ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ (PM Modi in Karnataka) ಕಾಂಗ್ರೆಸ್ ಅವರ ಡಬಲ್ ಎಂಜಿನ್ ಸರ್ಕಾರ, ಭ್ರಷ್ಟಾಚಾರರಹಿತ ಸರ್ಕಾರದ ಹೇಳಿಕೆಗಳನ್ನು ಉಲ್ಲೇಖಿಸಿ ಗೇಲಿ ಮಾಡಿದೆ.
ʻಮೋದಿ ಗ್ಯಾರಂಟಿʼ ಎಂಬ ಹ್ಯಾಷ್ ಟ್ಯಾಗ್‌ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ರಾಜ್ಯದಲ್ಲಿ ನಡೆಯುವ ವರ್ಗಾವಣೆ ದಂಧೆ, ನೇಮಕಾತಿ ಹಗರಣಗಳು, ಕಮಿಷನ್ ದಂಧೆಯ ಬಗ್ಗೆ ಯಾವ ಕಾರಣಕ್ಕೂ ಮಾತನಾಡುವುದಿಲ್ಲ ಎಂದು ಮೋದಿ ಗ್ಯಾರಂಟಿ ಕೊಡುತ್ತಿದ್ದಾರೆ, ಎಂದು ಗೇಲಿ ಮಾಡಿದೆ.
– ರಾಜ್ಯ ಸರ್ಕಾರದಲ್ಲಿ ವರ್ಗಾವಣೆ ದಂಧೆ ಎಗ್ಗಿಲ್ಲದೆ ಸಾಗಿದೆ. ಹುದ್ದೆಗಳಿಗೆ, ಆಯಕಟ್ಟಿನ ಸ್ಥಳಗಳಿಗೆ ಇಂತಿಷ್ಟು ಎಂದು ರೇಟ್ ಕಾರ್ಡ್ ಫಿಕ್ಸಾಗಿದೆ. ಆದರೆ ರಾಜ್ಯಕ್ಕೆ ಆಗಮಿಸಿರುವ ಮೋದಿಯವರು ತಮ್ಮ ಡಬಲ್ ಎಂಜಿನ್ ಸರ್ಕಾರದ ವರ್ಗಾವಣೆ ದಂಧೆಯ ಬಗ್ಗೆ ಎಂದಿಗೂ ಮಾತನಾಡುವುದಿಲ್ಲ. ಆರೋಪಗಳಿಗೆ ಉತ್ತರಿಸುವುದಿಲ್ಲ. ಇದು #Modi_ಗ್ಯಾರಂಟಿ.
– ಕರ್ನಾಟಕದಲ್ಲಿ ವಿವಿಧ ಹುದ್ದೆಗಳಿಗೆ ನಡೆದ ನೇಮಕಾತಿಗಳಲ್ಲಿ ಸಾಲು ಸಾಲಾಗಿ ಹಗರಣಗಳು ನಡೆದಿದ್ದು ಹುದ್ದೆಗಳಿಗೆ ತಕ್ಕಂತೆ 80 ಲಕ್ಷ, 70 ಲಕ್ಷ, 50 ಲಕ್ಷ, 1 ಕೋಟಿವರೆಗೂ ಫಿಕ್ಸ್ ಆಗಿದೆ. ಆದರೆ ವರ್ಷಕ್ಕೆ 2 ಕೋಟಿ ಉದ್ಯೋಗದ ಭರವಸೆ ನೀಡಿದ್ದ ಪ್ರಧಾನಿಗಳು ಖಂಡಿತ ಈ ಹಗರಣದ ಕುರಿತ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ. #Modi_ಗ್ಯಾರಂಟಿ
-ಕರ್ನಾಟಕದಲ್ಲಿ ಎಷ್ಟು ಪರ್ಸೆಂಟ್ ಕಮಿಷನ್ ಸರ್ಕಾರವಿದೆ ಎಂದು ಯಾರಿಗೆ ಕೇಳಿದರೂ ಥಟ್ ಎಂದು ಉತ್ತರಿಸುತ್ತಾರೆ. ಆದರೆ ನಮಗೆ ಗ್ಯಾರಂಟಿ ಇದೆ. ಈ ಪ್ರಶ್ನೆಗೆ ಡಬಲ್ ಎಂಜಿನ್ ಸರ್ಕಾರದ ಮುಖ್ಯಸ್ಥರಾದ ನಮ್ಮ ಪ್ರಧಾನಿಗಳು ಎಂದಿಗೂ ಉತ್ತರಿಸುವುದಿಲ್ಲ. ಗುತ್ತಿಗೆದಾರರ ಕಮಿಷನ್ ಆರೋಪದ ಬಗ್ಗೆಯೂ ಮಾತನಾಡುವುದಿಲ್ಲ. #Modi_ಗ್ಯಾರಂಟಿ