ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ “ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ನಿಧಿಯ (PM Kisan) 12ನೇ ಕಂತಿನ ಹಣವನ್ನು ಸೋಮವಾರ (ಅ.೧೭) ಪ್ರಧಾನಿ ನರೇಂದ್ರ ಮೋದಿಯವರು ಬಿಡುಗಡೆ ಮಾಡಲಿದ್ದಾರೆ. ರೈತರ ಖಾತೆಗೆ ನೇರವಾಗಿ 2,000 ರೂ. ಹಣ ಸಂದಾಯವಾಗಲಿದ್ದು, ಇದು ಕೇಂದ್ರ ಸರ್ಕಾರ ರೈತರಿಗೆ ನೀಡುತ್ತಿರುವ ದೀಪಾವಳಿ ಗಿಫ್ಟ್!
16,000 ಕೋಟಿ ರೂ.ಗಳನ್ನು ಈ ಯೋಜನೆಯ ಫಲಾನುಭವಿಗಳಿಗೆ ಹಂಚಲಾಗುತ್ತದೆ. ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಗಳ ಖಾತೆಗೆ ಹಣ ಸಂದಾಯವಾಗಲಿದೆ. ಈ ವಿಷಯವನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ತಿಳಿಸಿದ್ದಾರೆ.
ಸೋಮವಾರದಿಂದ ಎರಡು ದಿನಗಳ ಕಾಲ ʼಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನ-2022ʼ ನಡೆಯಲಿದ್ದು, ಇದನ್ನು ಉದ್ಘಾಟಿಸಲಿರುವ ಪ್ರಧಾನಿ ನರೇಂದ್ರ ಮೋದಿ ಕಿಸಾನ್ ಸಮ್ಮಾನ್ ಹಣ ವರ್ಗಾವಣೆಗೆ ಚಾಲನೆ ನೀಡಲಿದ್ದಾರೆ. ಅಲ್ಲದೆ ಇದೇ ಸಂರ್ಭದಲ್ಲಿ ರಸಗೊಬ್ಬರ ಖಾತೆಯು ರಸಗೊಬ್ಬರ ತಯಾರಿಕಾ ಸಂಸ್ಥೆಗಳ ಸಹಯೋಗದಲ್ಲಿ ಆರಂಭಿಸುತ್ತಿರುವ 600ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳನ್ನೂ ಉದ್ಘಾಟಿಸಲಿದ್ದಾರೆ. ರೈತರೊಂದಿಗೆ ಸಂವಾದವನ್ನೂ ನಡೆಸಲಿದ್ದಾರೆ.
ಇದು ಕೃಷಿ ಸಮ್ಮಾನ್ ನಿಧಿಯ 12ನೇ ಕಂತಿನ ಹಣವಾಗಿದ್ದು, ಕಳೆದ ಆಗಸ್ಟ್‌ನಲ್ಲಿಯೇ ಈ ಕಂತನ್ನು ಬಿಡುಗಡೆ ಮಾಡಬೇಕಿತ್ತು. ಆದರೆ ಕೇಂದ್ರ ಸರ್ಕಾರ ಮುಂದೂಡುತ್ತಾ ಬಂದಿತ್ತು. ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈಗ ಈ ಹಣವನ್ನು ಬಿಡಗಡೆ ಮಾಡಲು ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ದೇಶದ ಸುಮಾರು 8ಕೋಟಿ ರೈತರು ಇದರ ಲಾಭ ಪಡೆಯಲಿದ್ದಾರೆ. ಈ ನಿಧಿಯನ್ನು ಪಡೆಯಬೇಕಾದರೆ ರೈತರು ಇ-ಕೆವೈಸಿ ಮಾಡಿಸಿರಬೇಕಾದದು ಕಡ್ಡಾಯ ಎಂದು ಈಗಾಗಲೇ ಪ್ರಕಟಿಸಲಾಗಿದೆ. ಇ-ಕೆವೈಸಿ ಮಾಡಿಸಿರುವ ರೈತರ ಖಾತೆಗಳಿಗೆ ಮಾತ್ರ ಈ ಬಾರಿ ಹಣ ಸಂದಾಯವಾಗಲಿದೆ.
2019ರಿಂದ ಜಾರಿಗೆ ಬಂದಿರುವ ಈ ಯೋಜನೆಯಲ್ಲಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ ತಲಾ 2 ಸಾವಿರ ರೂ.ನಂತೆ ವರ್ಷಕ್ಕೆ 6 ಸಾವಿರ ರೂ., ಸಹಾಯಧನ ನೀಡಲಾಗುತ್ತದೆ. ಇದರ ಜತೆಗೆ ರಾಜ್ಯ ಸರಕಾರವೂ 4 ಸಾವಿರ ರೂ. ನೀಡುತ್ತಿದ್ದು, ರೈತರಿಗೆ ವರ್ಷಕ್ಕೆ ಒಟ್ಟು 10 ಸಾವಿರ ರೂ. ಸಹಾಯಧನ ದೊರೆಯುತ್ತಿದೆ. ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಈ ಸಹಾಯಧನವನ್ನು ಸಂದಾಯ ಮಾಡಲಾಗುತ್ತದೆ.
ಈ ಯೋಜನೆ ಕುರಿತ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ | https://pmkisan.gov.in/
ರಾಜ್ಯದಲ್ಲಿ ಪಿಎಂ ಕಿಸಾನ್ ಯೋಜನೆಗೆ ಒಟ್ಟು 58,42,644 ಫಲಾನುಭವಿ ರೈತರಿದ್ದಾರೆ. ಇದರಲ್ಲಿ ಶೇ.90ರಷ್ಟು ರೈತರು ಈಗಾಗಲೇ ಈ-ಕೆವೈಸಿ ಮಾಡಿಸಿದ್ದಾರೆಂದು ಅಂದಾಜಿಸಲಾಗಿದೆ.
