರುಬಳಕೆಯಾಗದ ಪ್ಲಾಸ್ಟಿಕ್ ಬಳಕೆ ತಡೆಗಟ್ಟುವುದು ‘ಹರಿತ್ ಘರ್’ ಪರಿಕಲ್ಪನೆಯ ಧ್ಯೇಯವಾಗಿದ್ದು, ಎನ್‌ಜಿಒಗಳ ಸಹಕಾರದೊಂದಿಗೆ ಇದನ್ನು ದೇಶಮಟ್ಟದಲ್ಲಿ ಜಾರಿಗೆ ತರುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಇದನ್ನೂ ಓದಿ | Plastic Ban | ಹುಬ್ಬಳ್ಳಿಯಲ್ಲಿ ಆಗಿಲ್ಲ ಪ್ಲಾಸ್ಟಿಕ್ ಬ್ಯಾನ್; ನಡೆಯುತ್ತಿದೆ ಅಂತಾರಾಜ್ಯ ಕೊರಿಯರ್ ಪ್ಲ್ಯಾನ್!