Site icon Vistara News

ವಾರಕ್ಕೆ 70 ಗಂಟೆ ಕೆಲಸ; ಮೋದಿ ಉದಾಹರಣೆ ಕೊಟ್ಟು ಮೂರ್ತಿ ಹೇಳಿಕೆಗೆ ಉದ್ಯಮಿಗಳ ಬೆಂಬಲ

Narendra Modi And Narayana Murthy

PM Modi works 14-16 hrs daily: Some Industrialists Back Narayan Murthy's ‘70-hour work week' advice

ಬೆಂಗಳೂರು: “ದೇಶದ ಕ್ಷಿಪ್ರ ಏಳಿಗೆ ದೃಷ್ಟಿಯಿಂದಾಗಿ ಭಾರತದ ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು” ಎಂದು ಇನ್ಫೋಸಿಸ್‌ ಸಂಸ್ಥಾಪಕ ಎನ್‌.ಆರ್.ನಾರಾಯಣ ಮೂರ್ತಿ (N R Narayana Murthy) ಅವರು ನೀಡಿದ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಕೆಲ ಉದ್ಯಮಿಗಳು ಇನ್ಫಿ ಮೂರ್ತಿ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಅದರಲ್ಲೂ, ಪ್ರಾಧಾನಿ ನರೇಂದ್ರ ಮೋದಿ (Narendra Modi) ಅವರ ಕಾರ್ಯವೈಖರಿಯನ್ನು ಉದಾಹರಣೆ ನೀಡಿ ಮೂರ್ತಿ ಹೇಳಿಕೆ ಪರ ನಿಂತಿದ್ದಾರೆ.

ಜೆಎಸ್‌ಡಬ್ಲ್ಯೂ ಸ್ಟೀಲ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್‌ ಜಿಂದಾಲ್‌ ಅವರು ಮೂರ್ತಿ ಹೇಳಿಕೆಯನ್ನು ಬೆಂಬಲಿಸಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ಅವರು ನಿತ್ಯ 14-16 ಗಂಟೆ ಕೆಲಸ ಮಾಡುತ್ತಿದ್ದರು. ನನ್ನ ತಂದೆ ವಾರದ ಏಳು ದಿನವೂ 12-14 ಗಂಟೆ ಕೆಲಸ ಮಾಡುತ್ತಿದ್ದರು. ನಾನು ಪ್ರತಿದಿನ 10-12 ತಾಸು ಕೆಲಸ ಮಾಡುತ್ತೇನೆ. ದೇಶದ ಏಳಿಗೆಗೆ ಕೆಲಸ ಮಾಡುವ ಪ್ರವೃತ್ತಿ ನಮ್ಮಲ್ಲಿದೆ” ಎಂದು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುವ ಮೂಲಕ ಮೂರ್ತಿ ಹೇಳಿಕೆಯನ್ನು ಬೆಂಬಲಿಸಿದ್ದಾರೆ.

ಓಲಾ ಕಂಪನಿ ಸಿಇಒ ಭವಿಷ್‌ ಅಗರ್ವಾಲ್‌ ಅವರು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. “ನಾನು ನಾರಾಯಣಮೂರ್ತಿ ಅವರ ಅಭಿಪ್ರಾಯವನ್ನು ಸಂಪೂರ್ಣವಾಗಿ ಒಪ್ಪುತ್ತೇನೆ. ಬೇರೆ ದೇಶಗಳು ಹಲವು ಪೀಳಿಗೆಗಳಿಗೆ ಸಮೃದ್ಧ ದೇಶವನ್ನು ನಿರ್ಮಿಸುತ್ತಿರಬೇಕಾದರೆ, ನಾವೇಕೆ ಒಂದು ಪೀಳಿಗೆಗೆ ಪರಿಶ್ರಮದ ಮೂಲಕ ಬಲಿಷ್ಠ ದೇಶವನ್ನು ನಿರ್ಮಿಸಬಾರದು” ಎಂದು ಅವರು ಪೋಸ್ಟ್‌ ಮಾಡಿದ್ದಾರೆ.