ಒಂದು ದೇಶ ಒಂದು ರಸಗೊಬ್ಬರ ಯೋಜನೆಗೆ ಚಾಲನೆ
ದೇಶದಲ್ಲಿ ಮಾರಾಟವಾಗುವ ರಸಗೊಬ್ಬರ ಬ್ರಾಂಡ್‌ಗಳ ನಡುವೆ ಏಕರೂಪತೆಯನ್ನು ತರಲು “ಭಾರತ್ʼ ಹೆಸರಿನಲ್ಲಿಯೇ (Bharat brand) ಮಾರಾಟ ಮಾಡುವಂತೆ ಕೇಂದ್ರ ಸರ್ಕಾರ ಎಲ್ಲ ರಸಗೊಬ್ಬರ ಕಂಪನಿಗಳಿಗೆ ಈಗಾಗಲೇ ಸೂಚಿಸಿದೆ. “ಒಂದು ದೇಶ ಒಂದು ರಸಗೊಬ್ಬರʼʼ (ONOF) ಈ ಕಾರ್ಯಕ್ರಮವನ್ನು ಸೋಮವಾರದಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಅಕ್ಟೋಬರ್ 2ರಿಂದ ಈ ಯೋಜನೆ ಅಧಿಕೃತವಾಗಿ ಜಾರಿಗೆ ಬರಲಿದೆ. ಇನ್ನು ಮುಂದೆ ಯೂರಿಯಾ, ಡಿಎಪಿ, ಎಂಒಪಿ ಅಥವಾ ಎನ್‌ಪಿಕೆ ರಸಗೊಬ್ಬರ ಚೀಲಗಳು ಭಾರತ್ ಯೂರಿಯಾ, ಭಾರತ್ ಡಿಎಪಿ, ಭಾರತ್ ಎಂಒಪಿ, ಭಾರತ್ ಎನ್‌ಪಿಕೆ ಹೆಸರಿನಡಿಯಲ್ಲಿ ಮಾರಾಟವಾಗಲಿದೆ. ಸಾರ್ವಜನಿಕ, ಖಾಸಗಿ ಎನ್ನದೆ ಎಲ್ಲ ರಸಗೊಬ್ಬರ ಕಂಪನಿಗಳಿಗೂ ಇದು ಅನ್ವಯವಾಗಲಿದೆ. ಒಂದೇ ಬ್ರಾಂಡ್ ಹೆಸರು ಮತ್ತು ಪ್ರಧಾನ ಮಂತ್ರಿ ಭಾರತೀಯ ಜಾನುವಾರಕ್ ಪರಿಯೋಜನಾ (ಪಿಎಂಬಿಜೆಪಿ) ಲೋಗೊ ಇರಬೇಕೆಂದು ಸೂಚಿಸಲಾಗಿದೆ.
ಯಾಕೆ ಇ-ಕೆವೈಸಿ ಕಡ್ಡಾಯ?
ಯೋಜನೆಯ ನಿಯಮಗಳ ಪ್ರಕಾರ ತೆರಿಗೆ ಪಾವತಿಸುವವರು, ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರಿಯಲ್ಲಿರುವ ಸದಸ್ಯರನ್ನು ಹೊಂದಿರುವ ರೈತ ಕುಟುಂಬ ಈ ಯೋಜನೆಯ ಲಾಭ ಪಡೆಯುವಂತಿಲ್ಲ. ಆದರೆ ಅನೇಕ ರೈತರು ಈ ಬಗ್ಗೆ ಮಾಹಿತಿ ಇಲ್ಲದೆ, ಹಣ ಪಡೆದು, ಕೊನೆಗೆ ಹಿಂದಿರುಗಿಸಿದ್ದರು. ಹೀಗಾಗಿ ಈ ಬಗ್ಗೆ ನಿಖರ ಮಾಹಿತಿ ಪಡೆಯಲು ಸರ್ಕಾರ ಉದ್ದೇಶಿಸಿದೆ. ಅಲ್ಲದೆ, ಈಗಾಗಲೇ ಈ ಯೋಜನೆ ಪ್ರಾರಂಭವಾಗಿ ಮೂರು ವರ್ಷಗಳಾಗಿದ್ದು, ಅನೇಕ ರೈತರು ಮೃತಪಟ್ಟಿದ್ದಾರೆ, ಇಲ್ಲವೇ ಜಮೀನು ಮಾರಾಟ ಮಾಡಿದ್ದಾರೆ. ಈ ಬಗ್ಗೆಯೂ ಸರಿಯಾದ ಮಾಹಿತಿ ಸಂಗ್ರಹಿಸಿಕೊಂಡು ಅರ್ಹ ರೈತರಿಗೆ ಮಾತ್ರ ಸಹಾಯಧನ ನೀಡಲು ಕೇಂದ್ರ ಸರ್ಕಾರವು ಇ-ಕೆವೈಸಿ ಮಾಡಿಸುವುದನ್ನು ಕಡ್ಡಾಯಗೊಳಿಸಿದೆ.
ಸಹಾಯವಾಣಿ ಸಂಖ್ಯೆ: 155261 / 011-24300606
ಇದನ್ನೂ ಓದಿ| Cabinet decision | ಅಲ್ಪಾವಧಿಯ ಕೃಷಿ ಸಾಲಕ್ಕೆ 1.5% ಬಡ್ಡಿ ರಿಯಾಯಿತಿಗೆ ಸಂಪುಟ ಒಪ್ಪಿಗೆ