Site icon Vistara News

ಫೆ.6ಕ್ಕೆ ಬೆಂಗಳೂರಿನಲ್ಲಿ ಮೋದಿ ಕಾರ್ಯಕ್ರಮ; 7ರವರೆಗೆ ಸಂಚಾರ ಬದಲು, ಸರಕು ಸಾಗಣೆ ವಾಹನಗಳಿಗೆ ನಿರ್ಬಂಧ

ಮೋದಿ ಕಾರ್ಯಕ್ರಮ

ಬೆಂಗಳೂರು: ನಗರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಹಮ್ಮಿಕೊಂಡಿರುವ ಇಂಡಿಯಾ ಎನರ್ಜಿ ವೀಕ್ ಕಾರ್ಯಕ್ರಮಕ್ಕೆ ಫೆಬ್ರವರಿ 6 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲಿದ್ದಾರೆ. ಹೀಗಾಗಿ ಬೆಂಗಳೂರು-ತುಮಕೂರು ರಸ್ತೆಯಲ್ಲಿ ವಾಹನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಫೆ.5 ರಿಂದ 7 ರವರೆಗೆ ಮೂರು ದಿನ ನಗರದಲ್ಲಿ ಎಲ್ಲ ರೀತಿಯ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ಇಂಡಿಯಾ ಎನರ್ಜಿ ವೀಕ್ ಕಾರ್ಯಕ್ರಮಕ್ಕೆ ಫೆಬ್ರವರಿ 6 ರಿಂದ 8 ರವರೆಗೆ ನಡೆಯಲಿದೆ. ಈ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮಕ್ಕೆ ದೇಶ, ವಿದೇಶದಿಂದ ಗಣ್ಯರು ಆಗಮಿಸುತ್ತಾರೆ. ಹೀಗಾಗಿ ವಾಹನ ದಟ್ಟಣೆ ನಿಯಂತ್ರಿಸಲು ಬೆಂಗಳೂರು- ತುಮಕೂರು ರಸ್ತೆಯಲ್ಲಿ ವಾಹನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು, ನಗರದಲ್ಲಿ ಫೆ. 5, 6 ಹಾಗೂ 7 ರಂದು ಬೆಂಗಳೂರು ನಗರದೊಳಗೆ ಬರುವ, ಹೋಗುವ ಎಲ್ಲ ರೀತಿಯ ಲಘು, ಮಧ್ಯಮ ಹಾಗೂ ಬಾರಿ ಸರಕು ಸಾಗಣೆ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ.

ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಿರ್ಬಂಧ

ಮೂರು ದಿನ ಸರಕು ಸಾಗಣೆ ವಾಹನಗಳಿಗೆ ಬದಲಿ ಮಾರ್ಗ

1.ತುಮಕೂರು ಕಡೆಯಿಂದ ಬಳ್ಳಾರಿ ರಸ್ತೆ, ಹೈದರಾಬಾದ್ ಕಡೆಗೆ ಸಂಚರಿಸುವ ವಾಹನಗಳು ಡಾಬಸ್ ಪೇಟೆಯಲ್ಲಿ ಎಡ ತಿರುವು ಪಡೆದು ದೊಡ್ಡಬಳ್ಳಾಪುರ ಕಡೆ ಸಂಚರಿಸಬೇಕು.

2.ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಸಂಚರಿಸುವ ವಾಹನಗಳು ಸೊಂಡೆಕೊಪ್ಪ ಕ್ರಾಸ್‌ನಲ್ಲಿ ಬಲ ತಿರುವು ಪಡೆದು ತಾವರೆಕೆರೆ ಮುಖಾಂತರ ಮಾಗಡಿ ರಸ್ತೆಗೆ ಸಂಪರ್ಕ. ಆ ಮೂಲಕ ನೈಸ್ ರಸ್ತೆ ತಲುಪಿ ಮೈಸೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಹೊಸೂರು ಕಡೆ ಸಂಚರಿಸಬೇಕು.

3.ಬಳ್ಳಾರಿ ರಸ್ತೆ ಕಡೆಯಿಂದ ತುಮಕೂರು ರಸ್ತೆ ಕಡೆಗೆ ಸಂಚರಿಸುವ ವಾಹನಗಳು ದೇವನಹಳ್ಳಿ ಬಲ ತಿರುವು ಪಡೆದು ದೊಡ್ಡಬಳ್ಳಾಪುರ ರಸ್ತೆಯ ಮೂಲಕ ತುಮಕೂರು ಕಡೆಗೆ ಸಂಪರ್ಕ.

4.ಹೊಸಕೋಟೆಯಿಂದ ತುಮಕೂರು ಕಡೆಗೆ ಸಂಚರಿಸುವ ವಾಹನಗಳು ಬೂದಿಗೆರೆ ಕ್ರಾಸ್ ಮುಖಾಂತರ ದೇವನಹಳ್ಳಿ, ದೊಡ್ಡಬಳ್ಳಾಪುರ ಮೂಲಕ ಡಾಬಸ್ ಪೇಟೆ ಮೂಲಕ ತುಮಕೂರು ಕಡೆ ಸಂಚಾರ.

ಇದನ್ನೂ ಓದಿ | Modi In Karnataka : ಸೋಮವಾರ ದಿನಪೂರ್ತಿ ಮೋದಿ ಹವಾ: ಒಂದೇ ದಿನ ಆರು ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಪ್ರಧಾನಿ

Exit mobile version