ಮೂರ್ತಿ ಹೇಳಿಕೆ ಒಪ್ಪದ ಕೆಲ ಉದ್ಯಮಿಗಳು

ಇನ್ನು ಅಪ್‌ಗ್ರ್ಯಾಡ್‌ ಚೇರ್ಮನ್‌ ರೋನಿ ಸ್ಕ್ರ್ಯೂವಾಲಾ, ಹೈ-ಕಾಮ್‌ ನೆಟ್‌ವರ್ಕ್‌ನ ಸಿಇಒ ಸುಖಬೀರ್‌ ಸಿಂಗ್‌ ಭಾಟಿಯಾ, ಶ್ರೀ ಸಿಮೆಂಟ್‌ ಚೇರ್ಮನ್‌ ಹರಿ ಮೋಹನ್‌ ಬಂಗೂರ್‌ ಸೇರಿ ಹಲವು ಉದ್ಯಮಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡುವುದನ್ನು ಒಪ್ಪಿಲ್ಲ. “ನಾವು ಎಷ್ಟು ಗಂಟೆ ಕೆಲಸ ಮಾಡುತ್ತೇವೆ ಎನ್ನುವುದಕ್ಕಿಂತ, ಎಷ್ಟು ಸಮರ್ಥವಾಗಿ ಕೆಲಸ ಮಾಡುತ್ತೇವೆ ಎಂಬುದು ಮುಖ್ಯ. ಕೆಲಸ ಮಾಡುವುದು ಅವರ ಇಚ್ಛೆಗೆ ಬಿಟ್ಟಿದ್ದು. ಯಾರೂ ಇದನ್ನು ಹೇರಬಾರದು” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾರಾಯಣ ಮೂರ್ತಿ ಹೇಳಿದ್ದೇನು?

ಇನ್ಫೋಸಿಸ್‌ನ ಮಾಜಿ ಸಿಎಫ್ಒ ಮೋಹನ್‌ದಾಸ್ ಪೈ ಅವರೊಂದಿಗಿನ ಮಾತುಕತೆಯಲ್ಲಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರು, “ಭಾರತದ ಕೆಲಸದ ಉತ್ಪಾದಕತೆಯು ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ. ಚೀನಾದಂತಹ ದೇಶಗಳೊಂದಿಗೆ ಸ್ಪರ್ಧಿಸಲು, ಭಾರತದ ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕಾಗುತ್ತದೆ. ಎರಡನೇ ಮಹಾಯುದ್ಧದ ನಂತರ ಜಪಾನ್ ಮತ್ತು ಜರ್ಮನಿ ಯುವಕರು ಇದೇ ರೀತಿ ಮಾಡಿದ್ದರು” ಎಂದು ಹೇಳಿದ್ದರು.

ಇದನ್ನೂ ಓದಿ: Narayana Murthy: ವಾರಕ್ಕೆ 70 ತಾಸು ದುಡಿಯಿರಿ ಎಂದ ಇನ್ಫಿ ಮೂರ್ತಿ ವಿರುದ್ಧ ಆಕ್ರೋಶ!

“ಭಾರತದ ಕೆಲಸದ ಉತ್ಪಾದಕತೆಯು ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ. ನಾವು ನಮ್ಮ ಕೆಲಸದ ಉತ್ಪಾದಕತೆಯನ್ನು ಸುಧಾರಿಸದ ಹೊರತು, ನಾವು ಸರ್ಕಾರದಲ್ಲಿನ ಭ್ರಷ್ಟಾಚಾರವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡದ ಹೊರತು ನಾವು ಪ್ರಚಂಡ ಪ್ರಗತಿಯನ್ನು ಸಾಧಿಸಿದ ದೇಶಗಳೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ” ಎಂದು ಇನ್ಫೋಸಿಸ್ ನಾರಾಯಣಮೂರ್ತಿ ತಿಳಿಸಿದ್ದರು. ಆದಾಗ್ಯೂ, ನಾರಾಯಣ ಮೂರ್ತಿ ಅವರ ಹೇಳಿಕೆಯನ್ನು ಮತ್ತೊಂದಿಷ್ಟು ಜನ ಬೆಂಬಲಿಸಿದ್ದಾರೆ.

Exit mobile version