ಮೈಸೂರು: ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಮಾ.12ರಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಉದ್ಘಾಟಿಸಲಿದ್ದಾರೆ. ಅಂದು ರೋಡ್ ಶೋಗೂ ಚಿಂತನೆ ನಡೆಸಿದ್ದು, ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದಾರೆ.
ಮಂಡಕಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಡ್ಯ ಬಳಿ ಗೆಜ್ಜೆಲೆಗೆರೆ ಹೈವೇಯಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ಲ್ಯಾಂಡ್ ಆಗಲಿದೆ. ಬಳಿಕ ಪಕ್ಕದಲ್ಲೇ ಸಾರ್ವಜನಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಅಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ರೋಡ್ ಶೋಗೆ ಅನುಮತಿ ಕೇಳಿದ್ದೇವೆ- ಪ್ರತಾಪ್
ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ನಡೆಸಲು ಅನುಮತಿಯನ್ನು ಕೇಳಿದ್ದೇವೆ. ಎಸ್‌ಪಿಜಿಯವರು ಅವಕಾಶ ನೀಡಿದರೆ ರೋಡ್ ಶೋ ಮಾಡುತ್ತೇವೆ. ಸದ್ಯ ಎಸ್‌ಪಿಜಿ ಅನುಮತಿಗಾಗಿ ಕಾಯುತ್ತಿದ್ದೇವೆ. ಮತ್ತೊಂದೆಡೆ ಮಂಡ್ಯ ನಗರದಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಿಸಿ, ಎರಡು ಕಿಲೋ ಮೀಟರ್ ರೋಡ್ ಶೋ ಮಾಡುವ ಯೋಚನೆ ಕೂಡ ಇದೆ. ಮುಂದಿನ ಎರಡು ದಿನಗಳಲ್ಲಿ ಅನುಮತಿ ನೀಡಬಹುದು ಎಂದು ಪ್ರತಾಪ್ ಸಿಂಹ ತಿಳಿಸಿದರು.
ಇದನ್ನೂ ಓದಿ: BJP Rathayatre: ಆದಿವಾಸಿ, ಶೋಷಿತರ ಪರ ಮೋದಿ ಸರ್ಕಾರ ಕೆಲಸ; ಇಲ್ಲಿಯ ಚಿತ್ರಣವನ್ನೇ ಬದಲಿಸಲು ಬಂದಿದ್ದೇನೆ: ಜೆ.ಪಿ. ನಡ್ಡಾ
ಹೆದ್ದಾರಿ ಸರ್ವಿಸ್ ರಸ್ತೆ ನಂತರ ಟೋಲ್ ಸಂಗ್ರಹ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ, ಹೆದ್ದಾರಿಯ ಸರ್ವಿಸ್ ರಸ್ತೆ ಬಗ್ಗೆ ಕೆಲವರು ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಮಾಡುವ ಕೆಲಸ ವಿಳಂಬವಾಗುತ್ತಿದೆ. ಸ್ಟೇ ತೆರವು ಬಗ್ಗೆ ವಕೀಲರ ಬಳಿ ಮಾತುಕತೆ ನಡೆಸಿದ್ದೇವೆ. ಆದಷ್ಟು ಬೇಗ ತಡೆಯಾಜ್ಞೆ ತೆರವುಗೊಳಿಸಿ ಸರ್ವಿಸ್ ರೋಡ್ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು.